×
Ad

ಪರಮಾಣು ಶಸ್ತ್ರಾಸ್ತ್ರ ಹೊಂದುವುದಿಲ್ಲ ಎಂದು ಇರಾನ್ ಒಪ್ಪಿಕೊಂಡಿದೆ: ಡೊನಾಲ್ಡ್‌ ಟ್ರಂಪ್

Update: 2026-05-31 12:17 IST

ಡೊನಾಲ್ಡ್ ಟ್ರಂಪ್ | Photo Credit : PTI 

ವಾಷಿಂಗ್ಟನ್: ಇರಾನ್‌ನೊಂದಿಗೆ ಅಮೆರಿಕ ನಡೆಸುತ್ತಿರುವ ಶಾಂತಿ ಮಾತುಕತೆಗಳು ಅಂತಿಮ ಹಂತ ತಲುಪಿದ್ದು, ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂಬ ಷರತ್ತಿಗೆ ಇರಾನ್ ಒಪ್ಪಿಗೆ ಸೂಚಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ‘ನಾವು ಉತ್ತಮ ಒಪ್ಪಂದಕ್ಕೆ ಬಹಳ ಹತ್ತಿರದಲ್ಲಿದ್ದೇವೆ. ಒಪ್ಪಂದ ಸಾಧ್ಯವಾದರೆ ಅದು ಎಲ್ಲರಿಗೂ ಒಳಿತು. ಇಲ್ಲದಿದ್ದರೆ ಬೇರೆ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಹೇಳಿದರು.

ಮಾತುಕತೆಗಳ ಪ್ರಮುಖ ಅಂಶ ಪರಮಾಣು ಶಸ್ತ್ರಾಸ್ತ್ರಗಳ ವಿಚಾರವಾಗಿದ್ದು, ‘ನನಗೆ ಬೇಕಿರುವ ಪ್ರಮುಖ ಖಾತರಿ ಎಂದರೆ ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಬಾರದು. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ’ ಎಂದು ಟ್ರಂಪ್ ಹೇಳಿದ್ದಾರೆ.

ಮಾತುಕತೆಗಳು ಕಠಿಣವಾಗಿವೆ ಎಂದು ಹೇಳಿದ ಅವರು, ‘ನಾವು ಬಯಸಿದ ಫಲಿತಾಂಶವನ್ನು ನಿಧಾನವಾಗಿ ಸಾಧಿಸುತ್ತಿದ್ದೇವೆ. ಇರಾನ್‌ನ ಪ್ರತಿನಿಧಿಗಳು ಕಠಿಣ ಸಮಾಲೋಚಕರು. ಉತ್ತಮ ಒಪ್ಪಂದಕ್ಕೆ ಸಮಯ ಬೇಕಾಗುತ್ತದೆ. ಆತುರದಲ್ಲಿ ಒಪ್ಪಂದ ಮಾಡಿಕೊಳ್ಳಲು ನಾನು ಬಯಸುವುದಿಲ್ಲ’ ಎಂದರು.

ಮಾತುಕತೆಗಳು ವಿಫಲವಾದರೆ ಮಿಲಿಟರಿ ದಾಳಿ ಒಂದು ಆಯ್ಕೆಯಾಗಿ ಉಳಿಯಲಿದೆ ಎಂಬುದನ್ನು ಟ್ರಂಪ್ ಪುನರುಚ್ಚರಿಸಿದರು. ‘ನಾವು ಬಯಸಿದ ಫಲಿತಾಂಶ ದೊರೆಯದಿದ್ದರೆ, ಬೇರೆ ಮಾರ್ಗವನ್ನು ಅನುಸರಿಸುತ್ತೇವೆ’ ಎಂದು ಹೇಳಿದರು.

ಈ ನಡುವೆ, ಇರಾನ್‌ನೊಂದಿಗೆ ರೂಪಿಸಲಾಗುತ್ತಿರುವ ಶಾಂತಿ ಒಪ್ಪಂದದ ಕರಡಿನಲ್ಲಿ ಕೆಲವು ಬದಲಾವಣೆಗಳನ್ನು ಟ್ರಂಪ್ ಸೂಚಿಸಿದ್ದಾರೆ ಎಂದು ಆಕ್ಸಿಯೋಸ್ ವರದಿ ಮಾಡಿದೆ.

ಅಮೆರಿಕದ ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿರುವ ವರದಿಯ ಪ್ರಕಾರ, ಇರಾನ್‌ನ ಪರಮಾಣು ಸಾಮಗ್ರಿ ಮತ್ತು ಅದರ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದ ಷರತ್ತುಗಳನ್ನು ಇನ್ನಷ್ಟು ಕಠಿಣಗೊಳಿಸಲು ಟ್ರಂಪ್ ಬಯಸಿದ್ದಾರೆ. ಇದರಿಂದಾಗಿ ಉಭಯಪಕ್ಷಗಳ ನಡುವೆ ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆ ಇದೆ.

ಹಾರ್ಮುಝ್ ಜಲಸಂಧಿಗೆ ಸಂಬಂಧಿಸಿದ ಕೆಲವು ಅಂಶಗಳಲ್ಲಿಯೂ ತಿದ್ದುಪಡಿ ಮಾಡಲು ಟ್ರಂಪ್ ಆಸಕ್ತಿ ತೋರಿದ್ದಾರೆ ಎಂದು ವರದಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News