Yemen : ಹುದೈದಾ ನಗರದ ಮೇಲೆ ಸೌದಿ ಅರೇಬಿಯಾ ದಾಳಿ; 'ಸೂಕ್ತ ಪ್ರತ್ಯುತ್ತರ'ದ ಎಚ್ಚರಿಕೆ ನೀಡಿದ ಹೌತಿ
Photo: x.com/unkownret
ಸನಾ (ಯೆಮನ್): ಯೆಮನ್‌ನ ಹೌತಿ ನಿಯಂತ್ರಣದಲ್ಲಿರುವ ಹುದೈದಾ ನಗರದ ಮೇಲೆ ಸೌದಿ ಅರೇಬಿಯಾ ದಾಳಿ ನಡೆಸಿದೆ ಎಂದು ಹೌತಿ ವಿದೇಶಾಂಗ ಸಚಿವಾಲಯ ತಿಳಿಸಿದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ ಈ ದಾಳಿ ನಡೆದಿದೆ ಎಂದು Aljazeera ವರದಿ ಮಾಡಿದೆ.
ಶುಕ್ರವಾರ ತಡರಾತ್ರಿ ನಡೆದ ಈ ದಾಳಿಯು ಸೌದಿ ಅರೇಬಿಯಾಗೆ ದುಬಾರಿಯಾಗಿ ಪರಿಣಮಿಸಲಿದೆ. ಈ ದಾಳಿಗಳಿಗೆ ಸೂಕ್ತ ಪ್ರತ್ಯುತ್ತರ ನೀಡಲಾಗುವುದು ಎಂದು ಹೌತಿ ವಿದೇಶಾಂಗ ಸಚಿವಾಲಯ ಎಚ್ಚರಿಕೆ ನೀಡಿದೆ.
ಅಲ್ ಮಸೀರಾ ಟಿವಿಯ ವರದಿ ಪ್ರಕಾರ, ಟೆಲಿಕಾಂ ಪ್ರಾಧಿಕಾರಕ್ಕೆ ಸೇರಿದ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಕಮರಾನ್ ದ್ವೀಪದಲ್ಲೂ ದಾಳಿಗಳು ನಡೆದಿದ್ದು, ಒಬ್ಬ ಮಹಿಳೆ ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
"ಹುದೈದಾವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಮೂಲಕ ಸೌದಿ ಆಡಳಿತವು ಸಂಘರ್ಷವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ. ಈ ಹಂತದಲ್ಲಿ ಪ್ರತೀಕಾರಕ್ಕೆ ತಕ್ಕ ಪ್ರತೀಕಾರವೇ ಪ್ರಮುಖ ಲಕ್ಷಣವಾಗಿರಲಿದೆ" ಎಂದು ಹೌತಿ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನೊಂದೆಡೆ, ಹುದೈದಾ ಬಂದರಿನಲ್ಲಿ ಸ್ಫೋಟಗಳು ಸಂಭವಿಸಿರುವುದು ಕಂಡುಬಂದಿದೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ, ಸೌದಿ ಬೆಂಬಲಿತ ಸರಕಾರವು ಬಂದರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದನ್ನು ನಿರಾಕರಿಸಿದೆ.
ಬಂದರು ನಗರಿಯಾದ ಹುದೈದಾ, ಹೌತಿಗಳ ನಿಯಂತ್ರಣದಲ್ಲಿರುವ ಯೆಮೆನ್ ಪ್ರದೇಶಗಳಿಗೆ ಅತ್ಯಂತ ಪ್ರಮುಖ ಜೀವನಾಡಿಯಾಗಿದೆ. ಹೌತಿಗಳ ಹಿಡಿತದಲ್ಲಿರುವ ಉತ್ತರ ಯೆಮೆನ್‌ಗೆ ಸರಬರಾಜಾಗುವ ಹೆಚ್ಚಿನ ವಾಣಿಜ್ಯ ಸರಕುಗಳು ಮತ್ತು ಮಾನವೀಯ ನೆರವಿನ ಆಮದುಗಳು ಈ ಬಂದರಿನ ಮೂಲಕವೇ ನಡೆಯುತ್ತವೆ.
ಯೆಮೆನ್‌ನಲ್ಲಿರುವ ಸೌದಿ ಬೆಂಬಲಿತ ಅಧ್ಯಕ್ಷೀಯ ನಾಯಕತ್ವ ಮಂಡಳಿಯ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಲಿಕಿ ಪ್ರತಿಕ್ರಿಯಿಸಿ, ಈ ಪರಿಸ್ಥಿತಿ ತೀವ್ರಗೊಳ್ಳಲು ಹೌತಿಗಳೇ ಕಾರಣ ಎಂದು ಆರೋಪಿಸಿದ್ದಾರೆ. ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ಹೌತಿ ಗುಂಪು ನಡೆಸುತ್ತಿರುವ ದಾಳಿಗಳು ಹೇಡಿತನದ ಹಾಗೂ ಬೇಜವಾಬ್ದಾರಿಯ ಕೃತ್ಯಗಳಾಗಿವೆ ಎಂದು ಅವರು ಹೇಳಿದ್ದಾರೆ.
ಮಂಡಳಿಯು ಎಲ್ಲ ಅಗತ್ಯ ಕಾರ್ಯಾಚರಣೆಗಳು ಮತ್ತು ಕ್ರಮಗಳನ್ನು ಮುಂದುವರಿಸಲಿದೆ ಎಂದು ಅಲ್-ಮಲಿಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.