ರಷ್ಯಾ ಕರಾವಳಿಯಲ್ಲಿ ಉಕ್ರೇನ್ ನಿಂದ ಡ್ರೋನ್ ದಾಳಿ: 23 ಭಾರತೀಯರಿದ್ದ ತೈಲ ಟ್ಯಾಂಕರ್ ಗೆ ಬೆಂಕಿ
ಎಲ್ಲಾ ಸಿಬ್ಬಂದಿಯ ರಕ್ಷಣೆ : ಸೋಚಿ ಕರಾವಳಿಯಲ್ಲಿ ದಟ್ಟ ಕಪ್ಪು ಹೊಗೆ; ಕಡಲತೀರಗಳಿಗೆ ತೆರಳದಂತೆ ನಿರ್ಬಂಧ
ಉಕ್ರೇನ್ ನಡೆಸಿದ ಡ್ರೋನ್ ದಾಳಿಗೆ ತೈಲ ಟ್ಯಾಂಕರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. (Photo: AFP)
ಮಾಸ್ಕೊ: ರಷ್ಯಾದ ದಕ್ಷಿಣ ಕರಾವಳಿಯಲ್ಲಿ ಮಂಗಳವಾರ ಸಂಜೆ ಉಕ್ರೇನ್ ನಡೆಸಿದ ಡ್ರೋನ್ ದಾಳಿಗೆ ತೈಲ ಟ್ಯಾಂಕರ್ ವೊಂದು ಗುರಿಯಾಗಿದ್ದು, ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಟ್ಯಾಂಕರ್ ನಲ್ಲಿದ್ದ 23 ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ರಷ್ಯಾದ ಸಾರಿಗೆ ಸಚಿವಾಲಯ ತಿಳಿಸಿದೆ.
ಲೈಬೀರಿಯಾ ಧ್ವಜ ಹೊಂದಿದ್ದ ಟ್ಯಾಂಕರ್ ಗೆ ನೌಕಾ ಡ್ರೋನ್ ಗಳು ಢಿಕ್ಕಿ ಹೊಡೆದ ಬಳಿಕ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ರಷ್ಯಾದ ಜನಪ್ರಿಯ ಪ್ರವಾಸಿ ನಗರವಾದ ಸೋಚಿಯ ಮೇಲೆ ದಟ್ಟ ಕಪ್ಪು ಹೊಗೆ ಆವರಿಸಿತ್ತು ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ.
2022ರಲ್ಲಿ ರಷ್ಯಾ–ಉಕ್ರೇನ್ ಯುದ್ಧ ಆರಂಭವಾದ ಬಳಿಕ ಕಪ್ಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಹೆಚ್ಚುತ್ತಿವೆ. ಇದರ ನಡುವೆಯೇ ಈ ಘಟನೆ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಯುರೋಪಿಯನ್ ಒಕ್ಕೂಟದ (EU) ಸದಸ್ಯ ರಾಷ್ಟ್ರವಾದ ರೊಮೇನಿಯಾದ ಕರಾವಳಿಯ ಸಮೀಪ ಉಕ್ರೇನ್ ನ ಸರಕುಗಳನ್ನು ಸಾಗಿಸುತ್ತಿದ್ದ ಧಾನ್ಯ ಹಡಗುಗಳ ಮೇಲೂ ರಷ್ಯಾ ದಾಳಿ ನಡೆಸಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಹಲವು ವಿಡಿಯೋಗಳು ಮತ್ತು ಛಾಯಾಚಿತ್ರಗಳಲ್ಲಿ ಸಮುದ್ರದ ಮೇಲೆ ಕಿತ್ತಳೆ ಬಣ್ಣದ ಜ್ವಾಲೆಗಳು ಉರಿಯುತ್ತಿರುವುದು ಹಾಗೂ ಸೋಚಿ ನಗರದ ಮೇಲೆ ದಟ್ಟ ಕಪ್ಪು ಹೊಗೆ ಏರುತ್ತಿರುವುದು ಕಂಡುಬಂದಿದೆ.
ಬೆಂಕಿ ಕಾಣಿಸಿಕೊಂಡ ಬಳಿಕ ಕರಾವಳಿ ಪ್ರದೇಶಗಳು ಮತ್ತು ಕಡಲತೀರಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಸೋಚಿ ನಗರದ ಮೇಯರ್ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ರಷ್ಯಾದ ದಕ್ಷಿಣ ಕರಾವಳಿಯಲ್ಲಿರುವ ಸೋಚಿ ಜನಪ್ರಿಯ ಪ್ರವಾಸಿ ತಾಣವಾಗಿದೆ. ಇಲ್ಲಿ ಸುಮಾರು ಐದು ಲಕ್ಷ ಜನರು ವಾಸಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ನಗರದ ಕಡಲತೀರಗಳಿಗೆ ಭೇಟಿ ನೀಡುತ್ತಾರೆ.
ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಅಗ್ನಿಶಾಮಕ ಸಿಬ್ಬಂದಿಗೆ ಅದನ್ನು ನಂದಿಸಲು ಸಾಧ್ಯವಾಗಲಿಲ್ಲ ಎಂದು ರಷ್ಯಾದ ಸಾರಿಗೆ ಸಚಿವಾಲಯ ತಿಳಿಸಿದೆ.
ಕಪ್ಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿ
2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಆರಂಭಿಸಿದ ಬಳಿಕ ಕಪ್ಪು ಸಮುದ್ರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಣಿಜ್ಯ ಹಡಗುಗಳು ಪದೇಪದೇ ದಾಳಿಗೆ ಗುರಿಯಾಗುತ್ತಿವೆ.
ಕಳೆದ ತಿಂಗಳಷ್ಟೇ, EU ಸದಸ್ಯ ರಾಷ್ಟ್ರವಾದ ರೊಮೇನಿಯಾದ ಕರಾವಳಿಯ ಸಮೀಪ ಉಕ್ರೇನ್‌ನ ಸರಕುಗಳನ್ನು ಸಾಗಿಸುತ್ತಿದ್ದ ಧಾನ್ಯ ಹಡಗುಗಳನ್ನು ರಷ್ಯಾ ಗುರಿಯಾಗಿಸಿಕೊಂಡಿತ್ತು. ಈಜಿಪ್ಟ್ ಗೆ ಉಕ್ರೇನ್‌ನ ಧಾನ್ಯವನ್ನು ಸಾಗಿಸುತ್ತಿದ್ದ ಹಡಗೊಂದು ಉಕ್ರೇನ್ ನ ಪ್ರಾದೇಶಿಕ ಜಲಗಡಿಯನ್ನು ದಾಟಿದ ಸ್ವಲ್ಪ ಸಮಯದ ಬಳಿಕ ರಾತ್ರಿ ರಷ್ಯಾದ ಕ್ಷಿಪಣಿ ದಾಳಿಗೆ ಸಿಲುಕಿತ್ತು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದರು. ಈ ಘಟನೆಯಲ್ಲಿ ಯಾವುದೇ ಸಾವು–ನೋವು ಸಂಭವಿಸಿರಲಿಲ್ಲ ಎಂದು ಅವರು ಹೇಳಿದ್ದರು.
ಉಕ್ರೇನ್ ನ ಪಟ್ಟಣಗಳು ಮತ್ತು ನಗರಗಳ ಮೇಲೆ ಮಾಸ್ಕೊ ಪದೇಪದೇ ನಡೆಸುತ್ತಿರುವ ದಾಳಿಗಳಿಗೆ ಪ್ರತೀಕಾರವಾಗಿ ರಷ್ಯಾದ ತೈಲ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುತ್ತಿರುವುದಾಗಿ ಉಕ್ರೇನ್ ಸಮರ್ಥಿಸಿಕೊಂಡಿದೆ. ಇತ್ತೀಚಿನ ವಾರಗಳಲ್ಲಿ ರಷ್ಯಾ ಮತ್ತು ಉಕ್ರೇನ್ ಎರಡೂ ದಾಳಿಗಳನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿವೆ.
ರಷ್ಯಾ ಇತ್ತೀಚೆಗೆ ಉಕ್ರೇನ್ ರಾಜಧಾನಿ ಕೈವ್ ನ ಪ್ರಮುಖ ಸೇತುವೆಗಳ ಮೇಲಿನ ದಾಳಿಗಳನ್ನು ಹೆಚ್ಚಿಸಿದೆ. ಅಲ್ಲದೆ, ರಾಜಧಾನಿಯ ಮೇಲೆ ಹಗಲಿನ ವೇಳೆಯಲ್ಲೂ ಡ್ರೋನ್ ದಾಳಿಗಳನ್ನು ನಡೆಸಿದೆ. ಇದರಿಂದ ನಗರದಲ್ಲಿ ಭಾರಿ ಸಂಚಾರ ಅಡಚಣೆ ಉಂಟಾಗಿದೆ.
ದಕ್ಷಿಣ ರಷ್ಯಾದ ತೈಲ ಘಟಕಗಳ ಮೇಲೆ ಉಕ್ರೇನ್ ಈ ಹಿಂದೆ ನಡೆಸಿದ ದಾಳಿಗಳಿಂದ ತೈಲ ಸೋರಿಕೆ ಸಂಭವಿಸಿತ್ತು. ಇದರಿಂದ ಕಡಲತೀರಗಳನ್ನು ಮುಚ್ಚಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೆ, ವಿಷಕಾರಿ ಕಪ್ಪು ಮಳೆ ಸುರಿದಿರುವ ಬಗ್ಗೆಯೂ ವರದಿಗಳು ಪ್ರಕಟವಾಗಿದ್ದವು.