×
Ad

Dehradun | ಜನಾಂಗೀಯ ದಾಳಿಯಲ್ಲಿ ತ್ರಿಪುರಾದ BSF ಯೋಧನ ಮಗ MBA ವಿದ್ಯಾರ್ಥಿ ಮೃತ್ಯು

Update: 2025-12-27 20:44 IST

ಅಂಜೆಲ್ ಚಕ್ಮಾ | Photo Credit : news.abplive.com

ಡೆಹ್ರಾಡೂನ್,ಡಿ.27: ಉತ್ತರಾಖಂಡದ ಡೆಹ್ರಾಡೂನ್‌ ನಲ್ಲಿ ಐವರ ಗುಂಪಿನಿಂದ ಚೂರಿ ಇರಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ತ್ರಿಪುರಾದ 24ರ ಹರೆಯದ ವಿದ್ಯಾರ್ಥಿಯೋರ್ವ 18 ದಿನಗಳ ಜೀವನ್ಮರಣ ಹೋರಾಟದ ಬಳಿಕ ಮೃತಪಟ್ಟಿರುವುದಾಗಿ ಪೋಲಿಸರು ತಿಳಿಸಿದ್ದಾರೆ.

ಆರೋಪಿಗಳು ಡಿ.9ರಂದು ಇಲ್ಲಿಯ ಖಾಸಗಿ ವಿವಿಯಲ್ಲಿ ಎಂಬಿಎ ಓದುತ್ತಿದ್ದ ಅಂಜೆಲ್ ಚಕ್ಮಾರ ಮೇಲೆ ಹಲ್ಲೆ ನಡೆಸಿ ಚೂರಿಯಿಂದ ಇರಿದಿದ್ದರು. ಇದಕ್ಕೂ ಮುನ್ನ ಆರೋಪಿಗಳು ಅಂಜೆಲ್ ಮತ್ತು ಅವರ ಸೋದರ ಮೈಕೆಲ್ ಚಕ್ಮಾ ಅವರಿಗೆ ಜನಾಂಗೀಯ ನಿಂದನೆಯನ್ನು ಮಾಡಿದ್ದರು.

ಮೈಕೆಲ್ ತಲೆಗೆ ಗಾಯವಾಗಿದ್ದರೆ, ತೀವ್ರವಾಗಿ ಗಾಯಗೊಂಡಿದ್ದ ಅಂಜೆಲ್ ಶುಕ್ರವಾರ ಬೆಳಿಗ್ಗೆ ಇಲ್ಲಿಯ ಗ್ರಾಫಿಕ್ ಇರಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೈಕೆಲ್ ದೂರಿನ ಮೇರೆಗೆ ಕೊಲೆ ಯತ್ನ ಆರೋಪದಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೋಲಿಸರು ಡಿ.14ರಂದು ಐವರು ಆರೋಪಿಗಳನ್ನು ಬಂಧಿಸಿದ್ದರು. ಅಂಜೆಲ್ ಸಾವಿನ ಬಳಿಕ ಈಗ ಕೊಲೆ ಆರೋಪವನ್ನು ಸೇರಿಸಲಾಗಿದೆ.

ಆರೋಪಿಗಳಾದ ಅವಿನಾಶ್ ನೇಗಿ, ಶೌರ್ಯ ರಾಜಪೂತ್, ಸೂರಜ್ ಖವಾಸ್, ಸುಮಿತ್ ಮತ್ತು ಆಯುಷ್ ಬದೋನಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತ್ರಿಪುರಾದ ಉನಕೋಟಿ ಜಿಲ್ಲೆಯ ನಿವಾಸಿಗಳಾದ ಚಕ್ಮಾ ಸೋದರರು ಡಿ.9ರಂದು ಸಂಜೆ ಕೆಲವು ವಸ್ತುಗಳ ಖರೀದಿಗೆ ತೆರಳಿದ್ದರು. ಈ ವೇಳೆ ಪಾನಮತ್ತರಾಗಿದ್ದ ಆರೋಪಿಗಳು ಅವರಿಗೆ ಜಾತಿ ಮತ್ತು ಜನಾಂಗೀಯ ನಿಂದನೆಯನ್ನು ಮಾಡಿದ್ದರು. ಸೋದರರು ಪ್ರತಿರೋಧಿಸಿದಾಗ ಗುಂಪು ಅವರ ಮೇಲೆ ಚೂರಿ ಮತ್ತು ಕೈಗೆ ಧರಿಸುವ ಲೋಹದ ಕಡಗದಿಂದ ದಾಳಿ ನಡೆಸಿದ್ದರು.

ಆರೋಪಿಗಳು ಕಡಗದಿಂದ ಮೈಕೆಲ್ ತಲೆಗೆ ಹೊಡೆದಿದ್ದು,ದಾಳಿಯನ್ನು ತಡೆಯಲು ಮಧ್ಯಪ್ರವೇಶಿಸಿದ್ದ ಅಂಜೆಲ್‌ರ ತಲೆ ಮತ್ತು ಹೊಟ್ಟೆಗೆ ಚೂರಿಯಿಂದ ಇರಿದಿದ್ದರು. ಘಟನೆಯ ಕುರಿತು ಪೋಲಿಸರಿಗೆ ಮಾಹಿತಿ ನೀಡಿದರೆ ಇಬ್ಬರನ್ನೂ ಕೊಲ್ಲುವುದಾಗಿ ಆರೋಪಿಗಳು ಎಚ್ಚರಿಕೆಯನ್ನು ನೀಡಿದ್ದರು ಎಂದೂ ದೂರಿನಲ್ಲಿ ತಿಳಿಸಲಾಗಿದೆ.

ಮದ್ಯದಂಗಡಿಯಲ್ಲಿ ಮದ್ಯ ಖರೀದಿಸುವಾಗ ತಮ್ಮ ಮತ್ತು ಚಕ್ಮಾ ಸೋದರರ ನಡುವೆ ವಾಗ್ವಾದ ನಡೆದಿತ್ತು ಎಂದು ಆರೋಪಿಗಳು ವಿಚಾರಣೆ ಸಂದರ್ಭದಲ್ಲಿ ಬಾಯಿ ಬಿಟ್ಟಿದ್ದು,ಈ ವಿವಾದದ ಬಳಿಕ ಅವರ ಮೇಲೆ ದಾಳಿ ನಡೆಸಿದ್ದರು ಎಂದು ಪೋಲಿಸರು ತಿಳಿಸಿದರು.

ಚಕ್ಮಾ ಸೋದರರ ತಂದೆ ಬಿಎಸ್‌ಎಫ್ ಯೋಧರಾಗಿದ್ದು,ಈಶಾನ್ಯ ಭಾರತದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News