ಟ್ರಂಪ್ ಪ್ರಾಮಾಣಿಕತೆ ಪ್ರದರ್ಶಿಸಿದರೆ ಮಾತುಕತೆಗೆ ಮುಕ್ತವಾಗಿದ್ದೇವೆ: ಚೀನಾ
ಡೊನಾಲ್ಡ್ ಟ್ರಂಪ್ | PTI
ಬೀಜಿಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಾಮಾಣಿಕತೆಯನ್ನು ಪ್ರದರ್ಶಿಸಿದರೆ ಆ ದೇಶದೊಂದಿಗೆ ಮಾತುಕತೆಗೆ ಚೀನಾ ಮುಕ್ತವಾಗಿದೆ ಎಂದು ಚೀನಾದ ವಾಣಿಜ್ಯ ಇಲಾಖೆ ಶುಕ್ರವಾರ ಹೇಳಿದೆ.
ಕಳೆದ ತಿಂಗಳು ಅಮೆರಿಕ ಅಧ್ಯಕ್ಷರು ಸುಂಕವನ್ನು ಹೆಚ್ಚಿಸಿದ ನಂತರ ವ್ಯಾಪಾರ ಒಪ್ಪಂದದ ಬಗ್ಗೆ ಮಾತುಕತೆಯನ್ನು ನಡೆಸಲು ಅಮೆರಿಕ ಅಧಿಕಾರಿಗಳು ಪದೇ ಪದೇ ಪ್ರಯತ್ನ ನಡೆಸಿರುವುದನ್ನು ಗಮನಿಸಿದ್ದೇವೆ ಎಂದು ಹೇಳಿಕೆ ತಿಳಿಸಿದೆ. ಚೀನಾ ಸರಕಾರ ಮೃದು ನಿಲುವು ತಳೆದಿರುವುದು ವಿಶ್ವದ ಎರಡು ಪ್ರಮುಖ ಆರ್ಥಿಕತೆಗಳ ನಡುವಿನ ಜಿದ್ದಾಜಿದ್ದಿನ ಸುಂಕ ಸಮರದ ತೀವ್ರತೆ ಕಡಿಮೆಗೊಳ್ಳುವ ನಿರೀಕ್ಷೆ ಮೂಡಿಸಿದೆ.
`ತೆರಿಗೆ ಹೆಚ್ಚಳ ಮತ್ತು ವ್ಯಾಪಾರ ಸಮರವನ್ನು ಅಮೆರಿಕವೇ ಆರಂಭಿಸಿದೆ. ಆ ದೇಶ ಈಗ ಮಾತುಕತೆ ಬಯಸುವುದಾದರೆ ಅದು ವ್ಯಾಪಾರ ನೀತಿಗಳಲ್ಲಿ ಬದಲಾವಣೆ, ಒಪ್ಪಂದವಿಲ್ಲದೆ ವಿಧಿಸಲಾಗಿರುವ ಅಧಿಕ ಸುಂಕವನ್ನು ತೆಗೆದುಹಾಕುವುದು, ಇತ್ಯಾದಿ ಕ್ರಮಗಳ ಮೂಲಕ ಪ್ರಾಮಾಣಿಕತೆಯನ್ನು ಪ್ರದರ್ಶಿಸಬೇಕು. ಯಾವುದೇ ಸಂಭಾವ್ಯ ಮಾತುಕತೆಯಲ್ಲಿ ಅಮೆರಿಕ ತನ್ನ ದೋಷಯುತ ಏಕಪಕ್ಷೀಯ ಸುಂಕ ಕ್ರಮಗಳನ್ನು ಸರಿಪಡಿಸದಿದ್ದರೆ ಅದು ಪ್ರಾಮಾಣಿಕತೆಯ ಸಂಪೂರ್ಣ ಕೊರತೆಯನ್ನು ಪ್ರದರ್ಶಿಸುತ್ತದೆ ಎಂದು ಇಲಾಖೆಯ ವಕ್ತಾರರು ಹೇಳಿದ್ದಾರೆ.