ಕೃಷಿ, ಕೈಗಾರಿಕಾ ಉಪಕರಣಗಳ ಮೇಲಿನ ಸುಂಕ 15%ಕ್ಕೆ ಇಳಿಸಿದ ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್ | Photo Credit : PTI
ವಾಶಿಂಗ್ಟನ್, ಜೂ.2: ಉಕ್ಕು, ಅಲ್ಯುಮೀನಿಯಂ ಮತ್ತು ತಾಮ್ರವನ್ನು ಒಳಗೊಂಡಿರುವ ಆಮದುಗಳ ಮೇಲಿನ ಸುಂಕವನ್ನು ಪರಿಷ್ಕರಿಸುವ ಜೊತೆಗೆ, ಹಲವಾರು ವರ್ಗಗಳ ಕೃಷಿ ಮತ್ತು ಕೈಗಾರಿಕಾ ಉಪಕರಣಗಳ ಮೇಲಿನ ಸುಂಕವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವ ಘೋಷಣೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಸಹಿ ಹಾಕಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಮಾತುಕತೆ ಮುಂದುವರಿಯುತ್ತಿರುವ ಸಂದರ್ಭದಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಹೊಸ ಘೋಷಣೆಯಡಿ, ಕೆಲವು ಕೃಷಿ ಉಪಕರಣಗಳ ಮೇಲಿನ ಸುಂಕವನ್ನು 25%ದಿಂದ 15%ಕ್ಕೆ ಇಳಿಸಲಾಗುವುದು. ಇದು 2027ರ ಡಿಸೆಂಬರ್ 31ರವರೆಗೆ ಜಾರಿಯಲ್ಲಿರುತ್ತದೆ. ಈ ಕ್ರಮವು ಉತ್ಪಾದಕರಿಗೆ ವೆಚ್ಚವನ್ನು ಕಡಿಮೆ ಮಾಡುವ ಮತ್ತು ಕೃಷಿ ಕ್ಷೇತ್ರದಲ್ಲಿ ಹೂಡಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.
ತಾತ್ಕಾಲಿಕ 15% ಸುಂಕ ದರಕ್ಕೆ ಅರ್ಹವಾದ ಕೈಗಾರಿಕಾ ಉತ್ಪನ್ನಗಳ ಪಟ್ಟಿಯನ್ನು ಶ್ವೇತಭವನ ವಿಸ್ತರಿಸಿದ್ದು ಪರಿಷ್ಕೃತ ವರ್ಗದಡಿ ಈಗ ಅಮೆರಿಕದ ವ್ಯಾಪಾರ ಒಪ್ಪಂದದ ವ್ಯಾಪ್ತಿಯಡಿ ಬರುವ ದೇಶಗಳಿಂದ ಆಮದು ಆಗುವ ಬುಲ್ಡೋಝರ್‌ಗಳು, ಫೋರ್ಕ್‍ಲಿಫ್ಟ್‍ನಂತಹ ಕೈಗಾರಿಕಾ ಉಪಕರಣಗಳು ಸೇರಿವೆ. ಸುಂಕದ ಬದಲಾವಣೆಯು ಅಮೆರಿಕದೊಂದಿಗೆ ಮಧ್ಯಂತರ ವ್ಯಾಪಾರ ಒಪ್ಪಂದದ ಮಾತುಕತೆ ಮುಂದುವರಿಸಿರುವ ಭಾರತದ ಮೇಲೆ ಮಿಶ್ರ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ.