ಪಾತಾಳಕ್ಕೆ ಕುಸಿದ ಟ್ರಂಪ್ ಜನಪ್ರಿಯತೆ | ಇರಾನ್ ಯುದ್ಧದ ಪರಿಣಾಮ ಅಮೆರಿಕ ಅಧ್ಯಕ್ಷರ ಕಾರ್ಯನಿರ್ವಹಣೆಗೆ ಶೇ.64ರಷ್ಟು ಅಮೆರಿಕನ್ನರು ಅಸಮಾಧಾನ
ಡೊನಾಲ್ಡ್ ಟ್ರಂಪ್ | Photo Credit : AP
ಹೊಸದಿಲ್ಲಿ, ಆ.18: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನಪ್ರಿಯತೆಯ ದರವು, ಅವರ ಹಾಲಿ ಅಧ್ಯಕ್ಷೀಯ ಅವಧಿಯಲ್ಲೇ ಅತ್ಯಂತ ಕನಿಷ್ಠ ಮಟ್ಟದ್ದಾಗಿದೆ. ಇರಾನ್ ಜೊತೆಗಿನ ಅಮೆರಿಕದ ಯುದ್ಧದ ಅವಧಿಯು ವಿಸ್ತರಿಸಲಿದೆ ಎಂದು ಬಹುತೇಕ ಅಮೆರಿಕನ್ನರು ಭಾವಿಸಿದ್ದಾರೆ.
ಅಧ್ಯಕ್ಷರಾಗಿ ಟ್ರಂಪ್ ಅವರ ಕಾರ್ಯನಿರ್ವಹಣೆಯನ್ನು ಕೇವಲ ಶೇ.33ರಷ್ಟು ಅಮೆರಿಕನ್ನರು ಅನುಮೋದಿಸಿದ್ದರೆ, ಶೇ.64ರಷ್ಟು ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ನಡೆಸಲಾದ ಸಮೀಕ್ಷೆಯ ಸಂದರ್ಭದಲ್ಲಿ ಇದ್ದುದಕ್ಕಿಂತ ಅವರ ಜನಪ್ರಿಯತೆಯು ಈಗ ಶೇ. 35ರಷ್ಟು ಕುಸಿದಿದೆ.
2025ರಲ್ಲಿ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಎರಡನೆ ಬಾರಿಗೆ ಅಧಿಕಾರಕ್ಕೇರಿದಾಗ ಅಂದಾಜು ಶೇ.50ರಷ್ಟು ಅಮೆರಿಕನ್ನರು ಅವರನ್ನು ಬೆಂಬಲಿಸಿದ್ದರು. ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿಗಳನ್ನು ಆರಂಭಿಸಿದ ಆನಂತರ ಅವರ ಜನಪ್ರಿಯತೆ ಕ್ಷೀಣಿಸತೊಡಗಿತು. ಇರಾನ್ ಸಂಘರ್ಷದಿಂದಾಗಿ ಐದನೇ ಒಂದರಷ್ಟು ಜಾಗತಿಕ ತೈಲ ವ್ಯಾಪಾರದಲ್ಲಿ ವ್ಯತ್ಯಯವನ್ನುಂಟುಮಾಡಿದ್ದು, ಎಲ್‌ಪಿಜಿ ಹಾಗೂ ತೈಲದರಗಳಲ್ಲಿ ಭಾರೀ ಏರಿಕೆಯಾಗಿದೆ. ಇದರಿಂದಾಗಿ ಅಮೆರಿಕದ ಶ್ರೀಸಾಮಾನ್ಯರ ಕುಟುಂಬಗಳ ಮೇಲೆ ಆರ್ಥಿಕ ಹೊರೆಯುಂಟುಮಾಡಿದೆ.
ಇರಾನ್ ಯುದ್ಧದಿಂದ ಅಮೆರಿಕದ ಮೇಲಾಗಿರುವ ಆರ್ಥಿಕ ಪರಿಣಾಣವು ಟ್ರಂಪ್ ಹಾಗೂ ಮುಂದಿನ ನವೆಂಬರ್‌ನಲ್ಲಿ ನಡೆಯಲಿರುವ ಸಂಸದೀಯ ಚುನಾವಣೆಯಲ್ಲಿ ಬಹುಮತವನ್ನು ಕಾಯ್ದುಕೊಳ್ಳಲು ಬಯಸುತ್ತಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.