×
Ad

ಬೆತ್ಲೆಹೆಮ್ ಚರ್ಚ್ ಕ್ರಿಸ್‍ಮಸ್‍ಗೆ ಈ ಬಾರಿ ಗಾಝಾ ಅವಶೇಷಗಳ ಅಲಂಕಾರ!

Update: 2023-12-06 11:59 IST

Photo:X/@MuntherIsaac

ಗಾಝಾ: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಿಂದ ಕಂಗೆಟ್ಟಿರುವ ಆಕ್ರಮಿತ ಪಶ್ಚಿಮದಂಡೆಯ ಕೇಂದ್ರಭಾಗದಲ್ಲಿರುವ ಬೆತ್ಲೆಹೆಮ್ ಚರ್ಚ್‍ನ ಈ ಬಾರಿಯ ಕ್ರಿಸ್‍ಮಸ್ ಅಲಂಕಾರ ದಿಟ್ಟ ಅಭಿವ್ಯಕ್ತಿಯಾಗಿದೆ. ಸಾಂಪ್ರದಾಯಿಕವಾಗಿ ಮಿನುಗುವ ದೀಪ, ಹಬ್ಬದ ವಿಶೇಚವಾದ ಕ್ರಿಸ್‍ಮಸ್ ಟ್ರೀ ಇಲ್ಲವೇ ನಳನಳಿಸುವ ಅಲಂಕರಣದ ಬದಲಾಗಿ, ಗಾಝಾ ಜನರ ಸಂಘರ್ಷದ ಕರಾಳ ಅನುಭವ ಬಿಂಬಿಸುವ ಉದ್ದೇಶದಿಂದ ದಾಳಿಯ ಅವಶೇಷಗಳಿಂದ ಕ್ರಿಸ್‍ಮಸ್ ಅಲಂಕಾರ ಮಾಡಲಾಗಿದೆ ಎಂದು bnn.network ವರದಿ ಮಾಡಿದೆ.

ಈ ಚರ್ಚ್‍ನ ಅಪರೂಪದ ಕ್ರಿಸ್‍ಮಸ್ ಪ್ರದರ್ಶನದಲ್ಲಿ ಈ ಬಾರಿ ಕಾಂಕ್ರೀಟ್ ತುಂಡುಗಳ ದಿಬ್ಬ ವಿಶೇಷ ಆಕರ್ಷಣೆಯಾಗಿದ್ದು, ಧ್ವಂಸಗೊಂಡ ಕಟ್ಟಡಗಳ ಅವಶೇಷಗಳನ್ನು ಇದು ಸಾಂಕೇತಿಸುತ್ತದೆ. ಇದರ ಕೇಂದ್ರ ಭಾಗದಲ್ಲಿ ಆಟಿಕೆ ಮಗುವಿನ ಚಿತ್ರಣವಿದ್ದು, ಈ ಅವಶೇಷಗಳ ಅಡಿಯಲ್ಲಿ ಪುಟ್ಟ ಕಂದ ಸಿಲುಕಿಕೊಂಡಿರುವುದ ಅಭಿವ್ಯಕ್ತಿ ಇದೆ.

ಈ ವಿಷಣ್ಣ ಚಿತ್ರಣದ ಸುತ್ತಮುತ್ತ ಮುರಿದ ಮರದ ಕೊಂಬೆಗಳು, ವೈವಿಧ್ಯಮಯ ಐಕಾನ್‍ಗಳು ಮತ್ತು ಕ್ಯಾಂಡಲ್‍ಗಳಿದ್ದು, ಸಾಮಾನ್ಯವಾಗಿ ಕಂಡುಬರುವ ಹಬ್ಬದ ಉತ್ಸಾಹದ ವಾತಾವರಣದ ಬದಲಾಗಿ ಮಂಕು ಕವಿದ ವಾತಾವರಣ ಕಣ್ಣಿಗೆ ಕಟ್ಟುತ್ತದೆ.

ಈ ವಿಶಿಷ್ಟ ಅಲಂಕಾರದ ಹಿಂದಿನ ಕಲ್ಪನೆ ಬಗ್ಗೆ ವಿವರ ನೀಡಿದ ಪಾಸ್ಟರ್ ಮುನ್ಝೀರ್ ಐಸಾಕ್, ಸಾಂಪ್ರದಾಯಿಕ ಕ್ರಿಸ್‍ಮಸ್ ಅಲಂಕಾರದ ಬದಲು ಈ ಭಗ್ನಾವಶೇಷವನ್ನು ಬಿಂಬಿಸುವ ನಿರ್ಧಾರ ಕೈಗೊಂಡಿರುವುದು ಗಾಝಾದ ಜನತೆಯ ನರಳಿಕೆಗೆ ಸ್ಪಂದಿಸುವ ಉದ್ದೇಶದಿಂದ. ಅವರ ಜತೆಗೆ ನಾವಿದ್ದೇವೆ ಎನ್ನುವುದನ್ನು ಸಾರುವ ಉದ್ದೇಶದಿಂದ ಈ ಚಿತ್ರಣ. ಹಿಂಸೆ ಹಾಗೂ ಧ್ವಂಸದ ನಡುವೆಯೂ ಅವರ ನೋವಿನ ಜತೆಗೆ ದೇವರು ಇದ್ದಾನೆ ಎಂದು ಬಿಂಬಿಸುವ ಪ್ರಯತ್ನ ಎಂದು ಹೇಳಿದರು.

ಎಲ್ಲ ಫೆಲೆಸ್ತೀನಿಯನ್ನರಿಗೆ ಎದುರಾಗಿರುವ ಜನಾಂಗೀಯ ಹತ್ಯೆಯ ಯುದ್ಧದಿಂದಾಗಿ ಕ್ರಿಸ್‍ಮಸ್‍ನ ಉತ್ಸಾಹಕ್ಕೆ ತಣ್ಣೀರೆರಚಿದಂತಾಗಿದೆ. ಕ್ರೈಸ್ತಜನ್ಮದ ಸಡಗರದ ಆಚರಣೆ ಇದಾಗದೇ, ಸಂಘರ್ಷಕ್ಕೆ ಮನುಕುಲ ತೆತ್ತ ಬೆಲೆಯ ವಿಷಾದಕರ ಪ್ರತಿಫಲನವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News