ಹಾರ್ಮುಝ್ ಜನಸಂಧಿಯಲ್ಲಿ 4 ನೌಕೆಗಳ ಮೇಲೆ ಇರಾನ್ ನಿಂದ ಗುಂಡಿನ ದಾಳಿ
ಸಾಂದರ್ಭಿಕ ಚಿತ್ರ | Photo Credit : AP
ಟೆಹರಾನ್, ಜು.25: ಕಳೆದ 24 ಗಂಟೆಗಳಲ್ಲಿ ದಕ್ಷಿಣ ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯು ನಾಲ್ಕು ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿದೆ ಎಂದು ಇರಾನ್ ನ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
ಈ ಹಡಗುಗಳು ಅಕ್ರಮ ಮತ್ತು ಅಪಾಯಕಾರಿ ಮಾರ್ಗವನ್ನು ಬಳಸುತ್ತಿದ್ದವು ಎಂದು IRGC ಹೇಳಿದೆ.
►ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳು:
• ಇರಾನ್ ನ ಬಂದರುಗಳ ಮೇಲಿನ ತನ್ನ ದಿಗ್ಬಂಧನವನ್ನು ಉಲ್ಲಂಘಿಸಲು ಯತ್ನಿಸುತ್ತಿದ್ದ ಮತ್ತೊಂದು ಸರಕು ನೌಕೆಯ ಮೇಲೆ ಗುಂಡು ಹಾರಿಸಿರುವುದಾಗಿ ಅಮೆರಿಕ ಮಿಲಿಟರಿ ತಿಳಿಸಿದೆ.
ಒಮಾನ್ ಕೊಲ್ಲಿಯಲ್ಲಿ ಎಮ್/ಟಿ ಲಾವಿನ್ ನೌಕೆಯು ಕನಿಷ್ಠ ನಾಲ್ಕು ಬಾರಿ ದಿಗ್ಬಂಧನವನ್ನು ಮೀರಿ ಹೋಗಲು ಯತ್ನಿಸಿದ ನಂತರ ಅಮೆರಿಕದ ಪಡೆಗಳು ಅದನ್ನು ನಿಷ್ಕ್ರಿಯಗೊಳಿಸಿವೆ. ನೌಕೆಯ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದ್ದರೂ ಅವರು ಆದೇಶಗಳನ್ನು ಪಾಲಿಸಲಿಲ್ಲ. ನಂತರ ನೌಕೆಯ ಇಂಜಿನ್ ರೂಮ್ ಮೇಲೆ ಗುಂಡು ಹಾರಿಸಲಾಗಿದೆ ಎಂದು ಅಮೆರಿಕ ಮಿಲಿಟರಿ ಹೇಳಿದೆ.
• ಶುಕ್ರವಾರ ಕೆಂಪು ಸಮುದ್ರದಲ್ಲಿ ಪ್ರಯಾಣಿಸುತ್ತಿದ್ದ ಸೌದಿ ಅರೆಬಿಯಾದ 'ಎನ್‌ಸಿಸಿ ಮಸಾ' ಎಂಬ ಹಡಗಿನ ಮೇಲೆ ದಾಳಿ ನಡೆದಿದ್ದು, ಹಡಗಿನ ಹೊರಭಾಗಕ್ಕೆ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಸೌದಿ ಸರ್ಕಾರಿ ಸುದ್ದಿ ಸಂಸ್ಥೆ ಎಸ್‌ಪಿಎ ವರದಿ ಮಾಡಿದೆ.
• ಯಾನ್ಬು ಪ್ರದೇಶದಲ್ಲಿರುವ ತೈಲ ಸಂಸ್ಕರಣಾಗಾರಗಳನ್ನು ಗುರಿಯಾಗಿಸಿಕೊಂಡು ಯೆಮನ್‌ನಿಂದ ಉಡಾಯಿಸಲಾಗಿದ್ದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸೌದಿ ಅರೆಬಿಯಾದ ವಾಯು ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ತಡೆದು ಧ್ವಂಸಗೊಳಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.