×
Ad

ಕಾಂಗೋದಲ್ಲಿ ಎಬೋಲಾ ಸೋಂಕು ಕಳವಳಕಾರಿ ಪ್ರಮಾಣದಲ್ಲಿ ಹರಡುತ್ತಿದೆ : ಎಂಎಸ್‌ಎಫ್

Update: 2026-05-31 22:34 IST

Photo Credit : aljazeera.com

ಕಿನ್ಸಾಸ,ಮೇ 31: ಕಾಂಗೋ ಪ್ರಜಾತಾಂತ್ರಿಕ ಗಣರಾಜ್ಯದಲ್ಲಿ ಎಬೋಲಾ ಸೋಂಕು ಕಾಡ್ಗಿಚ್ಚಿನಂತೆ ಹರಡುತ್ತಿದ್ದು ಪರಿಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ ಎಂದು ಅಂತರ್‌ರಾಷ್ಟ್ರೀಯ ವೈದ್ಯಕೀಯ ಸೇವಾಸಂಸ್ಥೆ ‘ಮೆಡಿಸಿನ್ಸ್ ಸ್ಯಾನ್ಸ್ ಫ್ರಂಟಿಯರ್ಸ್‌ ’(ಎಂಎಸ್‌ಎಫ್) ಬಣ್ಣಿಸಿದೆ. ಅಲ್ಲದೆ ಈ ಮಾರಣಾಂತಿಕ ರೋಗದ ಹರಡುವಿಕೆಯ ಪ್ರಮಾಣದ ಕುರಿತಾದ ನಿಖರ ಅಂಕಿಅಂಶಗಳು ಇನ್ನೂ ದೊರೆತಿಲ್ಲವೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಕಾಂಗೋ ಗಣರಾಜ್ಯದ ಇಟೂರಿ ಪ್ರಾಂತದಲ್ಲಿ ಸೋಂಕು ರೋಗವು ಹರಡಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಓ) ಘೋಷಿಸಿದ ಎರಡು ವಾರಗಳ ಬಳಿಕ ಎಂಎಸ್‌ಎಫ್ ಈ ಎಚ್ಚರಿಕೆ ನೀಡಿದೆ. ಕಾಂಗೋದಲ್ಲಿ ಆರಂಭಿಕ ಹಂತದಲ್ಲಿ ಎಬೋಲಾ ಸೋಂಕು ರೋಗದ ಪ್ರಕರಣಗಳ ಸಂಖ್ಯೆ ಅತ್ಯಂತ ತ್ವರಿತಗತಿಯಲ್ಲಿ ಹೆಚ್ಚುತ್ತಿವೆ ಎಂದು ಎಂಎಸ್‌ಎಫ್ ಹೇಳಿದೆ.

ಎಬೋಲಾ ಸೋಂಕು ರೋಗದ ಪ್ರಕರಣಗಳು ಘೋಷಣೆಯಾದಾಗಿನಿಂದ ಪರಿಸ್ಥಿತಿ ಅತ್ಯಂತ ಕಳವಳಕಾರಿಯಾಗಿ ಹದಗೆಡುತ್ತಿದೆ ಎಂದು ಎಂಎಸ್‌ಎಫ್‌ನ ನಿರ್ದೇಶಕರಾದ ಡಾ. ಆಲನ್ ಗೊನ್ಝಾಲಸ್ ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಆಧಾನೊಮ್ ಗೆಬ್ರಾಯೆಸಸ್ ಅವರು ಎಬೋಲಾ ಸಾಂಕ್ರಾಮಿಕದಿಂದ ತತ್ತರಿಸಿರುವ ಇಟುರಿ ಪ್ರಾಂತಕ್ಕೆ ಶನಿವಾರ ಭೇಟಿ ನೀಡಿದರು. ಎಬೋಲಾ ಸೋಂಕು ನಿಯಂತ್ರಣಕ್ಕೆ ಕಾಂಗೊ ಆಜಳಿತ ನಡೆಸುತ್ತಿರುವ ಪ್ರಯತ್ನಗಳನ್ನು ಜಾಗತಿಕ ಸಮುದಾಯ ಬೆಂಬಲಿಸುತ್ತಿದೆಯೆಂದು ಅವರು ಹೇಳಿದ್ದಾರೆ.

ಕಾಂಗೊದಲ್ಲಿ ಈತನಕ 1 ಸಾವಿರಕ್ಕೂ ಅಧಿಕ ಶಂಕಿತ ಎಬೋಲಾ ಪ್ರಕರಣಗಳು ಹಾಗೂ ಕನಿಷ್ಠ 246 ಸಾವಿನ ಪ್ರಕರಣಗಳು ವರದಿಯಾಗಿವೆ. ನೆರೆಯ ರಾಷ್ಟ್ರವಾದ ಉಗಾಂಡದಲ್ಲೂ 9 ಎಬೋಲಾ ಪ್ರಕರಣಗಳು ವರದಿಯಾಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News