Photo: x.com/samakaltw

ಕಂದಹಾರ್: 70 ಮೀಟರ್ ಆಳ... ಕೇವಲ 30 ಸೆಂ.ಮೀ. ಅಗಲದ ಕಿರಿದಾದ ಕೊಳವೆಬಾವಿ... ಕೆಳಗೆ ಸಿಲುಕಿದ್ದ ಐದು ವರ್ಷದ ಬಾಲಕ. ತಲೆಯ ಮೇಲೆ ನೀರು ತೊಟ್ಟಿಕ್ಕುತ್ತಿತ್ತು. ಕಾಲಿಗೆ ನೀರು ತಾಗುತ್ತಿತ್ತು. ಭಯದಿಂದ ನಡುಗುತ್ತಿದ್ದ ಬಾಲಕನನ್ನು ರಕ್ಷಿಸಲು ವಯಸ್ಕರಿಂದ ಸಾಧ್ಯವಾಗಲಿಲ್ಲ. ಆಗ ಮುಂದೆ ಬಂದಿದ್ದು 11 ವರ್ಷದ ಹಝ್ರತ್ ಉಮರ್.

ತನ್ನ ಜೀವಕ್ಕೂ ಅಪಾಯವಿದೆ ಎಂಬುದು ಗೊತ್ತಿದ್ದರೂ ಉಮರ್ ಕೊಳವೆಬಾವಿಯೊಳಗೆ ಇಳಿದ. ಕೆಳಗೆ ಸಿಲುಕಿದ್ದ ಝೈನುಲ್ಲಾನ ಕೈಗಳನ್ನು ಹಗ್ಗಕ್ಕೆ ಕಟ್ಟಿದ. ಬಳಿಕ ಇಬ್ಬರನ್ನೂ ನಿಧಾನವಾಗಿ ಮೇಲಕ್ಕೆ ಎಳೆಯಲಾಯಿತು. ಉಮರ್ ಮೊದಲು ಮೇಲಕ್ಕೆ ಬಂದಾಗ ಮಣ್ಣಿನಿಂದ ಆವೃತನಾಗಿದ್ದ ಆತನನ್ನು ಕಂಡ ಜನರು, "ಶಾಬಾಶ್, ಶೇರ್!" ಎಂದು ಕೂಗಿದರು.

ಆ ಬಳಿಕ ಝೈನುಲ್ಲಾನನ್ನೂ ಸುರಕ್ಷಿತವಾಗಿ ಮೇಲಕ್ಕೆ ತರಲಾಯಿತು.

ಈ ಘಟನೆ ದಕ್ಷಿಣ ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದ ಮೈವಾಂಡ್‌ನಲ್ಲಿ ನಡೆದಿದೆ.

ಆಟವಾಡುತ್ತಿದ್ದಾಗ ಕೊಳವೆಬಾವಿಗೆ ಬಿದ್ದ ಮಗು

ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಜೈನುಲ್ಲಾ ಪಾಳುಬಿದ್ದ ಕೊಳವೆಬಾವಿಗೆ ಬಿದ್ದಿದ್ದ. ಸುಮಾರು 70 ಮೀಟರ್ ಆಳದಲ್ಲಿದ್ದ ಆತ ತಳಭಾಗದ ಒಂದು ಮೂಲೆಯಲ್ಲಿ ಸಿಲುಕಿದ್ದ.

ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವರು ಕ್ಯಾಮೆರಾವನ್ನು ಕೊಳವೆಬಾವಿಗೆ ಇಳಿಸಿ ಮೇಲಿದ್ದ ಪರದೆಯಲ್ಲಿ ಬಾಲಕನನ್ನು ಗಮನಿಸುತ್ತಿದ್ದರು. ಆದರೆ ಪೈಪ್ ಕೇವಲ 30 ಸೆಂ.ಮೀ. ಅಗಲವಿದ್ದ ಕಾರಣ ವಯಸ್ಕರಿಗೆ ಕೆಳಗೆ ಇಳಿಯಲು ಸಾಧ್ಯವಾಗಲಿಲ್ಲ.

ಝೈನುಲ್ಲಾ ಚಿಕ್ಕವನಾಗಿದ್ದರಿಂದ ರಕ್ಷಣಾ ಹಗ್ಗವನ್ನು ದೇಹಕ್ಕೆ ಹೇಗೆ ಕಟ್ಟಿಕೊಳ್ಳಬೇಕು ಎಂಬುದನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಆತನನ್ನು ತಲುಪಲು ಮೂವರು ಮಕ್ಕಳು ಕೆಳಗೆ ಇಳಿಯಲು ಪ್ರಯತ್ನಿಸಿದರು. ಆದರೆ ಕಿರಿದಾದ ಜಾಗದಲ್ಲಿ ಉಸಿರಾಡಲು ಕಷ್ಟವಾಗಿ ಅವರು ಮೇಲಕ್ಕೆ ಎಳೆಯುವಂತೆ ಕೇಳಿಕೊಂಡರು.

ಮೊದಲ ಪ್ರಯತ್ನ ವಿಫಲ

ಈ ಹಿಂದೆ ಮತ್ತೊಂದು ಕಿರಿದಾದ ಭೂಗತ ಜಾಗದ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಹಝ್ರತ್ ಉಮರ್ ನೆರವಿಗೆ ಬಂದ. ಚಿಕ್ಕಪ್ಪನ ಒಪ್ಪಿಗೆಯೊಂದಿಗೆ ಆತ ಕೆಳಗೆ ಇಳಿದ.

ಮೊದಲ ಪ್ರಯತ್ನದಲ್ಲಿ ಆತನ ಭುಜ ಮತ್ತು ತೊಡೆ ಸಿಕ್ಕಿಹಾಕಿಕೊಂಡವು. ನೋವಿನಿಂದ ಕೂಗಿದಾಗ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವರು ಆತನನ್ನು ಮೇಲಕ್ಕೆ ಎಳೆದರು.

ಆದರೂ ಉಮರ್ ಹಿಂದೆ ಸರಿಯಲಿಲ್ಲ. ಎರಡನೇ ಬಾರಿ ಮತ್ತೆ ಕೆಳಗೆ ಇಳಿದ ಆತ ಝೈನುಲ್ಲಾನನ್ನು ತಲುಪಿದ.

ಬಾಲಕನ ಕೈಗಳನ್ನು ಮತ್ತೊಂದು ಹಗ್ಗಕ್ಕೆ ಕಟ್ಟಿದ ಬಳಿಕ ಮೇಲಿದ್ದವರಿಗೆ ಸಂಕೇತ ನೀಡಿದ. ಮೇಲಿದ್ದ ನೂರಾರು ಜನರು ಆತಂಕದಿಂದ ಕಾಯುತ್ತಿದ್ದರು.

ಧ್ವನಿವರ್ಧಕದ ಮೂಲಕ ಜನರಿಗೆ ಶಾಂತವಾಗಿರುವಂತೆ ಸೂಚಿಸಲಾಯಿತು. ರಕ್ಷಣಾ ಕಾರ್ಯದ ನೇತೃತ್ವ ವಹಿಸಿದ್ದ ಮಿರಾಜನ್ ಅಬ್ದುಲ್ಲಾ, "ನಾವು ನಿಮ್ಮನ್ನು ಬಹುತೇಕ ಮೇಲಕ್ಕೆ ಎಳೆದಿದ್ದೇವೆ; ನಮ್ಮ ಕಡೆ ನೋಡಬೇಡಿ, ಕೆಳಗೆ ನೋಡಿ" ಎಂದು ಉಮರ್ ಗೆ ಸೂಚಿಸಿದರು.

"ನಿಧಾನವಾಗಿ ಎಳೆಯಿರಿ" ಎಂದು ಜನರು ಕೂಗುತ್ತಿದ್ದರು. ಎರಡು ಆಂಬ್ಯುಲೆನ್ಸ್‌ ಗಳನ್ನು ಸಿದ್ಧವಾಗಿಡಲಾಗಿತ್ತು.

ಮೊದಲು ಉಮರ್ ಮೇಲಕ್ಕೆ ಬಂದ. ಮಣ್ಣಿನಿಂದ ಆವೃತನಾಗಿದ್ದ ಆತನನ್ನು ಕಂಡ ಜನರು "ಶಾಬಾಶ್, ಶೇರ್" ಎಂದು ಹರ್ಷೋದ್ಗಾರ ಮಾಡಿದರು. ಬಳಿಕ ಝೈನುಲ್ಲಾನನ್ನೂ ಮೇಲಕ್ಕೆ ಕರೆತರಲಾಯಿತು.

ಆಸ್ಪತ್ರೆಗೆ ದಾಖಲಾದ ಜೈನುಲ್ಲಾನನ್ನು ಮರುದಿನ ಬಿಡುಗಡೆ ಮಾಡಲಾಯಿತು.

ಅಫ್ಘಾನಿಸ್ತಾನದಲ್ಲಿ 100ಕ್ಕೂ ಹೆಚ್ಚು ಘಟನೆ

ಇಂತಹ ಪ್ರಕರಣ ಇದೇ ಮೊದಲಲ್ಲ. 2021ರಿಂದ ಅಫ್ಘಾನಿಸ್ತಾನದಲ್ಲಿ ಸರಿಯಾಗಿ ಮುಚ್ಚದ ಕೊಳವೆಬಾವಿಗಳಿಗೆ ಜನರು ಬೀಳುವ 100ಕ್ಕೂ ಹೆಚ್ಚು ಘಟನೆಗಳನ್ನು BBC ಪರಿಶೀಲಿಸಿ ದೃಢಪಡಿಸಿದೆ. ಹೆಚ್ಚಿನ ಘಟನೆಗಳು ದಕ್ಷಿಣ ಅಫ್ಘಾನಿಸ್ತಾನದಲ್ಲಿ ನಡೆದಿವೆ.

ಸಂತ್ರಸ್ತರಲ್ಲಿ ಹೆಚ್ಚಿನವರು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು. ಅವರಲ್ಲಿ ಸುಮಾರು ಅರ್ಧದಷ್ಟು ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿಯೂ 2009ರಿಂದ 2023ರ ನಡುವೆ 40ಕ್ಕೂ ಹೆಚ್ಚು ಮಕ್ಕಳು ಕೊಳವೆಬಾವಿಗಳಿಗೆ ಬಿದ್ದಿರುವುದು ವರದಿಯಾಗಿದೆ.

ಅಫ್ಘಾನಿಸ್ತಾನದಲ್ಲಿ ದೀರ್ಘಕಾಲದ ಬರಗಾಲದಿಂದ ನೀರಿನ ಕೊರತೆ ಹೆಚ್ಚಿದೆ. ಕೃಷಿಗಾಗಿ ರೈತರು ಆಳದ ಅಂತರ್ಜಲವನ್ನು ಅವಲಂಬಿಸುವಂತಾಗಿದೆ.

2021ರಲ್ಲಿ 20 ವರ್ಷಗಳ ಬಳಿಕ ಅಮೆರಿಕದ ಪಡೆಗಳು ಅಫ್ಘಾನಿಸ್ತಾನದಿಂದ ಹಿಂದೆ ಸರಿದವು. ಬಳಿಕ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದಿತು. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ವಿದೇಶಿ ನೆರವು ಕಡಿಮೆಯಾಯಿತು. ಉದ್ಯೋಗಾವಕಾಶಗಳೂ ಕುಸಿದವು. ಹೀಗಾಗಿ ಅನೇಕರು ಮತ್ತೆ ಕೃಷಿಯನ್ನೇ ಅವಲಂಬಿಸುವಂತಾಯಿತು.

ಇದೇ ಸಮಯದಲ್ಲಿ ಅಗ್ಗದ ಚೀನೀ ಸೌರ ಫಲಕಗಳು ವ್ಯಾಪಕವಾಗಿ ಲಭ್ಯವಾದವು. ರೈತರು ದಿನವಿಡೀ ಕೊಳವೆಬಾವಿಗಳಿಂದ ನೀರು ಪಂಪ್ ಮಾಡಲು ಸಾಧ್ಯವಾಯಿತು. ಇದರಿಂದ ಆಳವಾದ ಕೊಳವೆಬಾವಿಗಳ ಸಂಖ್ಯೆ ವೇಗವಾಗಿ ಹೆಚ್ಚಿತು.

ಜಲ ತಜ್ಞ ನಜೀಬುಲ್ಲಾ ಸದಿದ್ ಪ್ರಕಾರ, 2020ರ ಬಳಿಕ ಕೊಳವೆಬಾವಿಗಳ ಸಂಖ್ಯೆ ಅಪಾರವಾಗಿ ಹೆಚ್ಚಿದೆ.

ಉಪಗ್ರಹ ಚಿತ್ರಗಳ ಪ್ರಕಾರ ಅಫ್ಘಾನಿಸ್ತಾನದಲ್ಲಿ ಈಗ ಸುಮಾರು 5 ಲಕ್ಷ ಕೊಳವೆಬಾವಿಗಳಿವೆ. ಅವುಗಳಲ್ಲಿ ಹೆಚ್ಚಿನವು ಹೆಲ್ಮಂಡ್ ನದಿ ಕಣಿವೆಯ ಹೆಲ್ಮಂಡ್, ಕಂದಹಾರ್, ಫರಾಹ್ ಮತ್ತು ಘಝ್ನಿ ಪ್ರಾಂತ್ಯಗಳಲ್ಲಿವೆ.

ಕೊಳವೆಬಾವಿಗಳ ಬಳಿ ಸೌರ ಫಲಕಗಳು ಹಾಗೂ ನೀರು ಸಂಗ್ರಹಿಸುವ ಕೊಳಗಳು ಕಾಣಿಸುತ್ತವೆ. ರೈತರು ಆಳದಿಂದ ನೀರನ್ನು ಪಂಪ್ ಮಾಡಿ ಕೊಳಗಳಲ್ಲಿ ಸಂಗ್ರಹಿಸಿ ಕೃಷಿಗೆ ಬಳಸುತ್ತಿದ್ದಾರೆ.

ರಕ್ಷಣೆಗೆ ತರಬೇತಿ ಪಡೆದವರು ಕೇವಲ ಐವರು

ಅಫ್ಘಾನಿಸ್ತಾನದಲ್ಲಿ ಕೊಳವೆಬಾವಿಗೆ ಬಿದ್ದವರನ್ನು ರಕ್ಷಿಸಲು ತರಬೇತಿ ಪಡೆದವರು ಕೇವಲ ಐವರು.

ಅವರಲ್ಲಿ ದಕ್ಷಿಣ ಹೆಲ್ಮಂಡ್‌ನ 28 ವರ್ಷದ ಮೊಬೈಲ್ ಫೋನ್ ಮಾರಾಟಗಾರ ಮಿರಾಝನ್ ಅಬ್ದುಲ್ಲಾ ಕೂಡ ಒಬ್ಬರು.

2021ರ ಎಪ್ರಿಲ್‌ ನಲ್ಲಿ ಸಂಗಿನ್ ಜಿಲ್ಲೆಯಲ್ಲಿ ಐದು ವರ್ಷದ ಬಾಲಕನೊಬ್ಬ ಪಾಳುಬಿದ್ದ ಕೊಳವೆಬಾವಿಗೆ ಬಿದ್ದಿದ್ದ. ಆತ, "ನನಗೆ ಚಳಿಯಾಗುತ್ತಿದೆ. ಹಸಿವಾಗಿದೆ. ಬಾಯಾರಿಕೆಯಾಗಿದೆ. ಕತ್ತಲೆ ಆವರಿಸುತ್ತಿದೆ. ನನ್ನನ್ನು ಹೊರಗೆ ತೆಗೆಯಿರಿ" ಎಂದು ಅಳುತ್ತಿದ್ದ.

ಆತನನ್ನು ಹೇಗೆ ರಕ್ಷಿಸಬೇಕು ಎಂಬುದನ್ನು ನಿರ್ಧರಿಸಲು ಗ್ರಾಮಸ್ಥರಿಗೆ 48 ಗಂಟೆಗಳು ಬೇಕಾದವು. ಬಳಿಕ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟ.

ಆರಂಭದಲ್ಲಿ ಇಂತಹ ಘಟನೆ ಅಪರೂಪದ ದುರಂತ ಎಂದು ಮಿರಾಝನ್ ಭಾವಿಸಿದ್ದರು. ಆದರೆ ಒಂದು ವರ್ಷದ ಬಳಿಕ ಹೈದರ್ ಎಂಬ ಮತ್ತೊಬ್ಬ ಬಾಲಕ ಕೊಳವೆಬಾವಿಗೆ ಬಿದ್ದ ಘಟನೆ ತಿಳಿದ ಬಳಿಕ ಇಂತಹ ರಕ್ಷಣಾ ಕಾರ್ಯಕ್ಕೆ ವಿಶೇಷ ವ್ಯವಸ್ಥೆ ಅಗತ್ಯ ಎಂಬುದನ್ನು ಅರಿತುಕೊಂಡರು.

ಕ್ಯಾಮೆರಾವನ್ನು ಕಂಪ್ಯೂಟರ್‌ ಗೆ ಸಂಪರ್ಕಿಸುವ ವಿಶೇಷ ಸಾಧನವನ್ನು ಅವರು ತಯಾರಿಸಿದರು. ಇದರ ಮೂಲಕ ಕೊಳವೆಬಾವಿಯೊಳಗೆ ಸಿಲುಕಿರುವ ವ್ಯಕ್ತಿಯ ಸ್ಥಾನವನ್ನು ಮೇಲಿನಿಂದ ನೋಡಬಹುದು. ಬಳಿಕ ಸರಿಯಾದ ಸ್ಥಳಕ್ಕೆ ಹಗ್ಗ ಇಳಿಸಿ, ಸಂತ್ರಸ್ತನಿಗೆ ಅದನ್ನು ಕಟ್ಟಿ ಮೇಲಕ್ಕೆ ಎಳೆಯಬಹುದು.

ಸಾಧನವನ್ನು ಪರೀಕ್ಷಿಸಲು ತಮ್ಮ ಆಗಿನ ಐದು ವರ್ಷದ ಮಗನನ್ನೇ 25 ಮೀಟರ್ ಆಳದ ಬಾವಿಗೆ ಇಳಿಸಿದರು. ಪರೀಕ್ಷೆ ಯಶಸ್ವಿಯಾಯಿತು!

ಕಳೆದ ನಾಲ್ಕು ವರ್ಷಗಳಲ್ಲಿ ಮಿರಾಝನ್ 113 ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ ಸುಮಾರು 70 ಮಂದಿಯ ಜೀವ ಉಳಿಸಿದ್ದಾರೆ.

140 ಮೀಟರ್ ಆಳದಿಂದಲೂ ಬಾಲಕನ ರಕ್ಷಣೆ

ಹೆಲ್ಮಂಡ್‌ ನಲ್ಲಿ ಐದು ವರ್ಷದ ನೂರ್ ಅಘಾ ಎಂಬ ಬಾಲಕ 140 ಮೀಟರ್ ಆಳದಲ್ಲಿ ನಾಲ್ಕು ಗಂಟೆಗಳ ಕಾಲ ಸಿಲುಕಿದ್ದ.

ಮಿರಾಝನ್ ಅವರ ಸಾಧನದ ಮೂಲಕ ಕ್ಯಾಮೆರಾದಲ್ಲಿ ಬಾಲಕನ ಸ್ಥಾನ ಪತ್ತೆಯಾಯಿತು. ಬಳಿಕ ರಕ್ಷಣಾ ಹಗ್ಗವನ್ನು ಕೆಳಗೆ ಕಳುಹಿಸಲಾಯಿತು.

ಎರಡು ಗಂಟೆಗಳ ಕಾರ್ಯಾಚರಣೆಯ ಬಳಿಕ ನೂರ್ ಅಘಾನನ್ನು ಸುರಕ್ಷಿತವಾಗಿ ಮೇಲಕ್ಕೆ ತರಲಾಯಿತು. ಮಿರಾಝನ್ ಬಾಲಕನನ್ನು ಅಪ್ಪಿಕೊಂಡರು.

ಆದರೆ ಎಲ್ಲ ರಕ್ಷಣಾ ಕಾರ್ಯಾಚರಣೆಗಳು ಯಶಸ್ವಿಯಾಗಿಲ್ಲ. ಕೆಲವರು ಕೊಳವೆಬಾವಿಯೊಳಗಿನ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಬರಗಾಲ ಮುಂದುವರಿದಂತೆ ಕೊಳವೆಬಾವಿಗಳ ಆಳವೂ ಹೆಚ್ಚುತ್ತಿದೆ. ಹಿಂದೆ ಸುಮಾರು 80 ಮೀಟರ್ ಆಳವಿದ್ದ ಬಾವಿಗಳು ಈಗ 200 ಮೀಟರ್‌ ಆಳದ ವರೆಗೂ ತಲುಪಿದೆ.

ಅಫ್ಘಾನಿಸ್ತಾನದ ಕೃಷಿ ಅಂತರ್ಜಲವನ್ನು ಹೆಚ್ಚು ಅವಲಂಬಿಸಿದೆ. ನೀರಿನ ಮಟ್ಟ ಮತ್ತಷ್ಟು ಕುಸಿದರೆ ಕೆಲವು ಪ್ರದೇಶಗಳು ವಾಸಯೋಗ್ಯವಲ್ಲದಂತಾಗಬಹುದು. ಜನರು ವಲಸೆ ಹೋಗಬೇಕಾಗಬಹುದು. ಭೂಮಿ ಬಂಜರು ಅಥವಾ ಮರುಭೂಮಿಯಾಗಿ ಬದಲಾಗಬಹುದು ಎಂದು ಸದಿದ್ ಎಚ್ಚರಿಸಿದ್ದಾರೆ.

ಅಂತರ್ಜಲ ಮಟ್ಟ ಕುಸಿಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಮಿರಾಝನ್ ಹೇಳಿದ್ದಾರೆ. ಕೆಲವೇ ಮೀಟರ್‌ ಗಳ ಅಂತರದಲ್ಲಿ ಎರಡು ಅಥವಾ ಮೂರು ಕೊಳವೆಬಾವಿಗಳನ್ನು ನೋಡುವುದು ಈಗ ಸಾಮಾನ್ಯವಾಗಿದೆ.

ಒಂದು ಕೆ.ಜಿ. ಟೊಮೆಟೊ ಬೆಳೆಯಲು 100ರಿಂದ 300 ಲೀಟರ್ ನೀರು ಬೇಕಾಗುತ್ತದೆ. ಆದರೆ ರೈತರಿಗೆ ಒಂದು ಕೆ.ಜಿ. ಟೊಮೆಟೊ ಮಾರಾಟದಿಂದ ಸಿಗುವುದು ಕೇವಲ 5ರಿಂದ 10 ಆಫ್ಘಾನಿ (ಸುಮಾರು 6ರಿಂದ 15 ರೂ.) ಮಾತ್ರ. ಅಂದರೆ, 10 ಆಫ್ಘಾನಿ ಮೌಲ್ಯದ ಟೊಮೆಟೊ ಬೆಳೆಯಲು 300 ಆಫ್ಘಾನಿ ಮೌಲ್ಯದ ನೀರು ಬಳಸಲಾಗುತ್ತಿದೆ. ಇದು ಸಂಪೂರ್ಣವಾಗಿ ಸಮರ್ಥನೀಯವಲ್ಲ ಎಂದು ಸದಿದ್ ಹೇಳಿದ್ದಾರೆ.

ಕೊಳವೆಬಾವಿಗಳು ಬತ್ತಿದ ಬಳಿಕ ಅವುಗಳನ್ನು ಮುಚ್ಚದೆ ಹೊಸ ಕೊಳವೆಬಾವಿಗಳನ್ನು ಕೊರೆಯಲಾಗುತ್ತಿದೆ. ಇದರಿಂದ ಪಾಳುಬಿದ್ದ ಕೊಳವೆಬಾವಿಗಳು ಜನರು ಓಡಾಡುವ ಪ್ರದೇಶಗಳಲ್ಲೇ ಅಪಾಯಕಾರಿ ಗುಂಡಿಗಳಾಗಿ ಉಳಿಯುತ್ತಿವೆ.

ಬಡವರಿಗೆ ಕೊಳವೆಬಾವಿ ಮುಚ್ಚುವುದೂ ದುಬಾರಿ

ಅನೇಕ ಬಡ ಕುಟುಂಬಗಳಿಗೆ ಪಾಳುಬಿದ್ದ ಕೊಳವೆಬಾವಿಗಳನ್ನು ಸುರಕ್ಷಿತವಾಗಿ ಮುಚ್ಚುವುದು ದುಬಾರಿಯಾಗಿದೆ. ಸಾರ್ವಜನಿಕ ಸುರಕ್ಷತೆಯೂ ಹೆಚ್ಚಿನ ಆದ್ಯತೆಯಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಖಾಸಗಿಯಾಗಿ ಕೊಳವೆಬಾವಿ ಕೊರೆಯುವುದನ್ನು ತಡೆಯುವ ಯಾವುದೇ ಕಾನೂನು ಇಲ್ಲ.

ಬೋರ್‌ವೆಲ್‌ ಗಳಿಂದ ಉಂಟಾಗುತ್ತಿರುವ ಅಪಾಯದ ಹಿನ್ನೆಲೆಯಲ್ಲಿ ತುರ್ತು ರಕ್ಷಣಾ ಸಾಮರ್ಥ್ಯ ಬಲಪಡಿಸಲು ವಿಶೇಷ ಉಪಕರಣಗಳನ್ನು ಪಡೆಯಲು ಪ್ರಯತ್ನಿಸುತ್ತಿರುವುದಾಗಿ ತಾಲಿಬಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಕುಡಿಯುವ ನೀರನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೆ ಅಧಿಕೃತ ಪರವಾನಗಿ ಇಲ್ಲದೆ ಅಂತರ್ಜಲ ಬಳಸುವುದನ್ನು ನಿಷೇಧಿಸುವ ಯೋಜನೆ ಇರುವುದಾಗಿ ತಾಲಿಬಾನ್‌ ನ ನೀರು ಮತ್ತು ಇಂಧನ ಸಚಿವಾಲಯ ತಿಳಿಸಿದೆ. ಆದರೆ ಯೋಜನೆ ಜಾರಿಗೆ ಬರುವ ದಿನಾಂಕವನ್ನು ಪ್ರಕಟಿಸಿಲ್ಲ.

ಕೊಳವೆಬಾವಿಗಳನ್ನು ಸರಿಯಾಗಿ ಮುಚ್ಚುವಂತೆ ಮಾಲೀಕರಿಗೆ ತಾಲಿಬಾನ್‌ ನ ಆಂತರಿಕ ಸಚಿವಾಲಯ ಈ ಹಿಂದೆ ಎಚ್ಚರಿಕೆ ನೀಡಿತ್ತು. ನಿಯಮ ಪಾಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ತಿಳಿಸಿತ್ತು.

ಝೈನುಲ್ಲಾ ರಕ್ಷಣೆಯೇ ಅತ್ಯಂತ ಕಠಿಣ

ಜೈನುಲ್ಲಾ ಸಿಲುಕಿದ್ದ ಕೊಳವೆಬಾವಿಯ ತಳದಲ್ಲಿ 4x4 ಮೀಟರ್ ಅಂದರೆ 13x13 ಅಡಿ ವಿಸ್ತೀರ್ಣದ ತೆರೆದ ಜಾಗವಿತ್ತು. ಮಿರಾಝನ್ ಅವರ ಕ್ಯಾಮೆರಾ ನೇರವಾಗಿ ಕೆಳಗೆ ಇಳಿಯಲು ಮಾತ್ರ ಸಾಧ್ಯವಾಗುತ್ತಿದ್ದುದರಿಂದ ಒಂದು ಬದಿಯಲ್ಲಿ ಕುಳಿತಿದ್ದ ಬಾಲಕನನ್ನು ತಲುಪಲು ಸಾಧ್ಯವಾಗಲಿಲ್ಲ.

ಝೈನುಲ್ಲಾನನ್ನು ಮೊದಲು ಕೊಕ್ಕೆಗಳ ಮೂಲಕ ಎಳೆಯಲು ಗ್ರಾಮಸ್ಥರು ಪ್ರಯತ್ನಿಸಿದ್ದರು. ಆದರೆ ದೇಹದ ಕೆಲವು ಭಾಗಗಳಿಗೆ ಗಾಯವಾಗಿದ್ದರಿಂದ ಆತ ಭಯಗೊಂಡು ಒಂದು ಬದಿಗೆ ಸರಿದಿದ್ದ ಎಂದು ಆತನ ತಂದೆ ಹೇಳಿದ್ದಾರೆ.

ಕ್ಯಾಮೆರಾವನ್ನು ಬೇಕಾದ ದಿಕ್ಕಿಗೆ ತಿರುಗಿಸಲು ಮನುಷ್ಯನ ಕೈ ಬೇಕಿತ್ತು. ಹೀಗಾಗಿ ಉಮರ್ ಕೆಳಗೆ ಇಳಿದರು.

ಉಮರ್, ಝೈನುಲ್ಲಾನನ್ನು ಕಂಡು ಆತನ ಕೈಗಳನ್ನು ಮತ್ತೊಂದು ಹಗ್ಗಕ್ಕೆ ಕಟ್ಟಿದರು. ಬಳಿಕ ಇಬ್ಬರನ್ನೂ ನಿಧಾನವಾಗಿ ಮೇಲಕ್ಕೆ ಎಳೆಯಲಾಯಿತು.

"ಉಮರ್ ಇಲ್ಲದಿದ್ದರೆ ನಾವು ಕೊಕ್ಕೆಗಳನ್ನು ಬಳಸಿ ಮಗನನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದೆವು. ಅದರಿಂದ ಆತನಿಗೆ ಗಂಭೀರ ಗಾಯವಾಗುವ ಅಥವಾ ಜೀವ ಕಳೆದುಕೊಳ್ಳುವ ಅಪಾಯವಿತ್ತು" ಎಂದು ಝೈನುಲ್ಲಾನ ತಂದೆ ಹೇಳಿದ್ದಾರೆ.

ಬಾಲಕನನ್ನು ರಕ್ಷಿಸಿದ ಬಳಿಕ ಗ್ರಾಮಸ್ಥರು ಕೊಳವೆಬಾವಿಯ ಬಾಯಿಗೆ ದೊಡ್ಡ ಕಲ್ಲು ಇರಿಸಿ ಮುಚ್ಚಿದರು.

ಉಮರ್ ನ ಚಿಕ್ಕಪ್ಪ ಆಝೀಝುಲ್ಲಾ ಅವರಿಗೆ ಆತನನ್ನು ಕೆಳಗೆ ಕಳುಹಿಸುವ ಬಗ್ಗೆ ಭಯವಿತ್ತು.

"ನಾನು ಹಿಂಜರಿದೆ. ಆದರೆ ಒಬ್ಬರಿಗಾಗಿ ಒಬ್ಬರು ತ್ಯಾಗ ಮಾಡಬೇಕು ಎಂದುಕೊಂಡೆ. ಸಿಕ್ಕಿಹಾಕಿಕೊಂಡರೆ ಅಪಾಯವಾಗುತ್ತದೆ ಎಂದು ಆತನಿಗೆ ಎಚ್ಚರಿಸಿದೆ. ಆದರೆ ಅವನು ಹೋಗಲು ಬಯಸಿದ" ಎಂದು ಅವರು ಹೇಳಿದ್ದಾರೆ.

ಕೊಳವೆಬಾವಿಯ ಬಾಯಿಯನ್ನು ನೋಡಿದಾಗ ಅಲ್ಲಿಂದ ಯಾರನ್ನಾದರೂ ಹೊರತರುವುದು ಅಸಾಧ್ಯವೆನಿಸಿತ್ತು ಎಂದೂ ಅವರು ಹೇಳಿದ್ದಾರೆ.

ರಕ್ಷಣಾ ಕಾರ್ಯದ ಬಗ್ಗೆ ತರಬೇತಿ ಇಲ್ಲದವರು ನೆರವಿಗೆ ಧಾವಿಸುವುದರಿಂದ ಸಿಕ್ಕಿಹಾಕಿಕೊಂಡವರ ಜೀವಕ್ಕೆ ಅಪಾಯ ಮತ್ತಷ್ಟು ಹೆಚ್ಚಬಹುದು ಎಂದು ಮಿರಾಝನ್ ಎಚ್ಚರಿಸಿದ್ದಾರೆ.

"ಸಣ್ಣ ತಪ್ಪೂ ಸಿಕ್ಕಿಹಾಕಿಕೊಂಡ ವ್ಯಕ್ತಿಯ ಜೀವಕ್ಕೆ ಗಂಭೀರ ಅಪಾಯ ಉಂಟುಮಾಡಬಹುದು" ಎಂದು ಅವರು ಹೇಳಿದ್ದಾರೆ.

ಘಝ್ನಿಯಲ್ಲಿ ಮಗುವೊಂದನ್ನು ರಕ್ಷಿಸಲು ಪ್ರಯತ್ನಿಸಿದ ಮೂವರು ವ್ಯಕ್ತಿಗಳು ಮೃತಪಟ್ಟ ಘಟನೆಯನ್ನೂ ಅವರು ನೆನಪಿಸಿಕೊಂಡಿದ್ದಾರೆ. ಕೊನೆಗೆ ಆ ಮಗುವನ್ನು ಜೀವಂತವಾಗಿ ರಕ್ಷಿಸಲಾಗಿತ್ತು.

ಅಪಘಾತದ ಸ್ಥಳಗಳಿಗೆ ತ್ವರಿತವಾಗಿ ತಲುಪಲು ಸಾಧ್ಯವಾಗುವಂತೆ ಇನ್ನಷ್ಟು ಜನರಿಗೆ ತರಬೇತಿ ನೀಡುವುದು ಮಿರಾಝನ್ ಅವರ ಮುಂದಿನ ಗುರಿ.

ಝೈನುಲ್ಲಾ ಬದುಕುಳಿದ. ಆದರೆ ಆತನ ರಕ್ಷಣೆಯ ಕಥೆ ಅಫ್ಘಾನಿಸ್ತಾನದ ದೊಡ್ಡ ಸಮಸ್ಯೆಯೊಂದನ್ನು ಬಯಲಿಗೆಳೆದಿದೆ. ನೀರಿನ ಕೊರತೆಯಿಂದ ಆಳಕ್ಕೆ ಕೊರೆಯುತ್ತಿರುವ ಕೊಳವೆಬಾವಿಗಳು ಒಂದೆಡೆಯಾದರೆ, ಬತ್ತಿದ ಬಳಿಕ ಮುಚ್ಚದೆ ಉಳಿಯುತ್ತಿರುವ ಪಾಳುಬಿದ್ದ ಕೊಳವೆಬಾವಿಗಳು ಮತ್ತೊಂದೆಡೆ—ಇವೆರಡೂ ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡುತ್ತಿವೆ.

ಸೌಜನ್ಯ: bbc.co.uk

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor