ಗ್ರೀನ್ ಕಾರ್ಡ್ ನಿರ್ಬಂಧಗಳು ಉಭಯ ದೇಶಗಳ ಜಂಟಿ ಮಹತ್ವಾಕಾಂಕ್ಷೆಗಳಿಗೆ ಪೂರಕವಾಗಿಲ್ಲ: ಭಾರತ
ಸಾಂದರ್ಭಿಕ ಚಿತ್ರ | Photo Credit : magnific
ಹೊಸದಿಲ್ಲಿ: ಡೊನಾಲ್ಡ್ ಟ್ರಂಪ್ ಆಡಳಿತದ ಗ್ರೀನ್ ಕಾರ್ಡ್ ಮೇಲಿನ ನಿರ್ಬಂಧಗಳು ಉಭಯ ದೇಶಗಳ ಭವಿಷ್ಯದ ಜಂಟಿ ಮಹತ್ವಾಕಾಂಕ್ಷೆಗಳಿಗೆ ಪೂರಕವಾಗಿಲ್ಲ ಎಂದು ಭಾರತ ಶುಕ್ರವಾರ ಹೇಳಿದೆ. ಅಮೆರಿಕವು ತನ್ನ ಖಾಯಂ ಕಾರ್ಮಿಕ ಪ್ರಮಾಣೀಕರಣ (ಪಿಇಆರ್‌ಎಮ್) ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಪ್ರಮುಖ ಭಾರತೀಯ ಮಾಹಿತಿ ತಂತ್ರಜ್ಞಾನ (ಐಟಿ) ಕಂಪೆನಿಗಳಿಗೆ ನಿರ್ಬಂಧ ವಿಧಿಸಿದ ಒಂದು ದಿನದ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ಈ ಪ್ರತಿಕ್ರಿಯೆ ನೀಡಿದೆ. ಪಿಇಆರ್‌ಎಮ್ ಅರ್ಜಿಗಳ ಅಮಾನತು, ಪ್ರಸ್ತುತ ಚಾಲ್ತಿಯಲ್ಲಿರುವ ಎಚ್-1ಬಿ ವೀಸಾಗಳ ಮಾನ್ಯತೆ ಅಥವಾ ಎಚ್-1ಬಿ ವೀಸಾ ಹೊಂದಿರುವವರು ಮತ್ತು ಅವರ ಅವಲಂಬಿತರ ಸ್ಥಾನಮಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ.
ಪ್ರತಿಭೆಗಳ ಸಂಚಾರವು ಉಭಯ ದೇಶಗಳ ಆರ್ಥಿಕತೆಗಳ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ಸಚಿವಾಲಯ ಹೇಳಿದೆ.
‘‘ಪಿಇಆರ್‌ಎಮ್ ಯೋಜನೆಯು ಎಚ್-1ಬಿ ವೀಸಾ ಯೋಜನೆಗಿಂತ ಭಿನ್ನವಾಗಿದೆ ಎಂಬುದನ್ನು ಗಮನಿಸಬೇಕು. ಪಿಇಆರ್‌ಎಮ್ ಅರ್ಜಿಗಳ ಅಮಾನತು ತನ್ನಿಂತಾನೆ ಹಾಲಿ ಎಚ್-1ಬಿ ವೀಸಾಗಳ ಮಾನ್ಯತೆಯನ್ನಾಗಲಿ ಅಥವಾ ಎಚ್-1ಬಿ ವೀಸಾ ಹೊಂದಿರುವವರು ಮತ್ತು ಅವರ ಅವಲಂಬಿತರ ಸ್ಥಾನಮಾನವನ್ನಾಗಲಿ ಬಾಧಿಸುವುದಿಲ್ಲ. ಆದರೆ, ಬಾಧಿತ ಕಂಪೆನಿಗಳ ಅರ್ಹ ಉದ್ಯೋಗಿಗಳ ಶಾಶ್ವತ ವಾಸ್ತವ್ಯ/ಗ್ರೀನ್ ಕಾರ್ಡ್ ಪ್ರಕ್ರಿಯೆಯ ಮೇಲೆ ಇದು ಸ್ವಲ್ಪಮಟ್ಟಿನ ಪರಿಣಾಮ ಬೀರಬಹುದಾಗಿದೆ’’ ಎಂದು ಸಚಿವಾಲಯದ ಪ್ರಕಟನೆ ತಿಳಿಸಿದೆ.
ವಾನ್ಸ್ ಹೇಳಿಕೆಗೆ ಆಕ್ರೋಶ
ಗ್ರೀನ್‌ಕಾರ್ಡ್ ನಿರ್ಬಂಧಗಳ ಹಿನ್ನೆಲೆಯಲ್ಲಿ, ಅಮೆರಿಕ ಉಪಾಧ್ಯಕ್ಷ ಜೆ.ಡಿ. ವಾನ್ಸ್ ವಿದೇಶಿ ಉದ್ಯೋಗಿಗಳನ್ನು ‘ವೇತನರಹಿತ ಕೆಲಸದಾಳುಗಳು’ (ಇಂಡೆಚರ್ಡ್ ಸರ್ವಾಂಟ್ಸ್) ಎಂಬುದಾಗಿ ಕರೆದಿರುವುದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
‘‘ಅಮೆರಿಕ ಉಪಾಧ್ಯಕ್ಷರ ಹೇಳಿಕೆ ಅನಗತ್ಯವಾಗಿತ್ತು ಹಾಗೂ ಅದು ಅಮೆರಿಕದಲ್ಲಿರುವ ಭಾರತೀಯ ಕೆಲಸಗಾರರು ಅತ್ಯಂತ ಸುಶಿಕ್ಷಿತರು ಹಾಗೂ ಆ ದೇಶದ ಆರ್ಥಿಕತೆ ಮತ್ತು ಹೊಸತನಕ್ಕೆ ದೇಣಿಗೆ ನೀಡುವವರು ಎಂಬ ವಾಸ್ತವವನ್ನು ನಿರ್ಲಕ್ಷಿಸಿದೆ’’ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಮೈಕ್ರೊಸಾಫ್ಟ್ ಕಂಪೆನಿಯು ಅಮೆರಿಕನ್ ಉದ್ಯೋಗಿಗಳ ಸ್ಥಾನದಲ್ಲಿ ಬೇರೆ ದೇಶಗಳ ಉದ್ಯೋಗಿಗಳನ್ನು ನೇಮಿಸುತ್ತಿದೆ ಎಂಬುದಾಗಿ ಆರೋಪಿಸಿ ಆ ಕಂಪೆನಿಯ ಪಿಇಆರ್‌ಎಮ್ ಯೋಜನೆಯನ್ನು ಅಮಾನತಿನಲ್ಲಿಟ್ಟಿದ್ದಾರೆ. ‘‘ಮೈಕ್ರೊಸಾಫ್ಟ್ ಕಂಪೆನಿಯು ‘ಶ್ರೇಷ್ಠ ಅಮೆರಿಕನ್ ಉದ್ಯೋಗಿಗಳ’ನ್ನೇ ನೇಮಿಸಬೇಕಾಗಿದೆ. ಅವರ ಸ್ಥಾನದಲ್ಲಿ ‘ವಿದೇಶಿ ವೇತನರಹಿತ ಕೆಲಸದಾಳು’ಗಳನ್ನು ನೇಮಿಸಬಾರದು’’ ಎಂದು ವಾನ್ಸ್ ಹೇಳಿದ್ದರು.