ಕಾಂಗೊದಲ್ಲಿ ಎಬೊಲಾ ಅಟ್ಟಹಾಸಕ್ಕೆ 2,325 ಜನರು ಮೃತ್ಯು
Photo Credit : AP
ಕಿನ್ಶಾಸ,ಆ.15: ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯದಲ್ಲಿ ಎಬೊಲಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ವರ್ಷ 2,325 ಮಂದಿ ಮೃತಪಟ್ಟಿದ್ದಾರೆ. ಇಷ್ಟು ಸಂಖ್ಯೆಯಲ್ಲಿ ಒಂದೇ ವರ್ಷದಲ್ಲಿ ಎಬೋಲಾದಿಂದ ಮೃತಪಟ್ಟಿರುವುದು ಇದು ಗರಿಷ್ಠವಾಗಿದೆ. 2018-2020ರಲ್ಲಿ ಎಬೋಲಾ ಸಾಂಕ್ರಾಮಿಕದ ಹಾವಳಿಯಿಂದಾಗಿ 2,299 ಮಂದಿ ಮೃತಪಟ್ಟಿದ್ದರು.
ಆಗಸ್ಟ್ 16ರವರೆಗೆ ಕಾಂಗೊದಲ್ಲಿ 4945 ಮಂದಿಗೆ ಎಬೋಲಾ ಸೋಂಕು ತಗಲಿರುವುದು ದೃಢಪಟ್ಟಿದೆ. ಕಳೆದ 24 ತಾಸುಗಳಲ್ಲಿ 101 ನೂತನ ಪ್ರಕರಣಗಳು ವರದಿಯಾಗಿದ್ದು, 33 ಮಂದಿ ಮೃತಪಟ್ಟಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ಚೇತರಿಸಿಕೊಂಡಿದ್ದಾರೆ. 730 ಮಂದಿಯನ್ನು ಆಸ್ಪತ್ರೆಯಲ್ಲಿ ಏಕಾಂತದಲ್ಲಿರಿಸಲಾಗಿದೆ.
ಕಾಂಗೋದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಬುಂಡಿಬುಗ್ಯೊ ಪ್ರಭೇದದ ಎಬೊಲಾ ವೈರಸ್ ಸೋಂಕಿಗೆ ಈವರೆಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಅಥವಾ ಲಸಿಕೆಯಾಗಲಿ ಇಲ್ಲ. ಹಿಂದಿನ ಎಬೋಲಾ ಸಾಂಕ್ರಾಮಿಕಗಳಿಗೆ ಹೋಲಿಸಿದರೆ ಈ ವೈರಸ್ ಸೋಂಕು ಅತ್ಯಂತವಾಗಿ ವೇಗವಾಗಿ ಹರಡುತ್ತಿದೆಯೆಂದು ವಿಶ್ವ ಆರೋಗ್ಯ ಸಂಸ್ಥೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಎಬೋಲಾ ಸೋಂಕಿನಿಂದ ಸಾವಿಗೀಡಾಗುವವರ ಸಂಖ್ಯೆಯು ಶೇ.46-47ಕ್ಕೆ ಏರಿಕೆಯಾಗಿದೆಯೆಂದು ಅಂಕಿಅಂಶಗಳು ತಿಳಿಸಿವೆ.