ಸೌದಿ ಮತ್ತು ಯಮನ್ ನ ವಿಮಾನ ನಿಲ್ದಾಣಗಳ ಮೇಲೆ ಹೌತಿಗಳ ದಾಳಿ
Photo Credit : aljazeera.com
ಸನಾ, ಅ. 7: ಇರಾನ್ ಬೆಂಬಲಿತ ಯಮನ್ನ ಹೌತಿ ಬಂಡುಕೋರರು ಬುಧವಾರ ನೆರೆಯ ಸೌದಿ ಅರೇಬಿಯಾದ ಮಿಲಿಟರಿ ಸೌಲಭ್ಯಗಳು ಮತ್ತು ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಸಿರುವುದಾಗಿ ಪ್ರತಿಪಾದಿಸಿದ್ದಾರೆ.
ರಾಜಧಾನಿ ರಿಯಾದ್ ನಲ್ಲಿರುವ ಕಿಂಗ್ ಖಾಲಿದ್ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್ ಗಳ ಮೂಲಕ ದಾಳಿ ನಡೆಸಲಾಗಿದೆ. ಇದರೊಂದಿಗೆ ಖಮೀಸ್ ಮುಶಾಯತ್ ನಗರದಲ್ಲಿರುವ ವಾಯುನೆಲೆ ಹಾಗೂ ನಜ್ರಾನ್ ಮತ್ತು ಅಸೀರ್ನಲ್ಲಿರುವ ಎರಡು ಮಿಲಿಟರಿ ನೆಲೆಗಳ ಮೇಲೆಯೂ ದಾಳಿ ನಡೆಸಿರುವುದಾಗಿ ಹೌತಿಗಳು ಪ್ರತಿಪಾದಿಸಿದ್ದಾರೆ.
ಅಂತರ್ರಾಷ್ಟ್ರೀಯ ಮಾನ್ಯತೆ ಪಡೆದ ಸರಕಾರದ ಕೇಂದ್ರಸ್ಥಾನವಾಗಿರುವ ಯಮನ್ನ ಬಂದರು ನಗರ ಏಡೆನ್ ಮೇಲೆ ಬುಧವಾರ ಬೆಳಗ್ಗೆ ಕ್ಷಿಪಣಿ ದಾಳಿ ನಡೆದಿದೆ. ಏಡೆನ್ ವಿಮಾನ ನಿಲ್ದಾಣದ ಬಳಿಯಿರುವ ಮಿಲಿಟರಿ ಕ್ಯಾಂಪ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೂಲಕ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಕೈರೋದಿಂದ ಆಗಮಿಸುತ್ತಿದ್ದ ವಿಮಾನವೊಂದು ಇಳಿಯುವ ಕೆಲವೇ ಕ್ಷಣಗಳ ಮೊದಲು ರನ್ವೇ ಬಳಿ ಕ್ಷಿಪಣಿಯೊಂದು ಅಪ್ಪಳಿಸಿದೆ ಎಂದು ಯಮನ್ನ ಮಾನವ ಹಕ್ಕುಗಳ ಸಚಿವಾಲಯ ತಿಳಿಸಿದೆ.