ಸಿಯಾಟಲ್: ಅಮೆರಿಕದ ಸಿಯಾಟಲ್ನಲ್ಲಿ ನಡೆದ ದೀಪಾವಳಿ ಆಚರಣೆಗೆ ತೀವ್ರ ಬಲಪಂಥೀಯ ಕಾರ್ಯಕರ್ತ ಜೇಕ್ ಲ್ಯಾಂಗ್ ಮತ್ತು ಆತನ ಸಹಚರ ಥಾಮಸ್ ಅಲೆನ್ ಅಡ್ಡಿಪಡಿಸಲು ಯತ್ನಿಸಿದ್ದು, ಹಿಂದೂ ಸಮುದಾಯದ ವಿರುದ್ಧ ಜನಾಂಗೀಯ ನಿಂದನೆಗಳನ್ನು ಪ್ರದರ್ಶಿಸಿದ್ದಾರೆ.

ಶನಿವಾರ ನಡೆದ ದೀಪಾವಳಿ ಕಾರ್ಯಕ್ರಮಕ್ಕೆ 'ಎಲ್ಲ ಡಾಟ್ ಹೆಡ್ ಗಳನ್ನು ಗಡಿಪಾರು ಮಾಡಿ' ಎಂಬ ಫಲಕಗಳನ್ನು ಹಿಡಿದುಕೊಂಡು ನುಗ್ಗಿದ ಕಾರ್ಯಕರ್ತರು, ಆಚರಣೆಯನ್ನು ಅಡ್ಡಿಪಡಿಸಲು ಯತ್ನಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲವರು ತಡೆದರು.

ಘಟನೆಯ ಬಳಿಕ ಲ್ಯಾಂಗ್, ದೀಪಾವಳಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಚಿತ್ರಗಳನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾನೆ. ಅಲ್ಲದೆ, ಹಿಂದೂಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾನೆ. ಟೆಕ್ಸಾಸ್ ನಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಬೆಂಬಲ ಹೆಚ್ಚಾಗಲು ಹಿಂದೂಗಳೇ ಕಾರಣ ಎಂದು ಆರೋಪಿಸಿದ್ದಾನೆ ಎಂದು ತಿಳಿದು ಬಂದಿದೆ.

ಈ ಘಟನೆಯನ್ನು ಅಮೆರಿಕದ ಕಾಂಗ್ರೆಸ್ ಸದಸ್ಯೆ ಪ್ರಮೀಳಾ ಜಯಪಾಲ್ ಸೇರಿದಂತೆ ಹಲವು ಪ್ರಮುಖ ಭಾರತೀಯ-ಅಮೆರಿಕನ್ನರು ತೀವ್ರವಾಗಿ ಖಂಡಿಸಿದ್ದಾರೆ.

ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಪ್ರಮೀಳಾ ಜಯಪಾಲ್, ಈ ಕೃತ್ಯವನ್ನು ಜನಾಂಗೀಯ ಪ್ರದರ್ಶನ ಎಂದು ಹೇಳಿದ್ದಾರೆ. ಭಾರತೀಯ-ಅಮೆರಿಕನ್ ಸಮುದಾಯವು ಯಾವುದೇ ಭಯವಿಲ್ಲದೆ ತಮ್ಮ ಹಬ್ಬವನ್ನು ಆಚರಿಸುವಂತಾಗಬೇಕು ಎಂದು ಒತ್ತಾಯಿಸಿದ್ದಾರೆ.

ಭಾರತೀಯ-ಅಮೆರಿಕನ್ ಉದ್ಯಮಿ ಅಜಯ್ ಜೈನ್ ಭುಟೋರಿಯಾ ಕೂಡ ಘಟನೆಯನ್ನು ಖಂಡಿಸಿದ್ದಾರೆ. ಇದನ್ನು 'ಶುದ್ಧ ಧರ್ಮಾಂಧತೆ' ಎಂದು ಹೇಳಿರುವ ಅವರು, ಹಿಂದೂಗಳನ್ನು ಗುರಿಯಾಗಿಸಿಕೊಂಡು ಜನಾಂಗೀಯ ನಿಂದನೆ ಮಾಡುವುದಕ್ಕೆ ಅಮೆರಿಕದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಹೇಳಿದ್ದಾರೆ.

ದೀಪಾವಳಿ ಬೆಳಕು, ಕುಟುಂಬ ಮತ್ತು ಸಂತೋಷದ ಹಬ್ಬವೇ ಹೊರತು ಬೆದರಿಕೆಯಲ್ಲ. ಜನಾಂಗೀಯ ನಿಂದನೆ ಮತ್ತು ಪಿತೂರಿಯ ಮಾತುಗಳ ಮೂಲಕ ಹಿಂದೂ ಅಮೆರಿಕನ್ನರು ಹಾಗೂ ಭಾರತೀಯ ವಲಸಿಗರನ್ನು ಗುರಿಯಾಗಿಸಿಕೊಳ್ಳುವುದಕ್ಕೆ ಈ ದೇಶದಲ್ಲಿ ಯಾವುದೇ ಸ್ಥಾನವಿಲ್ಲ. ನಾವು ಇಂತಹ ಜನಾಂಗೀಯತೆಯನ್ನು ವಿರೋಧಿಸುತ್ತೇವೆ. ಪ್ರತಿಯೊಬ್ಬ ಅಮೆರಿಕನ್ನರೂ ತಮ್ಮ ಪರಂಪರೆಯನ್ನು ಮುಕ್ತವಾಗಿ ಆಚರಿಸುವ ಹಕ್ಕನ್ನು ಬೆಂಬಲಿಸುತ್ತೇವೆ" ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

►ಇತರ ದೀಪಾವಳಿ ಕಾರ್ಯಕ್ರಮಗಳಿಗೂ ಬೆದರಿಕೆ

ಉತ್ತರ ಅಮೆರಿಕದ ಹಿಂದೂಗಳ ಒಕ್ಕೂಟ (CoHNA) ಕೂಡ ಈ ಘಟನೆಯನ್ನು ಖಂಡಿಸಿದೆ. ಸಿಯಾಟಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಲಿರುವ ಇತರ ದೀಪಾವಳಿ ಕಾರ್ಯಕ್ರಮಗಳಿಗೂ ಈ ಕಾರ್ಯಕರ್ತರು ಅಡ್ಡಿಪಡಿಸುವುದಾಗಿ ಘೋಷಿಸಿದ್ದಾರೆ. ಹೀಗಾಗಿ, ಆ ಪ್ರದೇಶದ ಹಿಂದೂ ಸಮುದಾಯದವರು ದೀಪಾವಳಿ ಆಚರಿಸುವಾಗ ಎಚ್ಚರಿಕೆಯಿಂದ ಇರುವಂತೆ ಒಕ್ಕೂಟ ಸೂಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor