ವಾಶಿಂಗ್ಟನ್: ಅಮೆರಿಕವು ಇರಾನ್ ಮೇಲಿನ ತನ್ನ ಒತ್ತಡವನ್ನು ಮತ್ತಷ್ಟು ಬಿಗಿಗೊಳಿಸುತ್ತಿದ್ದು, ಈಗ ಸಮುದ್ರ ಮಾರ್ಗಗಳನ್ನು ಹೊರತುಪಡಿಸಿ ಇತರ ಮಾರ್ಗಗಳ ಮೇಲೆಯೂ ಗಮನ ಹರಿಸುತ್ತಿದೆ. ಇರಾನ್ ಆಯುಧಗಳು, ಸೂಕ್ಷ್ಮ ತಂತ್ರಜ್ಞಾನ ಮತ್ತು ಇತರ ನಿಷೇಧಿತ ಸರಕುಗಳನ್ನು ಸಾಗಿಸಲು ಬಳಸುವ ಭೂಮಾರ್ಗ ಹಾಗೂ ಕ್ಯಾಸ್ಪಿಯನ್ ಸಮುದ್ರದ ಮಾರ್ಗಗಳನ್ನು ಪತ್ತೆಹಚ್ಚಲು ಮತ್ತು ಅವುಗಳನ್ನು ತಡೆಯಲು ವಾಷಿಂಗ್ಟನ್ ಹೊಸ ಕಾರ್ಯಪಡೆಯೊಂದನ್ನು ರಚಿಸಿದೆ.

ಅಮೆರಿಕದ ಸೆಂಟ್ರಲ್ ಕಮಾಂಡ್‌ನ ಕಮಾಂಡರ್ ಅಡ್ಮಿರಲ್ ಬ್ರಾಡ್ ಕೂಪರ್ ಅವರು `ಟಾಸ್ಕ್ ಫೋರ್ಸ್ ಐರನ್ ಗೇಟ್' ಅನ್ನು ರಚಿಸಲು ಆದೇಶಿಸಿದ್ದಾರೆ. ಇದು ಫ್ಲೋರಿಡಾದ ಟ್ಯಾಂಪಾದಲ್ಲಿ ನೆಲೆ ಹೊಂದಿರುವ ಸುಮಾರು 20 ನಾಗರಿಕ ಮತ್ತು ಮಿಲಿಟರಿ ಸಿಬ್ಬಂದಿಯನ್ನು ಒಳಗೊಂಡ ತಂಡವಾಗಿದೆ. ಇರಾನ್‌ನ ಕಡಲ ವ್ಯಾಪಾರವನ್ನು ಸ್ಥಗಿತಗೊಳಿಸಲು ಮತ್ತು ಇರಾನ್ ಬಂದರುಗಳನ್ನು ಹಡಗುಗಳು ಪ್ರವೇಶಿಸುವುದನ್ನು ಅಥವಾ ನಿರ್ಗಮಿಸುವುದನ್ನು ತಡೆಯಲು ಅಮೆರಿಕ ತಿಂಗಳುಗಳಿಂದ ನಡೆಸುತ್ತಿರುವ ಪ್ರಯತ್ನಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

`ಇರಾನ್‌ನ ಉತ್ತರದ ಗಡಿಗಳಲ್ಲಿರುವ ರಸ್ತೆಗಳು, ರೈಲ್ವೆಗಳು ಮತ್ತು ಕಡಲ ಸಂಪರ್ಕಗಳ ವಿಸ್ತಾರವಾದ ಜಾಲಕ್ಕೆ ಸಂಬಂಧಿಸಿದ ಮತ್ತೊಂದು ಸಂಭಾವ್ಯ ಮಾರ್ಗವನ್ನು ಮುಚ್ಚಲು ಅಮೆರಿಕ ಈಗ ಬಯಸಿದೆ. ಟಾಸ್ಕ್ ಫೋರ್ಸ್ ಐರನ್ ಗೇಟ್‌ನ ಸ್ಥಾಪನೆಯು ಸಮುದ್ರದಲ್ಲಿ ಇರಾನ್ ವಿರುದ್ಧದ ನಮ್ಮ ವಜ್ರ ಮುಷ್ಠಿಯ ದಿಗ್ಬಂಧನದ ಯಶಸ್ಸನ್ನು ಬಲಪಡಿಸುತ್ತದೆ. ಅಮೆರಿಕದ ಇತರ ಸರಕಾರಿ ಸಂಸ್ಥೆಗಳೊಂದಿಗೆ ಸೆಂಟ್ರಲ್ ಕಮಾಂಡ್‌ನ ಸಹಯೋಗವನ್ನು ಬಲಪಡಿಸುವುದರಿಂದ ಇರಾನ್ ಭಯೋತ್ಪಾದನೆಗೆ ಹಣಕಾಸು ಒದಗಿಸುವುದು, ಆಯುಧ ಕಾರ್ಖಾನೆಗಳನ್ನು ಪುನರ್ನಿರ್ಮಿಸುವುದು ಮತ್ತು ತಮ್ಮ ಮಿಲಿಟರಿಯನ್ನು ಬಲಪಡಿಸುವುದನ್ನು ಮತ್ತಷ್ಟು ನಿಯಂತ್ರಿಸಬಹುದು' ಎಂದು ಕೂಪರ್ ಹೇಳಿದರು.

ಈ ಕಾರ್ಯಪಡೆಯು ಇತರ ಅಮೆರಿಕ ಸರಕಾರಿ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಲಿದ್ದು, ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಗಳು, ದ್ವಂದ್ವ ಬಳಕೆಯ ತಂತ್ರಜ್ಞಾನಗಳು , ನಿಷೇಧಿತ ಸಾಮಗ್ರಿಗಳು ಮತ್ತು ಕಾನೂನುಬಾಹಿರ ಆದಾಯದ ಮೂಲಗಳ ಚಲನವಲನಗಳನ್ನು ಪತ್ತೆಹಚ್ಚಿ ತಡೆಯಲಿದೆ.

ಇರಾನ್‌ನ ಬಂದರುಗಳನ್ನು ಮುಚ್ಚುವುದರಿಂದ ಹೊರಗಿನ ಪ್ರಪಂಚದೊಂದಿಗಿನ ಅದರ ಸಂಪರ್ಕ ಸಂಪೂರ್ಣವಾಗಿ ಬಂದ್ ಆಗುವುದಿಲ್ಲ. ತುರ್ಕಿಯೆ, ಇರಾಕ್, ಪಾಕಿಸ್ತಾನ, ಅಫ್ಘಾನಿಸ್ತಾನ, ಅರ್ಮೇನಿಯಾ, ಅಜರ್ಬೈಜಾನ್ ಮತ್ತು ತುರ್ಕಮೆನಿಸ್ತಾನ್ ಸೇರಿದಂತೆ ಹಲವಾರು ದೇಶಗಳೊಂದಿಗೆ ಇರಾನ್ ಭೂ ಗಡಿಯನ್ನು ಹಂಚಿಕೊಂಡಿದೆ. ಇದು ಉತ್ತರದಲ್ಲಿ ಕ್ಯಾಸ್ಪಿಯನ್ ಸಮುದ್ರಕ್ಕೂ ಪ್ರವೇಶವನ್ನು ಹೊಂದಿದ್ದು, ರಶ್ಯ ಮತ್ತು ಇತರ ದೇಶಗಳೊಂದಿಗೆ ವ್ಯಾಪಾರ ಮಾಡಲು ಮತ್ತೊಂದು ಮಾರ್ಗವನ್ನು ಸೃಷ್ಟಿಸುತ್ತದೆ.

ಅಮೆರಿಕದ ನೌಕಾ ದಿಗ್ಬಂಧನವು ಇರಾನ್‌ಗೆ ಕಡಲ ವ್ಯಾಪಾರವನ್ನು ಹೆಚ್ಚು ಕಷ್ಟಕರವಾಗಿಸಿರುವುದರಿಂದ ಭೂ ಮಾರ್ಗಗಳ ಜಾಲವು ಅತ್ಯಂತ ಪ್ರಮುಖವಾಗಿದೆ. ನೌಕಾ ದಿಗ್ಬಂಧನವು ಇತ್ತೀಚಿನ ತಿಂಗಳುಗಳಲ್ಲಿ ಇರಾನ್ 25 ಶತಕೋಟಿ ಡಾಲರ್‌ಗಿಂತಲೂ ಹೆಚ್ಚು ಮೌಲ್ಯದ ಕಚ್ಚಾ ತೈಲವನ್ನು ರಫ್ತು ಮಾಡುವುದನ್ನು ತಡೆದಿದೆ ಎಂದು ಸೆಂಟ್ಕಾಮ್ ಹೇಳಿದೆ.

ಕ್ಯಾಸ್ಪಿಯನ್ ಸಮುದ್ರ ಮಾರ್ಗ

ಅಮೆರಿಕದ ಹೊಸ ಕಾರ್ಯತಂತ್ರಕ್ಕೆ ಕ್ಯಾಸ್ಪಿಯನ್ ಸಮುದ್ರವು ಅತ್ಯಂತ ಪ್ರಮುಖವಾಗಿದೆ. ಇರಾನ್‌ನ ಉತ್ತರ ಕರಾವಳಿಯು ಅದಕ್ಕೆ ರಷ್ಯಾ ಮತ್ತು ಇತರ ಕ್ಯಾಸ್ಪಿಯನ್ ರಾಷ್ಟ್ರಗಳೊಂದಿಗೆ ನೇರ ಸಮುದ್ರ ಮಾರ್ಗದ ಸಂಪರ್ಕವನ್ನು ಒದಗಿಸುತ್ತದೆ. ಟೆಹರಾನ್ ನಗರವು ಕ್ಯಾಸ್ಪಿಯನ್‌ನ ದಕ್ಷಿಣ ಕರಾವಳಿಗೆ ಹತ್ತಿರದಲ್ಲಿದ್ದು, ಈ ಪ್ರದೇಶವು ಇರಾನ್ ಮತ್ತು ಅದರ ಉತ್ತರದ ವ್ಯಾಪಾರ ಪಾಲುದಾರರ ನಡುವೆ ಒಂದು ಪ್ರಮುಖ ಕೊಂಡಿಯಾಗಿದೆ.

ಐರನ್ ಗೇಟ್ ವ್ಯವಸ್ಥೆಯು ಇರಾನ್‌ನ ಭೂ ಗಡಿಗಳು ಮತ್ತು ಕ್ಯಾಸ್ಪಿಯನ್ ಸಮುದ್ರದ ಮೂಲಕ ನಡೆಯುವ ಸಂಚಾರಗಳ ಮೇಲೆ ಗಮನ ಹರಿಸಲಿದೆ ಎಂದು ಸೆಂಟಕಾಮ್ ಸ್ಪಷ್ಟವಾಗಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor