×
Ad

ನಮ್ಮಲ್ಲಿ ಹೈಪರ್‌ ಸಾನಿಕ್ ಕ್ಷಿಪಣಿ ಇದೆ ಎಂದ ಚೀನಾ

Update: 2025-05-12 22:16 IST

pc : ndtv

ಬೀಜಿಂಗ್: ಜಾಗತಿಕ ರಕ್ಷಣಾ ಸಮೀಕರಣವನ್ನೇ ಬದಲಿಸಬಲ್ಲ ಬೆಳವಣಿಗೆಯೊಂದರಲ್ಲಿ, ಬಾಹ್ಯಾಕಾಶದಿಂದ ಹೈಪರ್‌ ಸಾನಿಕ್ ಕ್ಷಿಪಣಿಗಳನ್ನು ಉಡಾಯಿಸುವ ವ್ಯವಸ್ಥೆಯೊಂದನ್ನು ತಾವು ಅಭಿವೃದ್ಧಿಪಡಿಸಿದ್ದೇವೆ ಎಂದು ಚೀನಾದ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಈ ಕ್ಷಿಪಣಿಗಳಲ್ಲಿ ಮ್ಯಾಕ್ 20 ಅಥವಾ ಗಂಟೆಗೆ 13,000 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲ ‘ರೀಎಂಟ್ರಿ ಗ್ಲೈಡ್ ವೆಹಿಕಲ್’ (ಆರ್‌ಜಿವಿ)ನ್ನು ಅಳವಡಿಸಲಾಗಿದೆ ಎಂದು ಚೀನಾದ ಪತ್ರಿಕೆ ‘ಆ್ಯಕ್ಟ ಏರೋನೇಟಿಕ ಎಟ್ ಆ್ಯಸ್ಟ್ರೋನಾಟಿಕ ಸಿನಿಕ’ದಲ್ಲಿ ಪ್ರಕಟವಾಗಿರುವ ವರದಿಯೊಂದು ಹೇಳಿದೆ. ಇದರ ಪ್ರಕಾರ, ಚೀನಾವು ಭೂಮಿಯ ಯಾವುದೇ ಮೂಲೆಯಲ್ಲಿರುವ ಸ್ಥಳದ ಮೇಲೆ ಕೇವಲ 30 ನಿಮಿಷಗಳಲ್ಲಿ ದಾಳಿ ನಡೆಸಬಹುದಾಗಿದೆ.

ಹೈಪರ್‌ ಸಾನಿಕ್ (ಶಬ್ದದ ವೇಗಕ್ಕಿಂತ ಐದು ಪಟ್ಟು ಅಥವಾ ಅದಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಚಲಿಸುವ) ಶಸ್ತ್ರಗಳನ್ನು ಸಾಂಪ್ರದಾಯಿಕ ರಕ್ಷಣಾ ವ್ಯವಸ್ಥೆಯನ್ನು ನಿವಾರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಅವುಗಳ ಮೇಲೆ ಇನ್‌ಫ್ರಾರೆಡ್ ತಂತ್ರಜ್ಞಾನದ ಮೂಲಕ ನಿಗಾ ಇಡಬಹುದಾದರೂ, ಹಾಲಿ ರಾಡಾರ್ ತಂತ್ರಜ್ಞಾನಗಳ ಮೂಲಕ ಪತ್ತೆಹಚ್ಚುವುದು ಅಸಾಧ್ಯವಾಗಿದೆ.

ಹೈಪರ್‌ ಸಾನಿಕ್ ಕ್ಷಿಪಣಿಗಳು ಹಾರಾಟದ ಮಧ್ಯೆ ಕ್ಷಿಪ್ರವಾಗಿ ಊಹಾತೀತವಾಗಿ ತಮ್ಮ ದಿಕ್ಕು ಬದಲಿಸಲು ಸಾಧ್ಯವಾಗುವಂತೆ ಅವುಗಳನ್ನು ವಿನ್ಯಾಸಗೊಳಿಸಲಾಗಿದೆ. ಅವುಗಳನ್ನು ಉಪಗ್ರಹಗಳು ಮತ್ತು ನೆಲದ ಮೇಲಿನ ವ್ಯವಸ್ಥೆಗಳು ಸೇರಿದಂತೆ ವಿವಿಧ ವೇದಿಕೆಗಳಿಂದ ಉಡಾಯಿಸಬಹುದಾಗಿದೆ.

ಜಾಗತಿಕ ಶಕ್ತಿಗಳು ಹೈಪರ್‌ ಸಾನಿಕ್ ತಂತ್ರಜ್ಞಾನದ ಮೇಲೆ ಅಗಾಧ ಹೂಡಿಕೆಗಳನ್ನು ಮಾಡಿವೆ. ಅಮೆರಿಕ ಮತ್ತು ಬ್ರಿಟನ್ ಜಂಟಿಯಾಗಿ ಹೈಪರ್‌ ಸಾನಿಕ ಕ್ರೂಸ್ ಕ್ಷಿಪಣಿಯೊಂದನ್ನು ಅಭಿವೃದ್ಧಿಪಡಿಸುತ್ತಿವೆ. ಈಗಾಗಲೇ 200 ಪರೀಕ್ಷೆಗಳನ್ನು ನಡೆಸಲಾಗಿದೆ ಮತ್ತು 2030ರ ವೇಳೆಗೆ ಈ ಕ್ಷಿಪಣಿಗಳು ಸಿದ್ಧಗೊಳ್ಳುವ ನಿರೀಕ್ಷೆ ಇದೆ. ನೂತನ ಹೈಪರ್‌ ಸಾನಿಕ್ ಶಸ್ತ್ರಾಸ್ತ್ರಗಳು ಜಾಗತಿಕ ಶಕ್ತಿ ಸಮತೋಲನವನ್ನೇ ಪಲ್ಲಟಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ.

ಈ ಸ್ಪರ್ಧೆಯಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) 2020ರಲ್ಲಿ ಹೈಪರ್‌ ಸಾನಿಕ್ ಟೆಕ್ನಾಲಜಿ ಡೆಮೋನ್‌ಸ್ಟ್ರಾಟರ್ ವೆಹಿಕಲ್ (ಎಚ್‌ಎಸ್‌ಟಿಡಿವಿ)ನ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ಅದು ಇಗ ಬ್ರಹ್ಮೋಸ್-2 ಹೈಪರ್‌ ಸಾನಿಕ್ ಕ್ಷಿಪಣಿಯ ಅಭಿವೃದ್ಧಿಯ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಕ್ಷಿಪಣಿಯು ಚೀನಾದೊಂದಿಗಿನ ಶಕ್ತಿ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News