Photo Credit : AP 

ಕಿನ್ಶಾಸಾ: ಕಾಂಗೋ ನದಿಯಲ್ಲಿ ರವಿವಾರ ಎರಡು ದೋಣಿಗಳು ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 30 ಜನರು ಮೃತಪಟ್ಟು, ಹತ್ತಾರು ಜನರು ನಾಪತ್ತೆಯಾಗಿದ್ದಾರೆ ಎಂದು ಕಾಂಗೋದ ಸ್ಥಳೀಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಈಕ್ವೇಟರ್ ಪ್ರಾಂತದ ನ್ಗೊಂಬೆ-ಲುಕೋಲೆಲಾ ಪ್ರದೇಶದ ಬಳಿ ರವಿವಾರ ಸಂಜೆ ಮೋಟಾರು ಚಾಲಿತ ಎರಡು ಮರದ ದೋಣಿಗಳು ಪರಸ್ಪರ ಡಿಕ್ಕಿ ಹೊಡೆದವು ಎಂದು ಪ್ರಾಂತೀಯ ಗೃಹ ಸಚಿವ ಕ್ರಿಸ್ಪಿನ್ ಎಂಪುಟು ತಿಳಿಸಿದ್ದಾರೆ.

ಅಪಘಾತಕ್ಕೆ ನಿಖರವಾದ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ಅಪಘಾತದಲ್ಲಿ ಮೃತಪಟ್ಟ 30 ಜನರ ಅಂತ್ಯಸಂಸ್ಕಾರವನ್ನು ಈಗಾಗಲೇ ನೆರವೇರಿಸಲಾಗಿದೆ. ಒಂದು ದೋಣಿಯು ವಾಯುವ್ಯದ ಉಬಂಗಿಯಿಂದ ರಾಜಧಾನಿ ಕಿನ್ಶಾಸಾಗೆ ಪ್ರಯಾಣಿಸುತ್ತಿತ್ತು ಹಾಗೂ ಮತ್ತೊಂದು ದೋಣಿಯು ಕಿನ್ಶಾಸಾದಿಂದ ಅಪಘಾತ ಸಂಭವಿಸಿದ ಲುಕೋಲೆಲಾ ಪ್ರದೇಶಕ್ಕೆ ತೆರಳುತ್ತಿತ್ತು. ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಸಚಿವರನ್ನು ಉಲ್ಲೇಖಿಸಿ `ದಿ ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ.

ಉಬಂಗಿಯಿಂದ ಹಿಂತಿರುಗುತ್ತಿದ್ದ ದೋಣಿಯಲ್ಲಿ ಸಾಮಗ್ರಿಗಳು ಮಿತಿಗಿಂತ ಹೆಚ್ಚಾಗಿ ಲೋಡ್ ಆಗಿದ್ದವು. ಅದು ಕಿನ್ಶಾಸಾದಿಂದ ಬರುತ್ತಿದ್ದ ದೋಣಿಗೆ ಢಿಕ್ಕಿ ಹೊಡೆಯಿತು' ಎಂದು ಭದ್ರತಾ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor