ಭಾರತವು ಪಾಕ್ ಮೇಲೆ ದಾಳಿ ನಡೆಸಿದರೆ ಬಾಂಗ್ಲಾದೇಶ ಈಶಾನ್ಯವನ್ನು ಆಕ್ರಮಿಸಿಕೊಳ್ಳಬೇಕು: ಬಾಂಗ್ಲಾದ ನಿವೃತ್ತ ಸೇನಾಧಿಕಾರಿಯ ಹೇಳಿಕೆ
PC : PTI
ಢಾಕಾ: ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ನೆಪವಾಗಿಸಿಕೊಂಡು ಒಂದು ವೇಳೆ ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿದರೆ ಬಾಂಗ್ಲಾದೇಶವು ಭಾರತದ ಈಶಾನ್ಯ ರಾಜ್ಯಗಳನ್ನು ಆಕ್ರಮಿಸಿಕೊಳ್ಳಬೇಕು ಎಂದು ಬಾಂಗ್ಲಾದ ನಿವೃತ್ತ ಸೇನಾಧಿಕಾರಿ, ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರಕ್ಕೆ ನಿಕಟವಾಗಿರುವ ಮೇ| ಜ| ಫಜ್ಲೂರ್ ರಹಮಾನ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.
ಬಾಂಗ್ಲಾದ ಗಡಿಭದ್ರತಾ ಪಡೆಯ ಮಾಜಿ ಮುಖ್ಯಸ್ಥರಾಗಿರುವ ರಹಮಾನ್ ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಪೋಸ್ಟ್ ನಲ್ಲಿ `ಬಾಂಗ್ಲಾವು ಜಂಟಿ ಮಿಲಿಟರಿ ವ್ಯವಸ್ಥೆಗಾಗಿ ಚೀನಾದೊಂದಿಗೆ ಮಾತುಕತೆಯನ್ನು ಆರಂಭಿಸಬೇಕು' ಎಂದಿದ್ದಾರೆ. ಒಂದು ವೇಳೆ ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಬಾಂಗ್ಲಾವು ಈಶಾನ್ಯ ಭಾರತದ 7 ರಾಜ್ಯಗಳನ್ನು ಆಕ್ರಮಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಂಟಿ ಮಿಲಿಟರಿ ವ್ಯವಸ್ಥೆಗಾಗಿ ಚೀನಾದೊಂದಿಗೆ ಮಾತುಕತೆಯನ್ನು ಆರಂಭಿಸಬೇಕು ಎಂದಿದ್ದಾರೆ.
ರಹಮಾನ್ ಹೇಳಿಕೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಖಂಡನೆ, ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಾಂಗ್ಲಾ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರರ ಕಚೇರಿಯ ಪತ್ರಿಕಾ ಕಾರ್ಯದರ್ಶಿ ಶಫೀಕುಲ್ ಅಲಾಮ್ ` ರಹಮಾನ್ ಅವರ ಹೇಳಿಕೆ ವೈಯಕ್ತಿಕವಾದದ್ದು. ಅವರ ನಿಲುವು ಮಧ್ಯಂತರ ಸರಕಾರದ ನಿಲುವಲ್ಲ. ಬಾಂಗ್ಲಾದೇಶವು ಎಲ್ಲಾ ರಾಷ್ಟ್ರಗಳ ಸಾರ್ವಭೌಮತೆ ಮತ್ತು ಸ್ವಾತಂತ್ರ್ಯವನ್ನು ಗೌರವಿಸುತ್ತದೆ ಮತ್ತು ಇದನ್ನೇ ಇತರರಿಂದಲೂ ನಿರೀಕ್ಷಿಸುತ್ತದೆ. ರಹಮಾನ್ ಅವರ ಹೇಳಿಕೆಯ ವಿವಾದದಲ್ಲಿ ಬಾಂಗ್ಲಾ ಸರಕಾರವನ್ನು ಎಳೆಯಬಾರದು' ಎಂದು ಪೋಸ್ಟ್ ಮಾಡಿದ್ದಾರೆ.