81 ದೇಶಗಳಿಂದ 24,600 ಭಾರತೀಯರು ಗಡೀಪಾರು; ಅಗ್ರಸ್ಥಾನದಲ್ಲಿ ಸೌದಿ ಅರೇಬಿಯಾ
ಸಾಂದರ್ಭಿಕ ಚಿತ್ರ PC: istockphoto
ಹೈದರಾಬಾದ್: ವಿಶ್ವಾದ್ಯಂತ 81 ದೇಶಗಳು 2025ರಲ್ಲಿ 24,600 ಮಂದಿ ಭಾರತೀಯರನ್ನು ಗಡೀಪಾರು ಮಾಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ರಾಜ್ಯಸಭೆಯಲ್ಲಿ ಇತ್ತೀಚೆಗೆ ನೀಡಿದ ಮಾಹಿತಿಯಿಂದ ತಿಳಿದುಬಂದಿವೆ. ಕಳೆದ ಹನ್ನೆರಡು ತಿಂಗಳಲ್ಲಿ 11 ಸಾವಿರಕ್ಕೂ ಹೆಚ್ಚು ಮಂದಿ ಭಾರತೀಯರನ್ನು ಗಡೀಪಾರು ಮಾಡಿರುವ ಸೌದಿಅರೇಬಿಯಾ ಈ ವಿಚಾರದಲ್ಲಿ ಅಗ್ರಸ್ಥಾನದಲ್ಲಿದೆ.
ಅಮೆರಿಕದಿಂದ ಭಾರತೀಯರ ಗಡೀಪಾರು ದೊಡ್ಡ ಸುದ್ದಿಯಾಗಿತ್ತು. ಆದರೆ ಸೌದಿ ಅರೇಬಿಯಾದಿಂದ ಗಡೀಪಾರಾದವರ ಸಂಖ್ಯೆಗೆ ಹೋಲಿಸಿದರೆ, ಅಮೆರಿಕದಿಂದ 2025ರಲ್ಲಿ 3800 ಮಂದಿ ಭಾರತೀಯರು ಗಡೀಪಾರಾಗಿದ್ದಾರೆ. ಇವರಲ್ಲಿ ಖಾಸಗಿ ಉದ್ಯೋಗಿಗಳೇ ಅಧಿಕ. ಕಳೆದ ಐದು ವರ್ಷದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಅಮೆರಿಕದಿಂದ ಗಡೀಪಾರು ಮಾಡಲಾಗಿದೆ ಎಂದು ವರದಿ ಹೇಳಿದೆ.
ಟ್ರಂಪ್ ಆಡಳಿತದಿಂದ ಅಕ್ರಮ ವಲಸೆ ವಿರುದ್ಧ ಕಾರ್ಯಾಚರಣೆ, ದಾಖಲೆಗಳ ಪರಿಶೀಲನೆ ಹೆಚ್ಚಳ, ವೀಸಾ ಸ್ಥಿತಿಗತಿ, ಉದ್ಯೋಗ ದೃಢೀಕರಣ, ಅವಧಿ ಮೀರಿ ವಾಸವಿರುವುದು ಇದಕ್ಕೆ ಮುಖ್ಯ ಕಾರಣ ಎಂದ ತಜ್ಞರು ಹೇಳಿದ್ದಾರೆ.
ಅಮೆರಿಕದಿಂದ ಅತಿಹೆಚ್ಚು ಅಂದರೆ 3414 ಮಂದಿಯನ್ನು ವಾಷಿಂಗ್ಟನ್ ಡಿಸಿಯಿಂದ ಗಡೀಪಾರು ಮಾಡಲಾಗಿದೆ. 234 ಮಂದಿಯನ್ನು ಗಡೀಪಾರು ಮಾಡಿರುವ ಹೂಸ್ಟನ್ ಎರಡನೇ ಸ್ಥಾನದಲ್ಲಿದೆ.
ಸೌದಿಅರೇಬಿಯಾ ಮತ್ತು ಅಮೆರಿಕವನ್ನು ಹೊರತುಪಡಿಸಿ ವಿಶ್ವಾದ್ಯಂತ ಭಾರತೀಯರನ್ನು ಹೆಚ್ಚು ಗಡೀಪಾರು ಮಾಡಿರುವ ದೇಶಗಳೆಂದರೆ ಮ್ಯಾನ್ಮಾರ್ (1591), ಯುಎಇ (1469), ಬಹರೈನ್ (764), ಮಲೇಷ್ಯಾ (1485), ಥಾಯ್ಲೆಂಡ್ (481) ಮತ್ತು ಕಾಂಬೋಡಿಯಾ (305). ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಗಡೀಪಾರಿಗೆ ಅದರಲ್ಲೂ ಮುಖ್ಯವಾಗಿ ಗಲ್ಫ್ ದೇಶಗಳಿಂದ ಗಡೀಪಾರಿಗೆ ಮುಖ್ಯ ಕಾರಣ ಎಂದರೆ ವೀಸಾ ಅವಧಿ ಮುಗಿದು ವಾಸ್ತವ್ಯ ಇರುವುದು ಹಾಗೂ ಅಧಿಕೃತ ಉದ್ಯೋಗ ಪರವಾನಗಿ ಇಲ್ಲದೇ ಕೆಲಸ ಮಾಡುತ್ತಿರುವುದು, ಕಾರ್ಮಿಕ ನಿಬಂಧನೆಗಳ ಉಲ್ಲಂಘನೆ, ಉದ್ಯೋಗದಾತರಿಂದ ತಲೆಮರೆಸಿಕೊಂಡಿರುವುದು ಹಾಗೂ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಷಾಮೀಲಾಗಿರುವುದು.