ಜೋರ್ಡಾನ್‌ನ ಅಮೆರಿಕ ವಾಯುನೆಲೆ ಮೇಲೆ ಇರಾನ್ ಡ್ರೋನ್ ದಾಳಿ: ಭಾರತೀಯ ಮೂಲದ ಅಮೆರಿಕ ಸೇನಾ ಸಿಬ್ಬಂದಿ ಮೃತಪಟ್ಟಿರುವ ಸಾಧ್ಯತೆ
ಏಂಜೆಲಾ ರಾಂಪರ್ಸಾದ್ Photo: x.com/jaketapper
ನ್ಯೂಯಾರ್ಕ್, ಜು.23: ಜೋರ್ಡಾನ್‌ನ ಮುವಾಫಾಕ್ ಸಾಲ್ಟಿ ವಾಯುನೆಲೆ ಮೇಲೆ ಜುಲೈ 17ರಂದು ಇರಾನ್ ನಡೆಸಿದ ಡ್ರೋನ್ ದಾಳಿಯಲ್ಲಿ ಕಾಣೆಯಾಗಿದ್ದ ಭಾರತೀಯ ಮೂಲದ ಅಮೆರಿಕ ಸೇನಾ ಸಿಬ್ಬಂದಿ ಏಂಜೆಲಾ ರಾಂಪರ್ಸಾದ್ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಅಮೆರಿಕದ ಯುದ್ಧ ಇಲಾಖೆ (ಪೆಂಟಗನ್) ತಿಳಿಸಿದೆ. ಆದರೆ, ಅವರ ಸಾವಿನ ಕುರಿತು ತನಿಖೆ ಮುಂದುವರಿದಿದೆ ಎಂದು ಹೇಳಿದೆ.
25 ವರ್ಷದ ಏಂಜೆಲಾ ರಾಂಪರ್ಸಾದ್ ಅವರನ್ನು ದಾಳಿಯ ಬಳಿಕ ಕಾಣೆಯಾಗಿದ್ದಾರೆ ಎಂದು ಪಟ್ಟಿ ಮಾಡಲಾಗಿತ್ತು. ಇದೀಗ ಅವರು 'ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ; ಮೃತಪಟ್ಟಿದ್ದಾರೆ ಎಂದು ನಂಬಲಾಗಿದೆ' (Duty Status–Whereabouts Unknown and Presumed Deceased) ಎಂದು ಪರಿಷ್ಕರಿಸಲಾಗಿದೆ ಎಂದು ಪೆಂಟಗನ್ ಪ್ರಕಟನೆಯಲ್ಲಿ ತಿಳಿಸಿದೆ.
ರಾಂಪರ್ಸಾದ್ ಅವರು ಗಯಾನಾದಿಂದ ಅಮೆರಿಕಕ್ಕೆ ವಲಸೆ ಬಂದ ಭಾರತೀಯ ಮೂಲದ ಕುಟುಂಬದವರಾಗಿದ್ದು, ಅವರ ತಂದೆ ಬಾಸ್ಡಿಯೊ ರಾಂಪರ್ಸಾದ್ ಸ್ಥಳೀಯ ಡೆಮಾಕ್ರಟಿಕ್ ಪಕ್ಷದ ನಾಯಕರಾಗಿದ್ದಾರೆ. ನ್ಯೂಯಾರ್ಕ್ ನಗರದ ಕ್ವೀನ್ಸ್ ಬರೋದ ಓಝೋನ್ ಪಾರ್ಕ್ ನಿವಾಸಿಯಾಗಿದ್ದ ಅವರು, ಭಾರತೀಯ ಮೂಲದ ಗಯಾನೀಸ್ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಪ್ರದೇಶದವರಾಗಿದ್ದರು ಎಂದು ಪೆಂಟಗನ್ ತಿಳಿಸಿದೆ.
ಡೆಮಾಕ್ರಟಿಕ್ ಪಕ್ಷದ ನಾಯಕಿ ಪೆಸಾಚ್ ಒಸಿನಾ, ರಾಂಪರ್ಸಾದ್ ಅವರನ್ನು ಪರಿಚಯವಿದ್ದ ಪ್ರತಿಯೊಬ್ಬರಿಗೂ ಅವರು ಅತ್ಯಂತ ಆತ್ಮೀಯರಾಗಿದ್ದರು ಎಂದು ಹೇಳಿದ್ದಾರೆ. ದೇಶಕ್ಕೆ ಸೇವೆ ಸಲ್ಲಿಸಲು, ಇತರರನ್ನು ರಕ್ಷಿಸಲು ಹಾಗೂ ಧೈರ್ಯ ಮತ್ತು ವಿನಮ್ರತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಲು ಅವರು ಸದಾ ಬಯಸುತ್ತಿದ್ದರು ಎಂದು ತಿಳಿಸಿದ್ದಾರೆ.
ರಾಂಪರ್ಸಾದ್ ಅವರ ಕುಟುಂಬ ವಾಸಿಸುವ ರಾಜ್ಯ ವಿಧಾನಸಭಾ ಕ್ಷೇತ್ರದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಒಸಿನಾ, ದುರಂತದ ಬಳಿಕ ಅವರ ತಂದೆ ಬಾಸ್ಡಿಯೊ ರಾಂಪರ್ಸಾದ್, ತಾಯಿ ಕರೋಲ್ ಅಸೆವೆಡೊ ಸೇರಿದಂತೆ ಕುಟುಂಬದ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು Xನಲ್ಲಿ ತಿಳಿಸಿದ್ದಾರೆ.
ಜುಲೈ 17ರ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ದೃಢಪಡಿಸಲಾದ ಹಾಗೂ ಮೃತಪಟ್ಟಿದ್ದಾರೆ ಎಂದು ನಂಬಲಾಗಿರುವ ಅಮೆರಿಕ ಸೇನಾ ಸಿಬ್ಬಂದಿಯ ಸಾವಿಗೆ ಸೇಡು ತೀರಿಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
"ಈ ದಾಳಿಗೆ ಇರಾನ್ ದೊಡ್ಡ ಬೆಲೆ ತೆರಬೇಕಾಗುತ್ತದೆ" ಎಂದು ಅವರು ಬುಧವಾರ ಎಚ್ಚರಿಕೆ ನೀಡಿದ್ದಾರೆ. ಇದಕ್ಕೂ ಮೊದಲು ಟ್ರುತ್ ಸೋಶಿಯಲ್‌ನಲ್ಲಿ, "ಪ್ರತಿ ಬಾರಿ ಒಬ್ಬ ಅಮೆರಿಕನ್ ಸೈನಿಕನನ್ನು ಇರಾನ್ ಕೊಂದಾಗ, ಆ ಹತ್ಯೆಗೆ ಹಲವು ಪಟ್ಟು ಬೆಲೆ ತೆರಬೇಕಾಗುತ್ತದೆ" ಎಂದು ಬರೆದಿದ್ದರು.
ರಾಂಪರ್ಸಾದ್ ಅವರ ಸಾವು ಅಧಿಕೃತವಾಗಿ ದೃಢಪಟ್ಟರೆ, ಕಳೆದ ತಿಂಗಳು ಅಮೆರಿಕ ಮತ್ತು ಇರಾನ್ ನಡುವಿನ ತಿಳುವಳಿಕೆ ಒಪ್ಪಂದ ಮುರಿದ ಬಳಿಕ ಮತ್ತೆ ತೀವ್ರಗೊಂಡಿರುವ ಸಂಘರ್ಷದ ನಡುವೆ ಜೋರ್ಡಾನ್‌ನ ಮುವಾಫಾಕ್ ಸಾಲ್ಟಿ ವಾಯುನೆಲೆ ಮೇಲಿನ ದಾಳಿಯಲ್ಲಿ ಮೃತಪಟ್ಟ ನಾಲ್ಕನೇ ಅಮೆರಿಕ ಸೇನಾ ಸಿಬ್ಬಂದಿಯಾಗಲಿದ್ದಾರೆ.
ಫೆಬ್ರವರಿಯಲ್ಲಿ ಇಸ್ರೇಲ್ ಮತ್ತು ಅಮೆರಿಕ ಇರಾನ್ ನಾಯಕತ್ವದ ಮೇಲೆ ವಾಯುದಾಳಿ ಆರಂಭಿಸಿದ ಬಳಿಕ ಸಂಘರ್ಷ ತೀವ್ರಗೊಂಡಿದ್ದು, ಇದುವರೆಗೆ 18 ಅಮೆರಿಕ ಸೇನಾ ಸಿಬ್ಬಂದಿ ಮೃತಪಟ್ಟಿರುವುದು ದೃಢಪಟ್ಟಿದೆ.
ಜರ್ಮನಿಯ ಅನ್ಸ್‌ಬಾಚ್‌ನ 10ನೇ ಸೇನಾ ವಾಯು ಮತ್ತು ಕ್ಷಿಪಣಿ ರಕ್ಷಣಾ ಕಮಾಂಡ್‌ಗೆ ನಿಯೋಜಿತರಾಗಿದ್ದ ರಾಂಪರ್ಸಾದ್, ಜೋರ್ಡಾನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಇರಾನ್ ಮುವಾಫಾಕ್ ಸಾಲ್ಟಿ ವಾಯುನೆಲೆಯ ಮೇಲೆ ಡ್ರೋನ್‌ಗಳ ಮೂಲಕ ದಾಳಿ ನಡೆಸಿದಾಗ ಅಲ್ಲಿಯೇ ಇದ್ದರು. ದಾಳಿಯ ಬಳಿಕ ಅವರು ಕಾಣೆಯಾಗಿದ್ದು, ಇದೀಗ ಮೃತಪಟ್ಟಿದ್ದಾರೆ ಎಂದು ನಂಬಲಾಗಿದೆ ಎಂದು ಪೆಂಟಗನ್ ತಿಳಿಸಿದೆ.