×
Ad

ತೀವ್ರಗೊಂಡ ಅಮೆರಿಕ-ಚೀನಾ ವ್ಯಾಪಾರ ಸಮರ: ಪ್ರಮುಖ ಲೋಹ, ಅಯಸ್ಕಾಂತ ರಫ್ತಿಗೆ ಚೀನಾ ತಡೆ

Update: 2025-04-14 20:32 IST

Photo : ndtv

ವಾಷಿಂಗ್ಟನ್: ಅಮೆರಿಕ ಮತ್ತು ಚೀನಾದ ನಡುವಿನ ವ್ಯಾಪಾರ ಸಮರ ತೀವ್ರಗೊಳ್ಳುತ್ತಿರುವಂತೆಯೇ ಚೀನಾವು ಹಲವಾರು ನಿರ್ಣಾಯಕ, ಅಪರೂಪದ ಖನಿಜಗಳು, ಲೋಹಗಳು ಹಾಗೂ ಅಯಸ್ಕಾಂತದ ರಫ್ತನ್ನು ಸ್ಥಗಿತಗೊಳಿಸಿರುವುದಾಗಿ ವರದಿಯಾಗಿದೆ.

ಈ ಕ್ರಮವು ಶಸ್ತ್ರಾಸ್ತ್ರಗಳು, ಎಲೆಕ್ಟ್ರಾನಿಕ್ಸ್, ವಾಹನ ತಯಾರಕರು, ಏರೋಸ್ಪೇಸ್ ತಯಾರಕರು, ಸೆಮಿಕಂಡಕ್ಟರ್ ಉತ್ಪಾದಕರು ಹಾಗೂ ವ್ಯಾಪಕ ಶ್ರೇಣಿಯ ಗ್ರಾಹಕ ಸರಕುಗಳ ಉತ್ಪಾದಕರಿಗೆ ಸರಬರಾಜುಗಳನ್ನು ತಡೆಹಿಡಿದಿದೆ. ಚೀನಾ ಸರಕಾರವು ರಫ್ತುಗಳಿಗೆ ಹೊಸ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸುತ್ತಿದೆ. ನೀತಿಗಳನ್ನು ರೂಪಿಸುವ ಸಂದರ್ಭದಲ್ಲಿ ಕಾರುಗಳಿಂದ ಕ್ಷಿಪಣಿಗಳವರೆಗೆ ಬಹುತೇಕ ಎಲ್ಲದಕ್ಕೂ ಅಗತ್ಯವಿರುವ ಅಯಸ್ಕಾಂತಗಳ ರಫ್ತುಗಳನ್ನು ಚೀನಾದ ಹಲವು ಬಂದರುಗಳಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು `ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

ಹೊಸ ನಿಯಂತ್ರಣ ವ್ಯವಸ್ಥೆ ಜಾರಿಗೊಂಡ ಬಳಿಕ ಸರಬರಾಜುಗಳನ್ನು ಕೆಲವು ಸಂಸ್ಥೆಗಳಿಗೆ(ಅಮೆರಿಕದ ಮಿಲಿಟರಿ ಗುತ್ತಿಗೆದಾರರ ಸಹಿತ) ಶಾಶ್ವತವಾಗಿ ತಡೆಹಿಡಿಯಲಾಗುವುದು ಎಂದು ವರದಿ ಹೇಳಿದೆ.

ಸುಂಕ ಸಮರದಲ್ಲಿ ಯಾರೂ ಗೆಲ್ಲುವುದಿಲ್ಲ ಎಂದ ಚೀನಾ ಅಧ್ಯಕ್ಷ:

ಸಂರಕ್ಷಣಾವಾದವು ಯಾವತ್ತೂ ಯಶಸ್ವಿಯಾಗದು ಎಂದು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಸೋಮವಾರ ಎಚ್ಚರಿಕೆ ನೀಡಿದ್ದು ಸುಂಕ ಸಮರದಲ್ಲಿ ಯಾರೂ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.

ತಮ್ಮ ಆಗ್ನೇಯ ಏಶ್ಯಾ ಪ್ರವಾಸದ ಅಂಗವಾಗಿ ವಿಯೆಟ್ನಾಂಗೆ ಆಗಮಿಸಿದ ಕ್ಸಿ, ಅಮೆರಿಕದ ಸುಂಕ ಸಮರದ ವಿರುದ್ಧ ಜತೆಗೂಡಿ ಹೋರಾಡಬೇಕು . ನಮ್ಮ ಎರಡು ದೇಶಗಳು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆ, ಸ್ಥಿರ ಜಾಗತಿಕ ಕೈಗಾರಿಕಾ ಮತ್ತು ಪೂರೈಕೆ ಸರಪಳಿಗಳು ಮತ್ತು ಮುಕ್ತ ಹಾಗೂ ಸಹಕಾರಿ ಅಂತರಾಷ್ಟ್ರೀಯ ವ್ಯವಸ್ಥೆಯನ್ನು ದೃಢವಾಗಿ ಬೆಂಬಲಿಸಬೇಕು ಎಂದು ಹೇಳಿದರು. ಅಮೆರಿಕ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ಜಾರಿಗೊಳಿಸಿರುವ ಭಾರೀ ಸುಂಕದ ಪರಿಣಾಮವನ್ನು ಕನಿಷ್ಠಗೊಳಿಸುವ ಉದ್ದೇಶದಿಂದ ಚೀನಾವು ಪ್ರಾದೇಶಿಕ ವ್ಯಾಪಾರ ಸಂಬಂಧವನ್ನು ಬಿಗಿಗೊಳಿಸಲು ಬಯಸಿದ್ದು ಈ ಹಿನ್ನೆಲೆಯಲ್ಲಿ ಕ್ಸಿ ಜಿಂಪಿಂಗ್ ವಿಯೆಟ್ನಾಮ್, ಮಲೇಶ್ಯಾ ಮತ್ತು ಕಂಬೋಡಿಯಾಕ್ಕೆ ಭೇಟಿ ನೀಡುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News