ವಿಶ್ವ ಆರೋಗ್ಯ ಸಂಸ್ಥೆ | Photo Credit : un.org

ಜಿನೀವಾ, ಅ. 7: ಪ್ಲೇಗ್ ಪ್ರಯೋಗಾಲಯದ ತಂತ್ರಜ್ಞರೊಬ್ಬರ ಸಾವು ಹಾಗೂ ‘ಅನಿಶ್ಚಿತ ಕಾರಣದ ನ್ಯುಮೋನಿಯಾದಿಂದ ಬಳಲುತ್ತಿರುವ ಎರಡನೇ ಉದ್ಯೋಗಿ’ ಕುರಿತ ವರದಿಗಳ ಬಗ್ಗೆ ರಶ್ಯದಿಂದ ಹೆಚ್ಚಿನ ಮಾಹಿತಿ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಬುಧವಾರ ತಿಳಿಸಿದೆ.

ಸಾರ್ವಜನಿಕ ಆರೋಗ್ಯದ ಅಪಾಯವನ್ನು ಸರಿಯಾಗಿ ಮೌಲ್ಯಮಾಪನ ಮಾಡಲು ಸಂಪೂರ್ಣ ಪಾರದರ್ಶಕತೆ ಅಗತ್ಯವಾಗಿದೆ. ರಶ್ಯ ಕೇಳಿಕೊಂಡರೆ ತಾಂತ್ರಿಕ ನೆರವು ನೀಡಲು WHO ಸಿದ್ಧವಿದೆ. ಇರ್ಕುಟ್ಸ್ಕ್ ಪ್ರಾಂತದ ಪ್ರಯೋಗಾಲಯ ಉದ್ಯೋಗಿಯೊಬ್ಬರ ಸಾವು ವರದಿಯಾಗಿರುವ ಬಗ್ಗೆ WHO ಸಕ್ರಿಯವಾಗಿ ಪರಿಶೀಲಿಸುತ್ತಿದೆ. ಅಂತರ್ರಾಷ್ಟ್ರೀಯ ಆರೋಗ್ಯ ನಿಯಮಾವಳಿಗಳ (ಐಎಚ್ಆರ್) ಅಡಿಯಲ್ಲಿ ಹೆಚ್ಚಿನ ಮಾಹಿತಿ ಪಡೆಯಲು ಶನಿವಾರ ರಶ್ಯ ಸರಕಾರವನ್ನು ಸಂಪರ್ಕಿಸಿರುವುದಾಗಿ WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರಯೆಸಸ್ ಹೇಳಿದ್ದಾರೆ.

ಐಎಚ್ಆರ್ ಎಂಬುದು ಗಡಿಯಾಚೆಗೆ ಹರಡಬಹುದಾದ ಸಾರ್ವಜನಿಕ ಆರೋಗ್ಯ ಘಟನೆಗಳು ಮತ್ತು ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸುವಲ್ಲಿ ದೇಶಗಳ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ವ್ಯಾಖ್ಯಾನಿಸುವ ಕಾನೂನುಬದ್ಧ ಚೌಕಟ್ಟಾಗಿದೆ. ಈ ನಿಯಮಗಳ ಪ್ರಕಾರ ದೇಶಗಳು 24 ಗಂಟೆಗಳ ಒಳಗೆ ಪ್ರತಿಕ್ರಿಯಿಸಬೇಕಾಗುತ್ತದೆ. ರಶ್ಯ ಮಂಗಳವಾರ ವಿಶ್ವ ಆರೋಗ್ಯ ಸಂಸ್ಥೆಗೆ ಉತ್ತರ ನೀಡಿದೆ.

ತೀವ್ರ ನ್ಯುಮೋನಿಯಾಕ್ಕೆ ಕಾರಣ, ಸಾರ್ವಜನಿಕ ಆರೋಗ್ಯ ಕ್ರಮಗಳಿಗೆ ಕಾರಣವಾದ ರೋಗಕಾರಕ ಕುರಿತಾದ ಮಾಧ್ಯಮ ವರದಿಗಳನ್ನು ಸ್ಪಷ್ಟಪಡಿಸಲು ಹೆಚ್ಚಿನ ಮಾಹಿತಿಯನ್ನು ಕೋರಲಾಗಿದೆ. ಸಂಭಾವ್ಯ ಸಾರ್ವಜನಿಕ ಆರೋಗ್ಯ ಅಪಾಯಗಳ ನಿಖರವಾದ ಮೌಲ್ಯಮಾಪನ ಮಾಡಲು ಐಎಚ್ಆರ್ ಅಡಿಯಲ್ಲಿ ಸಮಯೋಚಿತ, ಸಂಪೂರ್ಣ ಮತ್ತು ಪಾರದರ್ಶಕ ಮಾಹಿತಿ ಹಂಚಿಕೆ ಅತ್ಯಗತ್ಯ. ಆರೋಗ್ಯ ಕ್ಷೇತ್ರದಲ್ಲಿ ಅಂತರ್ರಾಷ್ಟ್ರೀಯ ಸಹಕಾರವು ಅತೀ ಅಗತ್ಯವಾಗಿದ್ದು, ವೈರಸ್ ಗಳಿಗೆ ಗಡಿಗಳ ಕಟ್ಟುಪಾಡು ಇರುವುದಿಲ್ಲ ಎಂದು ಘೆಬ್ರಯೆಸಸ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor