Lebanon ಮೇಲಿನ ದಾಳಿ ವಿಸ್ತರಿಸಿದ ಇಸ್ರೇಲ್; ಅಮೆರಿಕ ಜೊತೆಗಿನ ಮಾತುಕತೆ ಸ್ಥಗಿತಗೊಳಿಸಿದ ಇರಾನ್
Photo Credit : aljazeera.com
ಟೆಹರಾನ್, ಜೂ. 1: ಲೆಬನಾನ್ ನಲ್ಲಿ ಇಸ್ರೇಲ್ ತನ್ನ ಸೇನಾ ಕಾರ್ಯಾಚರಣೆಗಳನ್ನು ವಿಸ್ತರಿಸುತ್ತಿರುವುದರಿಂದ ವಲಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಮಧ್ಯಸ್ಥಿಕೆದಾರರ ಮೂಲಕ ಅಮೆರಿಕದೊಂದಿಗೆ ನಡೆಸುತ್ತಿದ್ದ ಮಾತುಕತೆಗಳನ್ನು ಇರಾನ್ ಸೋಮವಾರ ಸ್ಥಗಿತಗೊಳಿಸಿದೆ ಎಂದು ಇರಾನ್ ನ ಸರ್ಕಾರಿ ಮಾಧ್ಯಮ ತಿಳಿಸಿದೆ.
ಇಸ್ರೇಲ್ ಮತ್ತು ಅದರ ಬೆಂಬಲಿಗರನ್ನು ಶಿಕ್ಷಿಸುವುದಕ್ಕಾಗಿ ಹಾರ್ಮುಝ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಲು ಹಾಗೂ ಬಾಬ್ ಅಲ್-ಮಂದೇಬ್ ಜಲಸಂಧಿ ಸೇರಿದಂತೆ ಇತರ ಪ್ರದೇಶಗಳಿಗೂ ನಿರ್ಬಂಧವನ್ನು ವಿಸ್ತರಿಸಲು ತನ್ನ ‘ರೆಸಿಸ್ಟೆನ್ಸ್ ಫ್ರಂಟ್’ ಗುಂಪು ನಿರ್ಧರಿಸಿದೆ ಎಂದು ಇರಾನ್ ಹೇಳಿದೆ.
ಈ ‘ರೆಸಿಸ್ಟೆನ್ಸ್ ಫ್ರಂಟ್’ನಲ್ಲಿ ಯೆಮನ್, ಲೆಬನಾನ್ ಹಾಗೂ ಇರಾಕ್ನಲ್ಲಿರುವ ಇರಾನ್ ನ ಶಿಯಾ ಮಿತ್ರರು ಇದ್ದಾರೆ.
ಲೆಬನಾನ್ ನಲ್ಲಿ ಇಸ್ರೇಲ್ ನ ಮಿಲಿಟರಿ ಕಾರ್ಯಾಚರಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ, ಮಧ್ಯಸ್ಥಿಕೆದಾರರ ಮೂಲಕ ಅಮೆರಿಕದೊಂದಿಗೆ ನಡೆಸುತ್ತಿರುವ ಸಂದೇಶ ಹಾಗೂ ದಾಖಲೆಗಳ ವಿನಿಮಯವನ್ನು ಇರಾನ್ ನ ಸಂಧಾನ ತಂಡ ನಿಲ್ಲಿಸಿದೆ ಎಂದು ಇರಾನ್ ನ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೊನೆಗೊಳಿಸುವ ರಾಜತಾಂತ್ರಿಕ ಪ್ರಯತ್ನಗಳು ಸ್ಥಗಿತಗೊಂಡಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.
‘ಲೆಬನಾನ್ ನಲ್ಲಿ ಜಿಯೋನಿಸ್ಟ್ ಆಡಳಿತದ (ಇಸ್ರೇಲ್) ಅಪರಾಧಗಳು ಮುಂದುವರಿದಿವೆ. ಕದನ ವಿರಾಮದ ಷರತ್ತುಗಳ ಪೈಕಿ ಲೆಬನಾನ್ ನಲ್ಲಿ ಶಾಂತಿ ನೆಲೆಸಬೇಕೆನ್ನುವುದೂ ಒಂದಾಗಿತ್ತು. ಈಗ ಲೆಬನಾನ್ ಸೇರಿದಂತೆ ಎಲ್ಲ ವಿಷಯಗಳಲ್ಲೂ ಕದನ ವಿರಾಮದ ಉಲ್ಲಂಘನೆ ಆಗಿರುವುದರಿಂದ, ಇರಾನ್ ನ ಸಂಧಾನ ತಂಡ ಮಧ್ಯಸ್ಥಿಕೆದಾರರ ಮೂಲಕ ನಡೆಸುತ್ತಿರುವ ಮಾತುಕತೆ ಹಾಗೂ ಸಂದೇಶಗಳ ವಿನಿಮಯವನ್ನು ಸ್ಥಗಿತಗೊಳಿಸುತ್ತಿದೆ’ ಎಂದು ‘ತಸ್ನಿಮ್’ ವರದಿ ಮಾಡಿದೆ.
ಲೆಬನಾನ್ ನಲ್ಲಿ ಯಾವುದೇ ರೀತಿಯ ಉದ್ವಿಗ್ನತೆ ಉಂಟಾದರೆ ಅದನ್ನು ಅಮೆರಿಕ ಪಾಲುದಾರನಾಗಿರುವ ಕದನ ವಿರಾಮದ ಉಲ್ಲಂಘನೆ ಎಂದು ಪರಿಗಣಿಸಲಾಗುವುದು ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ ಹೇಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
‘ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮವು ಲೆಬನಾನ್ ಸೇರಿದಂತೆ ಎಲ್ಲ ವಿಷಯಗಳನ್ನು ಒಳಗೊಂಡಿದೆ. ಒಂದು ವಿಷಯದಲ್ಲಿನ ಉಲ್ಲಂಘನೆಯೆಂದರೆ ಕದನ ವಿರಾಮದ ಎಲ್ಲ ವಿಷಯಗಳ ಉಲ್ಲಂಘನೆಯಂತೆ. ಕದನ ವಿರಾಮದ ಯಾವುದೇ ಷರತ್ತಿನ ಉಲ್ಲಂಘನೆಯ ಪರಿಣಾಮಗಳಿಗೆ ಅಮೆರಿಕ ಮತ್ತು ಇಸ್ರೇಲ್ ಜವಾಬ್ದಾರಿಯಾಗಿವೆ’ ಎಂದು ಅರಾಕ್ಚಿ ಎಕ್ಸ್ನಲ್ಲಿ ಬರೆದಿದ್ದಾರೆ.