ವಾಷಿಂಗ್ಟನ್: ಮಧ್ಯಂತರ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಡೆಮೋಕ್ರಾಟ್‌ ಗಳು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧದ ಹೋರಾಟ ತೀವ್ರಗೊಳಿಸಲು ಸಿದ್ಧತೆ ನಡೆಸಿದ್ದಾರೆ. ಇದರ ಮೊದಲ ಭಾಗವಾಗಿ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ವಿರುದ್ಧ ದೋಷಾರೋಪಣೆ ಪ್ರಕ್ರಿಯೆ ಆರಂಭಿಸಲು ಪಕ್ಷದ ನಾಯಕರು ಒಲವು ತೋರಿದ್ದಾರೆ. ಅಧಿಕಾರ ದುರುಪಯೋಗ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ಮತ್ತು ಇರಾನ್ ವಿರುದ್ಧದ ಯುದ್ಧಕ್ಕೆ ದೇಶವನ್ನು ತಳ್ಳಿದ ಆರೋಪಗಳನ್ನು ಹೆಗ್ಸೆತ್ ಎದುರಿಸುತ್ತಿದ್ದಾರೆ.

ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ನ ಡೆಮಾಕ್ರಟಿಕ್ ನಾಯಕ ಹಕೀಮ್ ಜೆಫ್ರಿಸ್ ಅವರು ಹೆಗ್ಸೆತ್ ವಿರುದ್ಧದ ದೋಷಾರೋಪಣೆ ನಿರ್ಣಯಕ್ಕೆ ಬಲವಾದ ಬೆಂಬಲ ವ್ಯಕ್ತಪಡಿಸಿದ್ದಾರೆ. ರಿಪಬ್ಲಿಕನ್ ಪ್ರತಿನಿಧಿ ಥಾಮಸ್ ಮಾಸ್ಸಿ ಅವರು ಮಂಡಿಸಲು ಉದ್ದೇಶಿಸಿರುವ ನಿರ್ಣಯದ ಕುರಿತು ರವಿವಾರ ಎಬಿಸಿ ನ್ಯೂಸ್‌ ಗೆ ಮಾತನಾಡಿದ ಜೆಫ್ರಿಸ್, ಅದನ್ನು ಬೆಂಬಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

"ಹೆಗ್ಸೆತ್ ವಿರುದ್ಧದ ನಿರ್ಣಯಕ್ಕೆ ನನ್ನ ದೃಢವಾದ ಬೆಂಬಲವಿದೆ. ಮಂಗಳವಾರ ಮತ್ತೆ ಸಭೆ ಸೇರಿದಾಗ ಡೆಮೋಕ್ರಾಟ್‌ ಗಳು ಈ ಪ್ರಸ್ತಾಪದ ಕುರಿತು ಚರ್ಚಿಸಲಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ಹೆಗ್ಸೆತ್ ಅವರು ಅಮೆರಿಕದ ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸಿದ್ದಾರೆ. ಇರಾನ್ ವಿರುದ್ಧದ ದುಬಾರಿ ಯುದ್ಧಕ್ಕೆ ದೇಶವನ್ನು ತಳ್ಳುವ ಮೂಲಕ ಅಮೆರಿಕನ್ನರ ಬದುಕನ್ನು ದುಸ್ತರಗೊಳಿಸಿದ್ದಾರೆ. ಯುದ್ಧದಿಂದ ಬೆಲೆಗಳು ಏರಿಕೆಯಾಗಿದ್ದು, ದೇಶದ ಸುರಕ್ಷತೆಯೂ ಕಡಿಮೆಯಾಗಿದೆ ಎಂದು ಜೆಫ್ರಿಸ್ ಆರೋಪಿಸಿದ್ದಾರೆ.

"ಪೀಟ್ ಹೆಗ್ಸೆತ್ ಅಧಿಕಾರದಿಂದ ಕೆಳಗಿಳಿಯಬೇಕು" ಎಂದು ಅವರು ಆಗ್ರಹಿಸಿದ್ದಾರೆ.

ಮುಂದಿನ ಜನವರಿಯಲ್ಲಿ ಕಾಂಗ್ರೆಸ್‌ ನ ನಿಯಂತ್ರಣ ವಹಿಸಿಕೊಂಡ ಬಳಿಕ ಇರಾನ್ ಸಂಘರ್ಷವನ್ನು ಅಂತ್ಯಗೊಳಿಸಲು ಡೆಮೋಕ್ರಾಟ್‌ ಗಳು ಪ್ರಯತ್ನಿಸಲಿದ್ದಾರೆ ಎಂದೂ ಜೆಫ್ರಿಸ್ ಹೇಳಿದ್ದಾರೆ. ಯುದ್ಧದಿಂದ ಅಮೆರಿಕನ್ನರ ಜೀವನ ವೆಚ್ಚ ಹೆಚ್ಚಾಗಿರುವುದು ಇದಕ್ಕೆ ಕಾರಣ ಎಂದು ಅವರು ಉಲ್ಲೇಖಿಸಿದ್ದಾರೆ.

ಆದರೆ, ದೋಷಾರೋಪಣೆ ಪ್ರಯತ್ನವನ್ನು ಹೆಗ್ಸೆತ್ ತಳ್ಳಿಹಾಕಿದ್ದಾರೆ. ವೀಡಿಯೊ ಸಂದೇಶದಲ್ಲಿ ಈ ಪ್ರಯತ್ನವನ್ನು 'ವೈಯಕ್ತಿಕ ವಿನಾಶದ ರಾಜಕೀಯ' ಎಂದು ಅಭಿಪ್ರಾಯಪಟ್ಟಿರುವ ಅವರು, ಅದು ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದಾರೆ ಎಂದು CNN ವರದಿ ಮಾಡಿದೆ.

ಟ್ರಂಪ್ ಆಡಳಿತದ ವಿರುದ್ಧ ತನಿಖೆಗೆ ಸಿದ್ಧತೆ

ಮಧ್ಯಂತರ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಡೆಮೋಕ್ರಾಟ್‌ ಗಳು, ಟ್ರಂಪ್ ಆಡಳಿತದ ವಿರುದ್ಧ ಹಲವು ತನಿಖೆಗಳನ್ನು ನಡೆಸಲು ಸಿದ್ಧತೆ ನಡೆಸಿದ್ದಾರೆ. ಮುಂದಿನ ಕಾಂಗ್ರೆಸ್‌ನಲ್ಲಿ ಹೌಸ್ ಓವರ್‌ಸೈಟ್ ಸಮಿತಿಯ ಅಧ್ಯಕ್ಷರಾಗುವ ನಿರೀಕ್ಷೆಯಿರುವ ಡೆಮಾಕ್ರಟಿಕ್ ಪ್ರತಿನಿಧಿ ರಾಬರ್ಟ್ ಗಾರ್ಸಿಯಾ, ಟ್ರಂಪ್ ಮತ್ತು ಅವರ ಕುಟುಂಬದ ವಿರುದ್ಧ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ. ಟ್ರಂಪ್ ಕುಟುಂಬವನ್ನು 'ಅಪರಾಧಿ ಕುಟುಂಬ' ಎಂದು ಹೇಳಿರುವ ಅವರು, ಅವರ ಚಟುವಟಿಕೆಗಳ ಕುರಿತು ತನಿಖೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

"ನಾವು ಹೋರಾಡದೆ ಸುಮ್ಮನಿರುವ ದಿನಗಳು ಮುಗಿದಿವೆ" ಎಂದು ಕ್ಯಾಲಿಫೋರ್ನಿಯಾದ ಡೆಮೋಕ್ರಾಟ್ ಗಾರ್ಸಿಯಾ ಹೇಳಿದ್ದಾರೆ.

ಕಾಂಗ್ರೆಸ್‌ ನ ತನಿಖೆಗಳ ಸಾಧ್ಯತೆಯನ್ನು ಟ್ರಂಪ್ ಟೀಕಿಸಿದ್ದಾರೆ. ಡೆಮೋಕ್ರಾಟ್‌ ಗಳು ಈಗಾಗಲೇ ಸಲ್ಲಿಸಿರುವ ಮಾಹಿತಿ ಮತ್ತು ದಾಖಲೆಗಳ ಕೋರಿಕೆಗಳನ್ನು 'ಉನ್ನತ ಮಟ್ಟದ ಸುಲಿಗೆ' ಎಂದು ಹೇಳಿರುವ ಅವರು, ಇದಕ್ಕೆ ಹೊಣೆಗಾರರಾದವರನ್ನು ಜವಾಬ್ದಾರರನ್ನಾಗಿ ಮಾಡಬೇಕು ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಅಟಾರ್ನಿ ಜನರಲ್ ಟಾಡ್ ಬ್ಲಾಂಚೆ ಅವರು ಡೆಮೋಕ್ರಾಟ್‌ ಗಳನ್ನು ಒಳಗೊಂಡ ಕ್ರಿಮಿನಲ್ ತನಿಖೆಗಳು ನಡೆಯುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.

"ಆಡಳಿತದ ಈಗಿನ ಸದಸ್ಯರನ್ನು ಬೆದರಿಸಲು ಅಥವಾ ಕಂಪೆನಿಗಳಿಗೆ ಬೆದರಿಕೆ ಹಾಕಲು ಅವರಿಗೆ ಅವಕಾಶವಿಲ್ಲ. ಅಧ್ಯಕ್ಷ ಟ್ರಂಪ್ ಅವರ ಬಗ್ಗೆ ಅವರು ತುಂಬಾ ಚಿಂತಿತರಾಗಿದ್ದಾರೆ. ಹಾಗೆ ಚಿಂತಿತರಾಗಿರಲೇಬೇಕು" ಎಂದು ಬ್ಲಾಂಚೆ ಹೇಳಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಆದರೆ, ದೋಷಾರೋಪಣೆ ಪ್ರಯತ್ನ ಮತ್ತು ತನಿಖೆಗಳೇ ಪಕ್ಷದ ಸಂಪೂರ್ಣ ಕಾರ್ಯಸೂಚಿಯಾಗಬಾರದು ಎಂದು ಕೆಲವು ಡೆಮೋಕ್ರಾಟ್‌ ಗಳು ಎಚ್ಚರಿಕೆ ನೀಡಿದ್ದಾರೆ.

ಸೆನೆಟರ್ ಆಗಿ ಆಯ್ಕೆಯಾಗಿರುವ ಆಡಮ್ ಹ್ಯಾಮಿಲ್ಟನ್ ಅವರು ದೋಷಾರೋಪಣೆ ಪ್ರಕ್ರಿಯೆ ಮುಂದುವರಿಸುವುದಕ್ಕಿಂತ ಸುರಕ್ಷತಾ ಕ್ರಮಗಳನ್ನು ರೂಪಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.

ಡೆಮೋಕ್ರಾಟ್‌ಗಳೊಂದಿಗೆ ಗುರುತಿಸಿಕೊಂಡಿರುವ ಸ್ವತಂತ್ರ ಸೆನೆಟರ್ ಬರ್ನಿ ಸ್ಯಾಂಡರ್ಸ್ ಕೂಡ ಟ್ರಂಪ್ ವಿರುದ್ಧದ ತನಿಖೆಯಲ್ಲೇ ಪಕ್ಷ ತನ್ನೆಲ್ಲ ಸಮಯವನ್ನು ಕಳೆಯಬಾರದು ಎಂದು ಒತ್ತಾಯಿಸಿದ್ದಾರೆ. ಕಾರ್ಮಿಕ ವರ್ಗದ ಕುಟುಂಬಗಳ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದ್ದಾರೆ.

"ಟ್ರಂಪ್ ಅವರನ್ನು ತನಿಖೆ ಮಾಡುವುದರಲ್ಲೇ ನಮ್ಮ ಎಲ್ಲ ಸಮಯವನ್ನು ಕಳೆಯಲು ಸಾಧ್ಯವಿಲ್ಲ. ಕಾರ್ಮಿಕ ವರ್ಗದ ಕುಟುಂಬಗಳ ಪರವಾಗಿ ನಾವು ನಿಲ್ಲಬೇಕು. ಅವರ ಬದುಕಿನಲ್ಲಿ ನೈಜ ಬದಲಾವಣೆ ತರಬೇಕು" ಎಂದು ಸ್ಯಾಂಡರ್ಸ್ ಹೇಳಿದ್ದಾರೆ.

ಹೆಗ್ಸೆತ್ ವಿರುದ್ಧ ನೌಕಾಪಡೆಯ ಮಾಜಿ ಮೀಸಲು ಮುಖ್ಯಸ್ಥರ ಟೀಕೆ

ಹೆಗ್ಸೆತ್ ವಿರುದ್ಧ ಡೆಮಾಕ್ರಟಿಕ್ ಪ್ರತಿನಿಧಿಯಾಗಿ ಆಯ್ಕೆಯಾಗಿರುವ ನ್ಯಾನ್ಸಿ ಲ್ಯಾಕೋರ್ ಕೂಡ ತೀವ್ರ ವಾಗ್ದಾಳಿ ನಡೆಸಿದ್ದಾರೆ. 2025ರ ಆಗಸ್ಟ್‌ ನಲ್ಲಿ ಹೆಗ್ಸೆತ್ ಅವರು ತಮ್ಮನ್ನು ನೌಕಾಪಡೆಯ ಮೀಸಲು ಮುಖ್ಯಸ್ಥ ಸ್ಥಾನದಿಂದ ತೆಗೆದುಹಾಕಿದ್ದರು ಎಂದು ಹೇಳಿರುವ ಲ್ಯಾಕೋರ್, ಹೆಗ್ಸೆತ್ ಅವರನ್ನು ದೇಶದ 'ಅತ್ಯಂತ ಅನರ್ಹ' ರಕ್ಷಣಾ ಕಾರ್ಯದರ್ಶಿ ಎಂದು ಹೇಳಿದ್ದಾರ ಎಂದು CNN ವರದಿ ಮಾಡಿದೆ.

CBS ನ್ಯೂಸ್‌ ನ 'ಫೇಸ್ ದಿ ನೇಷನ್' ಕಾರ್ಯಕ್ರಮದಲ್ಲಿ ಮಾತನಾಡಿದ ಲ್ಯಾಕೋರ್, ಹೆಗ್ಸೆತ್ ಅವರು ದೇಶಕ್ಕೆ ಗಮನಾರ್ಹ ಹಾನಿ ಉಂಟುಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಕ್ರಮಗಳಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಿದ್ದು, ಅಮೆರಿಕದ ಸೇನೆಯ ಸನ್ನದ್ಧತೆಯೂ ದುರ್ಬಲಗೊಂಡಿದೆ ಎಂದು ಹೇಳಿದ್ದಾರೆ.

ದೋಷಾರೋಪಣೆ ಚರ್ಚೆಯನ್ನು ಇರಾನ್ ಸಂಘರ್ಷದೊಂದಿಗೆ ಜೋಡಿಸಿರುವ ಅವರು, ಯುದ್ಧದಿಂದ ತಮ್ಮ ಕ್ಷೇತ್ರ ಮಾತ್ರವಲ್ಲದೆ ದೇಶದಾದ್ಯಂತ ಜೀವನ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಇರಾನ್ ವಿರುದ್ಧದ ಯುದ್ಧವನ್ನು ಅಂತ್ಯಗೊಳಿಸುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor