×
Ad

Iran ನಲ್ಲಿನ ಹಿಂಸಾಚಾರದಲ್ಲಿ ಮೃತರ ಸಂಖ್ಯೆ 116ಕ್ಕೆ ಏರಿಕೆ: ವರದಿ

Update: 2026-01-11 12:01 IST

 Photo: Unsplash

ಟೆಹ್ರಾನ್: ಇರಾನ್‌ ನ ಧಾರ್ಮಿಕ ಪ್ರಭುತ್ವದ ವಿರುದ್ಧ ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಹೋರಾಟದ ವೇಳೆ ಭುಗಿಲೆದ್ದ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 116 ಮಂದಿ ಮೃತಪಟ್ಟಿದ್ದಾರೆ ಎಂದು ಹೋರಾಟಗಾರರು ತಿಳಿಸಿದ್ದಾರೆ.

ಇರಾನ್‌ ನಲ್ಲಿ ಅಂತರ್ಜಾಲ ಸಂಪರ್ಕವನ್ನು ಕಡಿತಗೊಳಿಸಿ, ಫೋನ್ ಸಂಪರ್ಕಗಳನ್ನೂ ತುಂಡರಿಸಿರುವುದರಿಂದ, ಅಲ್ಲಿನ ಹೋರಾಟದ ತೀವ್ರತೆಯನ್ನು ಅಳೆಯುವುದು ಕ್ಲಿಷ್ಟಕರವಾಗಿದೆ. ಆದರೆ, ಅಮೆರಿಕಾ ಮೂಲದ ಮಾನವ ಹಕ್ಕುಗಳ ಹೋರಾಟಗಾರರ ಸುದ್ದಿ ಸಂಸ್ಥೆಯೊಂದರ ಪ್ರಕಾರ, ಈ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 116ಕ್ಕೆ ಏರಿಕೆಯಾಗಿದ್ದು, 2,600ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಈ ಹಿಂದೆ ಇರಾನ್‌ ನಲ್ಲಿ ಹಲವು ಬಾರಿ ಭುಗಿಲೆದ್ದಿದ್ದ ಪ್ರಕ್ಷುಬ್ಧತೆಯ ಸಂದರ್ಭಗಳಲ್ಲೂ ಈ ಸುದ್ದಿ ಸಂಸ್ಥೆ ನಿಖರ ಮಾಹಿತಿಯನ್ನು ನೀಡಿತ್ತು.

ಈ ಪ್ರತಿಭಟನೆಯ ವೇಳೆ ಭದ್ರತಾ ಸಿಬ್ಬಂದಿಯ ಸಾವು-ನೋವಿನ ಕುರಿತು ವರದಿ ಮಾಡುತ್ತಿರುವ ಇರಾನ್‌ ನ ಸರಕಾರಿ ಸುದ್ದಿ ಸಂಸ್ಥೆ, ಇಡೀ ದೇಶ ನಿಯಂತ್ರಣದಲ್ಲಿದೆ ಎಂದು ಬಿಂಬಿಸುತ್ತಿದೆ. ಆದರೆ, ಪ್ರತಿಭಟನಾಕಾರರ ಸಾವು-ನೋವುಗಳ ಕುರಿತು ಯಾವುದೇ ಚರ್ಚೆ ನಡೆಸುತ್ತಿಲ್ಲ.

ಹೀಗಿದ್ದರೂ, ರವಿವಾರ ಬೆಳಗ್ಗೆಯೂ ಪ್ರತಿಭಟನೆಗಳು ನಡೆಯುತ್ತಿರುವುದನ್ನು ಈ ಸುದ್ದಿ ಸಂಸ್ಥೆ ಒಪ್ಪಿಕೊಂಡಿದ್ದು, ಟೆಹ್ರಾನ್ ಹಾಗೂ ಇರಾನ್‌ ನ ಈಶಾನ್ಯ ಭಾಗದಲ್ಲಿರುವ ಪವಿತ್ರ ಮಾಶಾದ್ ನಗರದಲ್ಲೂ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಹೇಳಿದೆ.

ಅಮೆರಿಕದ ಎಚ್ಚರಿಕೆಯ ಹೊರತಾಗಿಯೂ, ಪ್ರತಿಭಟನಾಕಾರರ ಮೇಲೆ ಪ್ರಹಾರ ನಡೆಸುವ ಸುಳಿವನ್ನು ಇರಾನ್‌ ನ ಸರ್ವೋಚ್ಚ ನಾಯಕ ಅಯತುಲ್ಲಾ ಅಲಿ ಖಾಮಿನೈ ನೀಡಿದ್ದಾರೆ. ಶನಿವಾರ ಪ್ರತಿಭಟನಾಕಾರರ ವಿರುದ್ಧ ಬೆದರಿಕೆಯನ್ನು ಇರಾನ್ ಮತ್ತಷ್ಟು ತೀವ್ರಗೊಳಿಸಿದೆ. “ಯಾರಾದರೂ ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ಅಂಥವರನ್ನು ದೇವರ ವೈರಿ ಎಂದು ಪರಿಗಣಿಸಲಾಗುವುದು ಹಾಗೂ ಅಂಥವರೆಲ್ಲರಿಗೂ ಮರಣದಂಡನೆ ವಿಧಿಸಲಾಗುವುದು” ಎಂದು ಇರಾನ್‌ ನ ಅಟಾರ್ನಿ ಜನರಲ್ ಮುಹಮ್ಮದ್ ಮೊವಹೇದಿ ಆಝಾದ್ ಕಠಿಣ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News