ಹಾರ್ಮುಝ್ ಮೇಲಿನ ನಿಯಂತ್ರಣವನ್ನು ಇರಾನ್ ಕಳೆದುಕೊಂಡಿದೆ: ರೂಬಿಯೊ
ಮಾರ್ಕೊ ರೂಬಿಯೊ | Photo Credit : AP , PTI
ಅಥೆನ್ಸ್, ಅ. 7: ಪ್ರಸ್ತುತ ನಡೆಯುತ್ತಿರುವ ಸಂಘರ್ಷದ ನಡುವೆಯೂ ಪ್ರಮುಖ ತೈಲ ಸಾರಿಗೆ ಮಾರ್ಗವು ತೆರೆದಿದ್ದು, ಇರಾನ್ ಈಗ ಹಾರ್ಮುಝ್ ಜಲಸಂಧಿಯ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿಲ್ಲ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಬುಧವಾರ ಪ್ರತಿಪಾದಿಸಿದ್ದಾರೆ.
ಅಥೆನ್ಸ್ ಗೆ ಭೇಟಿ ನೀಡಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಹಾರ್ಮುಝ್ ಜಲಸಂಧಿ ತೆರೆದಿದೆ. ಈ ಸಂಘರ್ಷ ಪ್ರಾರಂಭವಾಗುವ ಮೊದಲು ಎಷ್ಟಿತ್ತೋ, ಅಷ್ಟೇ ಪ್ರಮಾಣದ ತೈಲವು ಈಗಲೂ ಹೊರಹರಿಯುತ್ತಿದೆ. ಈ ಪರಿಸ್ಥಿತಿಯು ಇರಾನ್ ಕಾರ್ಯತಾಂತ್ರಿಕವಾಗಿ ಪ್ರಮುಖವಾಗಿರುವ ಈ ಜಲಮಾರ್ಗದ ಮೇಲಿನ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಂಡಿದೆ ಎಂಬುದನ್ನು ತೋರಿಸುತ್ತದೆ. ಇರಾನ್ ನ ಆರ್ಥಿಕ ಪರಿಸ್ಥಿತಿಯು ಸಂಪೂರ್ಣ ಕುಸಿತದಲ್ಲಿದೆ. ಅಮೆರಿಕ ವಿಧಿಸಿರುವ ತೀವ್ರವಾದ ನಿರ್ಬಂಧಗಳೇ ಇದಕ್ಕೆ ಕಾರಣ’ ಎಂದು ರೂಬಿಯೊ ಪ್ರತಿಪಾದಿಸಿದರು.
ಪ್ರತ್ಯೇಕ ಸಂದರ್ಶನದಲ್ಲಿ ಮಾತನಾಡಿದ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ‘ಅಮೆರಿಕ ಮತ್ತು ಇರಾನ್ ನಡುವೆ ಕಳೆದ ಏಳು ತಿಂಗಳುಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಒಪ್ಪಿಕೊಳ್ಳಬೇಕಾದರೆ, ಇರಾನ್ ತನ್ನ ಅಣು ಇಂಧನ ಸಮೃದ್ಧೀಕರಣ ಸಾಮರ್ಥ್ಯದಲ್ಲಿ ಅರ್ಥಪೂರ್ಣ ಕಡಿತವನ್ನು ಮಾಡಬೇಕು. ಅಮೆರಿಕಕ್ಕೆ ಅಂಗೀಕಾರವಾಗುವಂತಹ ಇರಾನ್ನೊಂದಿಗಿನ ಯಾವುದೇ ಒಪ್ಪಂದವು, ಇರಾನ್ ಎಂದಿಗೂ ಪರಮಾಣು ಅಸ್ತ್ರವನ್ನು ಪಡೆಯುವುದಿಲ್ಲ ಎಂಬುದಕ್ಕೆ ಖಾತರಿ ನೀಡಬೇಕಾಗುತ್ತದೆ’ ಎಂದು ಪ್ರತಿಪಾದಿಸಿದ್ದಾರೆ.