ನೇಪಾಳದಿಂದ ಭಾರತೀಯ ಭೂಪ್ರದೇಶಗಳ ಅತಿಕ್ರಮಣ: ನೇಪಾಳ ಸಂಸತ್‌ನಲ್ಲಿ ಒಪ್ಪಿಕೊಂಡ ಪ್ರಧಾನಿ ಬಾಲೇಂದ್ರ ಶಾ
ಬಾಲೇಂದ್ರ ಶಾ | Photo Credit : PTI
ಕಾಠ್ಮಂಡು,ಮೇ 31: ನೇಪಾಳ ಕೂಡಾ ಭಾರತಕ್ಕೆ ಸೇರಿದ ಕೆಲವು ಪ್ರಾಂತಗಳನ್ನು ಅತಿಕ್ರಮಿಸಿದೆಯೆಂದು ನೇಪಾಳದ ಪ್ರಧಾನಿ ಬಾಲೇಂದ್ರ ಶಾ ರವಿವಾರ ತಿಳಿಸಿದ್ದಾರೆ.
ನೇಪಾಳ ಹಾಗೂ ಭಾರತ ದೇಶಗಳೆರಡೂ ಹಕ್ಕು ಸ್ಥಾಪನೆಗೆ ಯತ್ನಿಸುತ್ತಿರುವ ಕಾಲಾಪಾನಿ ಪ್ರಾಂತದ ಬಗ್ಗೆ ನೇಪಾಳ ಸಂಸತ್ ಕಲಾಪದ ವೇಳೆ ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಂದರ್ಭ ಶಾ ಅವರು ಈ ವಿಷಯವನ್ನು ಉಲ್ಲೇಖಿಸಿದ್ದಾರೆ.
‘‘ನಿಮಗೆ ಇದು ವಿಚಿತ್ರವೆಂದು ಅನಿಸಬಹುದು. ಆದರೆ ಪ್ರಧಾನಿಯಾದ ಬಳಿಕ ನಾನು ಈ ವಿಷಯವನ್ನು ಅರಿತುಕೊಂಡೆ. ಕೇವಲ ಭಾರತ ಮಾತ್ರವಲ್ಲ ನೇಪಾಳ ಕೂಡಾ ಹಲವೆಡೆ ಭಾರತದ ಪ್ರದೇಶಗಳನ್ನು ಅತಿಕ್ರಮಿಸಿಕೊಂಡಿದೆ’’ ಎಂದರು. ಬಾಲೇಂದ್ರ ಶಾ ಅವರ ಈ ಹೇಳಿಕೆಯನ್ನು ಪ್ರತಿಪಕ್ಷ ಸಂಸದರು ಬಲವಾಗಿ ವಿರೋಧಿಸಿದರು.
ನೇಪಾಳವು ನಿಖರವಾಗಿ ಯಾವ ಪ್ರಾಂತದಲ್ಲಿ ಭಾರತಕ್ಕೆ ಸೇರಿದ ಭೂಪ್ರದೇಶವನ್ನು ಅತಿಕ್ರಮಿಸಿದೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಪ್ರತಿಪಕ್ಷಗಳಾದ ನೇಪಾಳಿ ಕಾಂಗ್ರೆಸ್ ಹಾಗೂ ನೇಪಾಳ ಕಮ್ಯೂನಿಸ್ಟ್ ಪಕ್ಷದ ಸಂಸದರು ಆಗ್ರಹಿಸಿದರು.
ನೇಪಾಳ ಹಾಗೂ ಭಾರತದ ನಡುವೆ ಗಡಿ ವಿವಾದಗಳು ಉದ್ಭವಿಸಿವೆ. ಆದರೆ ನೇಪಾಳವು ಭಾರತೀಯ ಪ್ರಾಂತವನ್ನು ಅತಿಕ್ರಮಿಸಿದೆಯೆಂದು ಪ್ರಧಾನಿಯವರು ತಿಳಿಸಿದ್ದಾರೆ. ನಿಖರವಾಗಿ ಅದು ಎಲ್ಲಿ ನಡೆದಿದೆ. ಈ ಬಗ್ಗೆ ಪ್ರಧಾನಿಯವರು ಸದನಕ್ಕೆ ಅರಿವು ಮೂಡಿಸಬೇಕು. ಇದೊಂದು ಆಕ್ಷೇಪಣೀಯವಾದ ಹೇಳಿಕೆಯಾಗಿದೆ ಎಂದು ನೇಪಾಳಿ ಕಾಂಗ್ರೆಸ್‌ನ ಮುಖ್ಯ ಸಚೇತಕ ಬಸಾನಾ ಥಾಪಾ ಅವರು ಆಗ್ರಹಿಸಿದರು.
ಪ್ರಧಾನಿ ಬಾಲೇಂದ್ರ ಶಾ ಅವರ ಈ ಹೇಳಿಕೆಯನ್ನು ಆಕ್ಷೇಪಿಸಿದ ನೇಪಾಳ ಕಮ್ಯುನಿಸ್ಟ್ ಪಕ್ಷದ ಸಂಸದ ರಮೇಶ್ ಮಲ್ಲಾ ಅವರು, ಪ್ರಧಾನಿಯ ಹೇಳಿಕೆಗಳು ರಾಷ್ಟ್ರೀಯ ಏಕತೆಗೆ ಧಕ್ಕೆ ತರುವಂತಹದ್ದಾಗಿದೆ ಎಂದರು.