×
Ad

ʼ"ನಾನು ಇಲ್ಲದಿದ್ದರೆ ನೀನು ಜೈಲಿನಲ್ಲಿ ಇರುತ್ತಿದ್ದೆ” : ಲೆಬನಾನ್ ಮೇಲೆ ದಾಳಿ ಮುಂದುವರಿಸಿದ ನೆತನ್ಯಾಹು ವಿರುದ್ಧ ಟ್ರಂಪ್ ಆಕ್ರೋಶ: ವರದಿ

Update: 2026-06-02 10:28 IST
Photo| indiatoday

ವಾಷಿಂಗ್ಟನ್‌: ಲೆಬನಾನ್ ಮೇಲೆ ದಾಳಿಯನ್ನು ಮುಂದುವರಿಸಿರುವ ಹಿನ್ನೆಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.

ಹಿಜ್ಬುಲ್ಲಾವನ್ನು ಗುರಿಯಾಗಿಸಿ ದಕ್ಷಿಣ ಲೆಬನಾನ್‌ನಲ್ಲಿ ಕಾರ್ಯಾಚರಣೆಗಳನ್ನು ವಿಸ್ತರಿಸಲು ಇಸ್ರೇಲ್ ಆದೇಶಿಸಿದ ಬೆನ್ನಲ್ಲೆ, ಟ್ರಂಪ್ ಹಾಗೂ ನೆತನ್ಯಾಹು ನಡುವೆ ದೂರವಾಣಿಯಲ್ಲಿ ಮಾತುಕತೆ ನಡೆದಿದೆ. ಈ ವೇಳೆ ನೆತನ್ಯಾಹು ವಿರುದ್ಧ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.  

Axios ಪ್ರಕಾರ, ದೂರವಾಣಿ ಸಂಭಾಷಣೆಯ ವೇಳೆ ಟ್ರಂಪ್ ನೆತನ್ಯಾಹು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನೆತನ್ಯಾಹು ನಡೆ ಇಸ್ರೇಲ್ ಅನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಪ್ರತ್ಯೇಕಿಸುತ್ತದೆ ಮತ್ತು ಇರಾನ್‌ನೊಂದಿಗೆ ನಡೆಯುತ್ತಿರುವ ರಾಜತಾಂತ್ರಿಕ ಮಾತುಕತೆಗೆ ಅಡ್ಡಿಯುಂಟು ಮಾಡುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.

ಮೂಲಗಳ ಪ್ರಕಾರ, ನೆತನ್ಯಾಹುಗೆ ʼಹುಚ್ಚʼ ಎಂದು ಟ್ರಂಪ್ ಕರೆದಿದ್ದಾರೆ. "ನಾನು ಇಲ್ಲದಿದ್ದರೆ ನೀನು ಜೈಲಿನಲ್ಲಿ ಇರುತ್ತಿದ್ದೆ. ನಿನ್ನನ್ನು ನಾನು ರಕ್ಷಿಸುತ್ತಿದ್ದೇನೆ. ಈಗ ಎಲ್ಲರೂ ನಿನ್ನನ್ನು ದ್ವೇಷಿಸುತ್ತಿದ್ದಾರೆ. ಎಲ್ಲರೂ ಇಸ್ರೇಲ್ ಅನ್ನು ದ್ವೇಷಿಸುತ್ತಾರೆ" ಎಂದು ಟ್ರಂಪ್ ನೆತನ್ಯಾಹುಗೆ ಹೇಳಿದ್ದಾಗಿ ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪೋನ್ ಸಂಭಾಷಣೆಯ ಸಮಯದಲ್ಲಿ ಕೋಪಗೊಂಡ ಟ್ರಂಪ್, "ನೀನು ಏನು ಮಾಡುತ್ತಿದ್ದೀಯಾ?" ಎಂದು ನೆತನ್ಯಾಹುಗೆ ತರಾಟೆಗೆ ತೆಗೆದುಕೊಂಡರು ಎಂದು ಕೆಲ ಅಧಿಕಾರಿಗಳು ಹೇಳಿದ್ದಾರೆ.

ಲೆಬನಾನ್‌ನಲ್ಲಿ ಇಸ್ರೇಲ್‌ ದಾಳಿ ಮುಂದುವರಿದರೆ ಶಾಂತಿ ಮಾತುಕತೆ ಮೇಲೆ ಪರಿಣಾಮ ಬೀರಲಿದೆ. ಲೆಬನಾನ್‌ನಲ್ಲಿ ಕದನ ವಿರಾಮವು ಅಮೆರಿಕದ ಜೊತೆಗಿನ ಶಾಂತಿ ಒಪ್ಪಂದದ ಪ್ರಮುಖ ಅಂಶವಾಗಿದೆ ಎಂದು ಇರಾನ್‌ ಪದೇ ಪದೇ ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News