ಹೌತಿಗಳ ದಾಳಿ ತೀವ್ರ; ಸೌದಿ ರಕ್ಷಣೆಗೆ ಈಜಿಪ್ಟ್ ಸೇನೆ ಸಜ್ಜು: ರಾಯಿಟರ್ಸ್ ವರದಿ
ಸೌದಿ ಅರೇಬಿಯ ನೆರವು ಕೋರಿದರೆ ಸೇನೆ ನಿಯೋಜನೆಗೆ ಅನುಮತಿ ಪಡೆಯಲು ಎಲ್-ಸಿಸಿ ಸಿದ್ಧತೆ
ಅಬ್ದೆಲ್ ಫತ್ತಾಹ್ ಎಲ್-ಸಿಸಿ (Photo: Reuters)
ಕೈರೊ: ಯೆಮೆನ್ ನ ಇರಾನ್ ಪರ ಹೌತಿ ಬಂಡುಕೋರರು ಸೌದಿ ಅರೇಬಿಯಾದ ಮೇಲೆ ದಾಳಿಗಳನ್ನು ತೀವ್ರಗೊಳಿಸಿರುವ ಬೆನ್ನಲ್ಲೇ, ಆ ದೇಶದ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲ ರೀತಿಯ ಬೆಂಬಲ ನೀಡಲು ಈಜಿಪ್ಟ್ ಸಿದ್ಧವಾಗಿದೆ ಎಂದು ಅಧ್ಯಕ್ಷರ ಕಚೇರಿ ರವಿವಾರ ತಿಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಸೌದಿ ಅರೇಬಿಯ ನೆರವು ಕೋರಿದರೆ, ಅದರ ರಕ್ಷಣೆಗೆ ಈಜಿಪ್ಟ್ ಸೇನೆಯನ್ನು ನಿಯೋಜಿಸಲು ಅನುಮತಿ ನೀಡುವ ಪ್ರಸ್ತಾವನೆಗೆ ಸಂಸತ್ತಿನ ಒಪ್ಪಿಗೆ ಪಡೆಯಲು ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಮುಂದಾಗಿದ್ದಾರೆ. ಈ ಸಂಬಂಧ ಸಂಸತ್ತಿನ ತುರ್ತು ಅಧಿವೇಶನ ಕರೆಯುವಂತೆ ಅವರು ಕೋರಿದ್ದಾರೆ.
ಸೌದಿ ಅರೇಬಿಯದ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡುವುದರ ಜತೆಗೆ, ಅದರ ಸಂಪನ್ಮೂಲಗಳು, ಪ್ರಾದೇಶಿಕ ಸಮಗ್ರತೆ ಹಾಗೂ ಇಸ್ಲಾಮಿನ ಪವಿತ್ರ ಸ್ಥಳಗಳನ್ನು ರಕ್ಷಿಸಲು ಈಜಿಪ್ಟ್ ಎಲ್ಲ ಅಗತ್ಯ ಮತ್ತು ಸಾಧ್ಯವಿರುವ ರೀತಿಯ ಬೆಂಬಲ ನೀಡಲಿದೆ ಎಂದು ಅಧ್ಯಕ್ಷರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಎಲ್-ಸಿಸಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ರಕ್ಷಣಾ ಮಂಡಳಿಯ ಸಭೆಯ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ. ಸಭೆಯಲ್ಲಿ ಸಂಸತ್ತಿನ ಸ್ಪೀಕರ್, ಪ್ರಧಾನ ಮಂತ್ರಿ ಮತ್ತು ಸೇನಾ ಮುಖ್ಯಸ್ಥರು ಭಾಗವಹಿಸಿದ್ದರು. ಸೇನಾ ನೆರವು ನೀಡುವ ಪ್ರಸ್ತಾವನೆಗೆ ಅನುಮೋದನೆ ಪಡೆಯಲು ಸಂಸತ್ತು ರವಿವಾರ ಮಧ್ಯಾಹ್ನ 1 ಗಂಟೆಗೆ ತುರ್ತು ಅಧಿವೇಶನ ನಡೆಸಲು ನಿರ್ಧರಿಸಿತ್ತು.
ರಿಯಾದ್, ಅರಾಮ್ಕೊ ಮೇಲೆ ದಾಳಿ
ಕದನ ವಿರಾಮ ಒಪ್ಪಂದ ಮುರಿದುಬಿದ್ದ ಬಳಿಕ ಸೌದಿ ಬೆಂಬಲಿತ ಪಡೆಗಳು ಮತ್ತು ಹೌತಿ ಬಂಡುಕೋರರ ನಡುವೆ ಮತ್ತೆ ಸಂಘರ್ಷ ಭುಗಿಲೆದ್ದಿದೆ. ಇತ್ತೀಚಿನ ದಿನಗಳಲ್ಲಿ ಹೌತಿಗಳು ರಿಯಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸೌದಿ ಅರೇಬಿಯದ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿ ಸೌದಿ ಅರಾಮ್ಕೊ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.
ಸಂಘರ್ಷ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಸೌದಿ ಅರೇಬಿಯದ ರಾಜ ಸಲ್ಮಾನ್ ಮತ್ತು ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಮಾರ್ಗದರ್ಶನದಂತೆ ಈಜಿಪ್ಟ್ ಕಾರ್ಯನಿರ್ವಹಿಸಲಿದೆ ಎಂದು ಎಲ್-ಸಿಸಿ ಶನಿವಾರದ ಭಾಷಣದಲ್ಲಿ ತಿಳಿಸಿದ್ದಾರೆ. ಸೆಪ್ಟೆಂಬರ್ 15ರಂದು ಸೌದಿ ನಾಯಕರು ಅವರನ್ನು ಭೇಟಿ ಮಾಡಿದ್ದರು.
ದೀರ್ಘಕಾಲದ ಕಾರ್ಯತಂತ್ರದ ನಂಟು
ಈಜಿಪ್ಟ್ ಮತ್ತು ಸೌದಿ ಅರೇಬಿಯ ನಿಕಟ ಕಾರ್ಯತಂತ್ರ ಹಾಗೂ ಆರ್ಥಿಕ ಪಾಲುದಾರ ರಾಷ್ಟ್ರಗಳಾಗಿವೆ. 2013ರಲ್ಲಿ ಇಸ್ಲಾಮಿಸ್ಟ್ ಅಧ್ಯಕ್ಷ ಮೊಹಮ್ಮದ್ ಮೊರ್ಸಿ ಅವರನ್ನು ಸೇನೆ ಅಧಿಕಾರದಿಂದ ಕೆಳಗಿಳಿಸಿದ ಬಳಿಕ, ಸೌದಿ ಅರೇಬಿಯ ಮತ್ತು ತೈಲ ಸಂಪದ್ಭರಿತ ಗಲ್ಫ್ ರಾಷ್ಟ್ರಗಳು ಈಜಿಪ್ಟ್ ಗೆ ಶತಕೋಟಿ ಡಾಲರ್ ಗಳಷ್ಟು ಆರ್ಥಿಕ ನೆರವು, ಕೇಂದ್ರ ಬ್ಯಾಂಕ್ ಠೇವಣಿ ಮತ್ತು ಹೂಡಿಕೆಗಳನ್ನು ಒದಗಿಸಿದ್ದವು.
2015ರಲ್ಲಿ ಯೆಮೆನ್ ಸರ್ಕಾರವನ್ನು ಬೆಂಬಲಿಸಲು ಹೌತಿ ಬಂಡುಕೋರರ ವಿರುದ್ಧ ಸೌದಿ ನೇತೃತ್ವದ ಮೈತ್ರಿಕೂಟ ಮಧ್ಯಪ್ರವೇಶಿಸಿದಾಗ ಈಜಿಪ್ಟ್ ಕೂಡ ಅದರಲ್ಲಿ ಸೇರಿಕೊಂಡಿತ್ತು. ಆದರೆ, ಯುದ್ಧದಲ್ಲಿ ಈಜಿಪ್ಟ್ ನ ಪಾತ್ರ ಸೀಮಿತವಾಗಿತ್ತು.