Photo Credit : AP

ಕೀವ್: ರಶ್ಯದ ವಿವಿಧ ಪ್ರಾಂತಗಳು ಹಾಗೂ ಆಕ್ರಮಿತ ಕ್ರಿಮಿಯಾ ಪರ್ಯಾಯ ದ್ವೀಪಪ್ರದೇಶ ಮತ್ತು ಅರೆವ್ ಸಮುದ್ರ ಪ್ರದೇಶದ ಮೇಲೆ ಉಕ್ರೇನ್ ಸೇನೆ 900ಕ್ಕೂ ಅಧಿಕ ಡ್ರೋನ್‌ಗಳಿಂದ ದಾಳಿಗಳನ್ನು ನಡೆಸಿದ್ದು, ಅವುಗಳನ್ನು ರಶ್ಯನ್ ವಾಯುರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ತಡೆದಿದೆಯೆಂದು ರಶ್ಯದ ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.

ಸೋಮವಾರ ಸಂಜೆ ಹಾಗೂ ಮಂಗಳವಾರ ಬೆಳಗ್ಗೆ ಮಧ್ಯೆ 600ಕ್ಕೂ ಅಧಿಕ ಡ್ರೋನ್‌ಗಳು ಮಾಸ್ಕೊದೆಡೆಗೆ ಹಾರಿಬಂದಿವೆ. ಅವುಗಳಲ್ಲಿ ಹೆಚ್ಚಿನವುಗಳನ್ನು ದೂರದಿಂದಲೇ ನಾಶಪಡಿಸಲಾಗಿದೆ. ಮಾಸ್ಕೊ ನಗರವನ್ನು ಸಮೀಪಿಸುತ್ತಿದ್ದ 105 ಡ್ರೋನ್‌ಗಳನ್ನು ಕೂಡಾ ಹೊಡೆದುರುಳಿಸಲಾಗಿದೆ ಎಂದು ಮಾಸ್ಕೋ ಮೇಯರ್ ಸೆರ್ಗೆಯಿ ಸೊಬಿಯಾನಿನ್ ತಿಳಿಸಿದ್ದಾರೆ.

ಡ್ರೋನ್ ದಾಳಿಯ ಬಳಿಕ ಮಾಸ್ಕೊ ಪ್ರಾಂತದಲ್ಲಿರುವ ಪ್ರಮುಖ ಇಂಧನ ಡಿಪೋದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆಂದು ವರದಿಯೊಂದು ತಿಳಿಸಿದೆ.

ಡ್ರೋನ್ ದಾಳಿಯ ಬೆನ್ನಲ್ಲೇ, ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‌ಸ್ಕಿ ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆಯೊಂದನ್ನು ನೀಡಿ, ಬೃಹತ್ ಮಟ್ಟದ ವೈಮಾನಿಕ ದಾಳಿಯನ್ನು ನಡೆಸಲು ರಶ್ಯವು ಸಿದ್ಧತೆ ನಡೆಸುತ್ತಿರುವ ಬಗ್ಗೆ ಬೇಹುಗಾರಿಕಾ ಮಾಹಿತಿ ಬಂದಿದ್ದು, ಅದನ್ನು ಎದುರಿಸಲು ಪ್ರತಿಕ್ರಮಗಳನ್ನು ಕೈಗೊಳ್ಳಲು ಸಿದ್ಥತೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor