ಕೈರೋದಲ್ಲಿ ಎರಡು ರೈಲುಗಳ ನಡುವೆ ಢಿಕ್ಕಿ | ಕನಿಷ್ಠ 7 ಮೃತ್ಯು, 112ಕ್ಕೂ ಹೆಚ್ಚು ಜನರಿಗೆ ಗಾಯ
Photo Credit : AP
ಕೈರೋ, ನ. 8: ಈಜಿಪ್ಟ್ ನ ರಾಜಧಾನಿ ಕೈರೋ ನಗರದ ಹೊರವಲಯದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಕನಿಷ್ಠ 7 ಮಂದಿ ಮೃತಪಟ್ಟಿದ್ದು, 112ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಗಿಝಾ ಪ್ರಾಂತ್ಯದ ಅಲ್-ಅಯ್ಯತ್ ಜಿಲ್ಲೆಯಲ್ಲಿ ರವಿವಾರ ಈ ದುರಂತ ಸಂಭವಿಸಿದೆ. ಗಿಝಾ ಮತ್ತು ಫಯೌಮ್ ನಡುವೆ ಸಂಚರಿಸುತ್ತಿದ್ದ ಪ್ರಯಾಣಿಕ ರೈಲೊಂದು, ಕೈರೋದಿಂದ ದಕ್ಷಿಣದ ಅಸ್ವಾನ್ ಗೆ ತೆರಳುತ್ತಿದ್ದ ಮತ್ತೊಂದು ರೈಲಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರೈಲು ಹಳಿ ತಪ್ಪಿದ್ದು, ಅದರ ಬೋಗಿಗಳು ರಸ್ತೆಯೊಂದರ ಮೇಲೆ ಉರುಳಿ ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
►70ಕ್ಕೂ ಹೆಚ್ಚು ಆಂಬ್ಯುಲೆನ್ಸ್ ಗಳ ನಿಯೋಜನೆ
ಅಪಘಾತದ ತೀವ್ರತೆಯಿಂದಾಗಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು 70ಕ್ಕೂ ಹೆಚ್ಚು ಆಂಬ್ಯುಲೆನ್ಸ್ ಗಳನ್ನು ನಿಯೋಜಿಸಲಾಗಿತ್ತು. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಅಪಘಾತ ಸ್ಥಳದಲ್ಲಿನ ಅವಶೇಷಗಳನ್ನು ತೆರವುಗೊಳಿಸಿ, ರೈಲು ಸಂಚಾರವನ್ನು ಆದಷ್ಟು ಬೇಗ ಸಹಜ ಸ್ಥಿತಿಗೆ ತರಲು ತುರ್ತು ರಕ್ಷಣಾ ತಂಡಗಳು ಹಾಗೂ ಕ್ರೇನ್ ಗಳನ್ನು ಕಳುಹಿಸಲಾಗಿದೆ ಎಂದು ಈಜಿಪ್ಟ್ ರಾಷ್ಟ್ರೀಯ ರೈಲ್ವೆ ಇಲಾಖೆ ತಿಳಿಸಿದೆ.
►ಹಿಂದೆಯೂ ಇದೇ ಪ್ರದೇಶದಲ್ಲಿ ರೈಲು ದುರಂತ
ಅಪಘಾತ ಸಂಭವಿಸಿರುವ ಅಲ್-ಅಯ್ಯತ್ ಜಿಲ್ಲೆ ಈಜಿಪ್ಟ್ ನ ಭೀಕರ ರೈಲು ದುರಂತಗಳಿಗೂ ಸಾಕ್ಷಿಯಾಗಿದೆ.
2002ರಲ್ಲಿ ಕೈರೋದ ದಕ್ಷಿಣ ಭಾಗದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು 370ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. 2009ರಲ್ಲಿ ಇದೇ ಪ್ರದೇಶದಲ್ಲಿ ಸಂಭವಿಸಿದ ಹಲವು ರೈಲು ಅಪಘಾತಗಳಲ್ಲಿ ಡಝನ್ ಗಟ್ಟಲೆ ಜನರು ಪ್ರಾಣ ಕಳೆದುಕೊಂಡಿದ್ದರು.
►ಆಧುನೀಕರಣದ ನಡುವೆಯೂ ಹಳೆಯ ರೈಲು ವ್ಯವಸ್ಥೆ
ಈಜಿಪ್ಟ್ ನ ಸುಮಾರು 11 ಕೋಟಿ ಜನರು ರೈಲು ಸಾರಿಗೆಯನ್ನು ಅವಲಂಬಿಸಿದ್ದಾರೆ. ಆಫ್ರಿಕಾದ ಅತಿದೊಡ್ಡ ರೈಲು ಜಾಲಗಳಲ್ಲಿ ಒಂದನ್ನು ಹೊಂದಿರುವ ದೇಶದಲ್ಲಿ ರೈಲ್ವೆ ವ್ಯವಸ್ಥೆಯ ಆಧುನೀಕರಣದ ಅಗತ್ಯ ದೀರ್ಘಕಾಲದಿಂದಲೂ ಇದೆ.
ಕಳೆದ ಒಂದು ದಶಕದಲ್ಲಿ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಈಜಿಪ್ಟ್ ಶತಕೋಟಿ ಡಾಲರ್ ಗಳನ್ನು ಹೂಡಿಕೆ ಮಾಡಿದೆ. ಹೊಸ ಹೆದ್ದಾರಿಗಳ ನಿರ್ಮಾಣ ಹಾಗೂ ಅತಿ ವೇಗದ ರೈಲು ಮಾರ್ಗಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಆದರೆ, ಹಳೆಯದಾದ ರೈಲು ಸೇವೆಗಳನ್ನು ಸಂಪೂರ್ಣವಾಗಿ ನವೀಕರಿಸುವ ಕಾರ್ಯ ಇನ್ನೂ ಬಾಕಿ ಉಳಿದಿದೆ.