ಸಂಘರ್ಷ ಉಲ್ಬಣ | ಯೆಮೆನ್ ನಲ್ಲಿ 1.30 ಲಕ್ಷಕ್ಕೂ ಹೆಚ್ಚು ಮಂದಿ ಸ್ಥಳಾಂತರ
ಜಿಬೂಟಿಗೆ 3,700 ಮಂದಿ ಪಲಾಯನ; 959 ಮೃತ್ಯು, 4,207 ಮಂದಿಗೆ ಗಾಯ
Photo: x.com/MichaelARothman
ಜಿಬೂಟಿ: ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಸರಕಾರದ ಪಡೆಗಳು ಮತ್ತು ಹೌತಿಗಳ ನಡುವಿನ ಸಂಘರ್ಷ ಇತ್ತೀಚೆಗೆ ಉಲ್ಬಣಗೊಂಡ ಪರಿಣಾಮ, ಆಗಸ್ಟ್ ಆರಂಭದಿಂದೀಚೆಗೆ ಯೆಮೆನ್ ನಲ್ಲಿ 1,30,000ಕ್ಕೂ ಹೆಚ್ಚು ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಏಜೆನ್ಸಿ (UNHCR) ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಸೆಪ್ಟೆಂಬರ್ 10ರಿಂದ ಯೆಮೆನ್ ನಲ್ಲಿನ ಸಂಘರ್ಷದಿಂದಾಗಿ ಸುಮಾರು 3,700 ಮಂದಿ ಜಿಬೂಟಿಗೆ ಪಲಾಯನ ಮಾಡಿದ್ದಾರೆ ಎಂದು UNHCR ಮಂಗಳವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
ಆಗಸ್ಟ್ 6ರಿಂದ ಅಕ್ಟೋಬರ್ 2ರವರೆಗೆ ಯೆಮೆನ್ ನಾದ್ಯಂತ ಸಂಘರ್ಷಕ್ಕೆ ಸಂಬಂಧಿಸಿದಂತೆ 959 ಮಂದಿ ಮೃತಪಟ್ಟಿದ್ದು, 4,207 ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ರವಿವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
ಸಂಘರ್ಷದ ನಡುವೆಯೇ ಯೆಮೆನ್ ನಲ್ಲಿ ಕಾಲರಾ ಪ್ರಕರಣಗಳ ಸಂಖ್ಯೆಯಲ್ಲೂ ತೀವ್ರ ಏರಿಕೆ ಕಂಡುಬಂದಿದೆ. ಕೇವಲ ಮೂರು ವಾರಗಳಲ್ಲಿ ಕಾಲರಾ ಪ್ರಕರಣಗಳು ಮೂರು ಪಟ್ಟು ಹೆಚ್ಚಾಗಿವೆ ಎಂದು WHO ವರದಿ ತಿಳಿಸಿದೆ.
ಇತ್ತೀಚಿನ ಕಾಲರಾ ಪ್ರಕರಣಗಳ ಪೈಕಿ ಶೇ 94ರಷ್ಟು ಪ್ರಕರಣಗಳು ಐದು ಪ್ರಾಂತ್ಯಗಳಲ್ಲಿ ದಾಖಲಾಗಿವೆ. ಹೆಚ್ಚಿನ ಸಂಖ್ಯೆಯ ಸ್ಥಳಾಂತರಗೊಂಡ ಕುಟುಂಬಗಳಿಗೆ ಆಶ್ರಯ ನೀಡಿರುವ ತೈಜ್ (Taiz), ಅಹೆನ್ (Ahen) ಮತ್ತು ಅಬ್ಯಾನ್ (Abyan) ಕೂಡ ಈ ಐದು ಪ್ರಾಂತ್ಯಗಳಲ್ಲಿ ಸೇರಿವೆ.