ಬಲವಂತದ ಕಾರ್ಮಿಕರ ಬಳಕೆಯ ಹಿನ್ನೆಲೆ: ಭಾರತ ಸೇರಿದಂತೆ ಹಲವು ದೇಶಗಳಿಂದ ಆಮದಾಗುವ ವಸ್ತುಗಳ ಮೇಲೆ ಶೇ. 10ರಷ್ಟು ಸುಂಕ ವಿಧಿಸಿದ ಅಮೆರಿಕ

Update: 2026-07-24 08:52 IST

ಡೊನಾಲ್ಡ್ ಟ್ರಂಪ್ | Photo Credit: PTI

ವಾಷಿಂಗ್ಟನ್: ಬಲವಂತದ ಕಾರ್ಮಿಕರ ಬಳಕೆಯಿಂದ ಉತ್ಪಾದಿಸಲಾದ ವಸ್ತುಗಳ ಸರಬರಾಜು ತಡೆಯುವ ಹಿನ್ನೆಲೆಯನ್ನಿಟ್ಟುಕೊಂಡು, ಭಾರತ ಸೇರಿದಂತೆ 16 ದೇಶಗಳಿಂದ ಆಮದಾಗುವ ವಸ್ತುಗಳ ಮೇಲೆ ಅಮೆರಿಕ ಶೇ. 10ರಷ್ಟು ಸುಂಕ ವಿಧಿಸಿದೆ.

ಅಮೆರಿಕದ 1974ರ ವ್ಯಾಪಾರ ಕಾಯ್ದೆಯ 'ಸೆಕ್ಷನ್ 301'ರ ಅಡಿಯಲ್ಲಿ ಹಲವು ದೇಶಗಳ ಮೇಲೆ ಹೊಸ ಸುಂಕಗಳನ್ನು ಯುನೈಟೆಡ್ ಸ್ಟೇಟ್ಸ್ ವ್ಯಾಪಾರ ಪ್ರತಿನಿಧಿ (ಯುಎಸ್‌ಟಿಆರ್) ಜೇಮಿಸನ್ ಗ್ರೀರ್ ಘೋಷಿಸಿದರು. ಎಲ್ಲಾ ದೇಶಗಳ ಮೇಲಿನ ಶೇ. 10ರಷ್ಟು ಹೆಚ್ಚುವರಿ ಸುಂಕಗಳ ಅವಧಿ ಮುಕ್ತಾಯಗೊಳ್ಳಲು ಒಂದು ದಿನ ಬಾಕಿ ಇರುವಾಗ ಈ ಘೋಷಣೆ ಹೊರಬಿದ್ದಿದೆ.

ಈ ಘೋಷಣೆಯಿಂದ ಭಾರತ, ಕೆನಡಾ, ಯುಕೆ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಸೇರಿದಂತೆ 16 ದೇಶಗಳಿಗೆ ಶೇಕಡಾ 10ರಷ್ಟು ಹಾಗೂ ಇತರ 43 ದೇಶಗಳಿಗೆ ಶೇಕಡಾ 12.5ರಷ್ಟು ಸುಂಕ ಅನ್ವಯಿಸುತ್ತದೆ.

ಇದಕ್ಕೂ ಮುನ್ನ, ಶೇಕಡಾ 12.5ರಷ್ಟು ಸುಂಕವನ್ನು ಎದುರಿಸುವ ದೇಶಗಳ ಪಟ್ಟಿಯಲ್ಲಿ ಭಾರತವನ್ನು ಸೇರಿಸಲಾಗಿತ್ತು.

ಯುಎಸ್‌ಟಿಆರ್ ನೀಡಿರುವ ಹೇಳಿಕೆಯ ಪ್ರಕಾರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ದೇಶನದಂತೆ ಗ್ರೀರ್ ಅವರು 1974ರ ವ್ಯಾಪಾರ ಕಾಯ್ದೆಯ ಸೆಕ್ಷನ್ 301ರ ಅಡಿಯಲ್ಲಿ ಅಂತಿಮ ಕ್ರಮ ಕೈಗೊಂಡಿದ್ದಾರೆ. ಬಲವಂತದ ಕಾರ್ಮಿಕರ ಬಳಕೆಯಿಂದ ಉತ್ಪಾದಿಸಲಾದ ವಸ್ತುಗಳ ಆಮದನ್ನು ನಿಷೇಧಿಸುವಲ್ಲಿ ಮತ್ತು ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ವಿಫಲವಾಗಿರುವ ದೇಶಗಳ ಮೇಲೆ ಈ ಸುಂಕಗಳನ್ನು ವಿಧಿಸಲಾಗಿದೆ.

"ಈ ಕ್ರಮವು ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ವ್ಯಾಪಾರದ ಮೇಲಿನ ಅಸಮಾನ ಪರಿಣಾಮಗಳೆರಡನ್ನೂ ಸರಿಪಡಿಸಲು ಹಾಗೂ ಜಾಗತಿಕವಾಗಿ ಕಾರ್ಮಿಕರ ಕಲ್ಯಾಣವನ್ನು ಸುಧಾರಿಸಲು ನೆರವಾಗಲಿದೆ" ಎಂದು ಗ್ರೀರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜೂನ್ 14ರಂದು, ಭಾರತವು ತನ್ನ ವಿದೇಶಿ ವ್ಯಾಪಾರ ನೀತಿಗೆ ತಿದ್ದುಪಡಿ ತಂದು ಬಂಧಿತ ಕಾರ್ಮಿಕರನ್ನು ಬಳಸಿ ತಯಾರಿಸಿದ ವಸ್ತುಗಳ ಆಮದನ್ನು ನಿಷೇಧಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News