27 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದ ಭಾರತೀಯ ಮೂಲದ ವೃದ್ಧೆಯನ್ನು ಬಂಧಿಸಿದ ವಲಸೆ ಅಧಿಕಾರಿಗಳು
ವೆಂಕಟ ನರಸಾಂಬ ವಾಸಮ್‌ಶೆಟ್ಟಿ | Photo Credit : tribuneindia.com
ವಾಶಿಂಗ್ಟನ್,ಆ.18: ಸುಮಾರು 27 ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿದ್ದ ಮಹಿಳೆ ಹಾಗೂ ಗ್ರೀನ್‌ಕಾರ್ಡ್ ಹೊಂದಿರುವ ಭಾರತೀಯ ಮೂಲದ ಮಹಿಳೆಯನ್ನು ಅಮೆರಿಕದ ವಲಸೆ ಹಾಗೂ ಕಸ್ಟಮ್ಸ್ ನಿರ್ದೇಶನಾಲಯ (ಐಸಿಇ)ವು ಬಂಧಿಸಿದೆ. ಆಕೆಯನ್ನು ಅಮೆರಿಕದಿಂದ ಹೊರಗೆ ಕಳುಹಿಸುವ ಪ್ರಯತ್ನವನ್ನು ವಲಸೆ ಪ್ರಕರಣಗಳ ವಿಚಾರಣಾ ನ್ಯಾಯಾಧೀಶರು ತಳ್ಳಿಹಾಕಿದ ಹೊರತಾಗಿಯೂ ಆಕೆಯ ಬಂಧನವಾಗಿದೆ.
ವೆಂಕಟ ನರಸಾಂಬ ವಾಸಮ್‌ಶೆಟ್ಟಿ ಬಂಧಿತ ಮಹಿಳೆಯಾಗಿದ್ದು, ಆಕೆಯ ಇಬ್ಬರು ಮೊಮ್ಮಕ್ಕಳು 2013ರಿಂದೀಚೆಗೆ ಕಾನೂನುಬದ್ಧವಾಗಿ ಅಮೆರಿಕದ ಖಾಯಂ ಪ್ರಜೆಗಳಾಗಿದ್ದಾರೆ. ಆಗಸ್ಟ್ 11ರಂದು ಅಕ್ರಮ ವಲಸಿಗರ ತಪಾಸಣೆ ನಡೆಸುತ್ತಿರುವ ಐಸಿಇ ಅಧಿಕಾರಿಗಳ ತಂಡವು ಆಕೆಯನ್ನು ವಶಕ್ಕೆ ತೆಗೆದುಕೊಂಡಿತ್ತು.
ವೆಂಕಟನರಸಾಂಬ ಅವರನ್ನು ಗಡಿಪಾರು ಮಾಡುವ ಕುರಿತ ಅಮೆರಿಕ ಸರಕಾರದ ಆದೇಶವನ್ನು ರದ್ದುಪಡಿಸಿ, ಅಮೆರಿಕ ನ್ಯಾಯಾಲಯವು ಮೇನಲ್ಲಿ ತೀರ್ಪು ನೀಡಿದ್ದರೂ. ಆಕೆಯನ್ನು ಈಗ ಜಾರ್ಜಿಯದಲ್ಲಿರುವ ಐಸಿಇ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ.
2022ರಲ್ಲಿ ನರಸಾಂಬ ಅವರು ಹಲವಾರು ತಿಂಗಳುಗಳ ಕಾಲ ಭಾರತದಲ್ಲಿ ನೆಲೆಸಿದ್ದರಿಂದ ಅವರು ತನ್ನ ಕಾನೂನುಬದ್ಧವಾದ ಖಾಯಂ ವಾಸ್ತವ್ಯ ಸ್ಥಾನಮಾನವನ್ನು ತ್ಯಜಿಸಿದ್ದಾರೆಂದು ಫೆಡರಲ್ ಸರಕಾರ ಆಪಾದಿಸಿತ್ತು. ಆದರೆ ನರಸಾಂಬ ಅವರು ತನ್ನ ರೋಗಪೀಡಿತ ತಂದೆಯ ಶುಶ್ರೂಷೆಗಾಗಿ ಭಾರತದಲ್ಲಿ ಉಳಿದುಕೊಂಡಿದ್ದರು ಹಾಗೂ ಕೋವಿಡ್19 ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದರು ಎಂದು ವರದಿ ಹೇಳಿದೆ. ಆದಾಗ್ಯೂ ಅವರು, ತನ್ನ ಕುಟುಂಬ, ಉದ್ಯೋಗ ಹಾಗೂ ಮನೆಯನ್ನು ಹೊಂದುವ ಮೂಲಕ ಅಮೆರಿಕದಲ್ಲಿ ಗಣನೀಯವಾದ ಬಾಂಧವ್ಯವನ್ನು ಹೊಂದಿದ್ದಾರೆಂದು ಮೂಲಗಳು ತಿಳಿಸಿವೆ.
ವರಮಸೆಟ್ಟಿ ಅವರು 27 ವರ್ಷಗಳಿಂದ ಅಮೆರಿಕದಲ್ಲಿನೆಲೆಸಿದ್ದು, ಉತ್ತರ ಕರೋಲಿನಾದಲ್ಲಿ ವಿಕಲ ಚೇತನ ವಿದ್ಯಾರ್ಥಿಗಳಿಗೆ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.