ರಿಯಾದ್ ನ ಅತಿ ಎತ್ತರದ ಗಗನಚುಂಬಿ ಕಟ್ಟಡದ ಮೇಲೆ ಹೂತಿ ದಾಳಿ
ಸೌದಿ ಸಾರ್ವಜನಿಕ ಹೂಡಿಕೆ ನಿಧಿಯ ಕಚೇರಿಗೆ ಹಾನಿ
Photo: x.com/dekoskyglobal
ರಿಯಾದ್: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಲ್ಲಿರುವ ದೇಶದ ಅತಿ ಎತ್ತರದ ಗಗನಚುಂಬಿ ಕಟ್ಟಡದ ಮೇಲೆ ಹೂತಿಗಳಿಂದ ದಾಳಿ ನಡೆದಿದೆ. ಸೌದಿ ಅರೇಬಿಯಾದ ಸಾರ್ವಜನಿಕ ಹೂಡಿಕೆ ನಿಧಿ (PIF) ಪ್ರಧಾನ ಕಚೇರಿ ಇರುವ ಕಟ್ಟಡ ದಾಳಿಗೆ ತುತ್ತಾಗಿದ್ದು, ಗೋಪುರ ಹಾಗೂ ಸಮೀಪದ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಸೌದಿ ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ ಎಂದು Aljazeera ವರದಿ ಮಾಡಿದೆ.
ಸರಕಾರಿ ಮಾಧ್ಯಮಗಳು ಪ್ರಕಟಿಸಿದ ಚಿತ್ರಗಳಲ್ಲಿ ಸಾರ್ವಜನಿಕ ಹೂಡಿಕೆ ನಿಧಿ (PIF) ಗೋಪುರಕ್ಕೆ ಹಾನಿಯಾಗಿರುವುದು ಕಂಡುಬಂದಿದೆ. ಇದು ಸೌದಿ ಅರೇಬಿಯಾದ ಪ್ರಮುಖ ಸರ್ಕಾರಿ ಹೂಡಿಕೆ ಸಂಸ್ಥೆಯ ಪ್ರಧಾನ ಕಚೇರಿಯಾಗಿದ್ದು, ರಿಯಾದ್ ನ ಅತಿ ಎತ್ತರದ ಗಗನಚುಂಬಿ ಕಟ್ಟಡವಾಗಿದೆ.
ರಾಜಧಾನಿಯ ಹಣಕಾಸು ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ರಾಜಧಾನಿಯಲ್ಲಿ ದೊಡ್ಡ ಸದ್ದು ಕೇಳಿಬಂದ ಬೆನ್ನಲ್ಲೇ ರಿಯಾದ್ ಮತ್ತು ದಕ್ಷಿಣದ ಕಡೆಗೆ ಹಾರಿಸಲಾದ ಕ್ಷಿಪಣಿಗಳನ್ನು ತಡೆಹಿಡಿದಿರುವುದಾಗಿ ಸೌದಿ ನೇತೃತ್ವದ ಒಕ್ಕೂಟ ಹೇಳಿತ್ತು.