Photo Credit : AP 

ಕೀವ್, ಅ. 7: ಬುಧವಾರ ಬೆಳಗ್ಗೆ ರಶ್ಯ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಕೀವ್ ಸೇರಿದಂತೆ ಉಕ್ರೇನ್ ನ ಕನಿಷ್ಠ 12ಕ್ಕೂ ಹೆಚ್ಚು ಪ್ರದೇಶಗಳ ಮೇಲೆ ಅಪ್ಪಳಿಸಿದ್ದು, ನಾಲ್ಕು ಮಕ್ಕಳು ಸೇರಿ ಕನಿಷ್ಠ 19 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 60 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.

ರಶ್ಯ ಬೃಹತ್ ಮಟ್ಟದ ದಾಳಿಗೆ ಸಿದ್ಧತೆ ನಡೆಸುತ್ತಿರುವ ಬಗ್ಗೆ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿರುವುದಾಗಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಎಚ್ಚರಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ. ಉಕ್ರೇನ್ ಈ ದಾಳಿಯನ್ನು ನಿರೀಕ್ಷಿಸಿದ್ದರೂ, ಅದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಲಿಲ್ಲ.

ಉತ್ತರ ಚರ್ನಿಹಿವ್ ಪ್ರದೇಶದ ಪ್ರಿಲುಕಿಯಲ್ಲಿ ರಶ್ಯ ನಡೆಸಿದ ದಾಳಿಯಲ್ಲಿ ವಸತಿ ಸಮುಚ್ಚಯವೊಂದು ನಾಶವಾಗಿದ್ದು, ನಾಲ್ಕು ಮಕ್ಕಳು ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50 ಜನರು ಗಾಯಗೊಂಡಿದ್ದಾರೆ. ಕೀವ್ ಸೇರಿದಂತೆ ಇತರ ಮೂರು ಉಕ್ರೇನಿಯನ್ ನಗರಗಳಲ್ಲೂ ಸಾವುಗಳು ಸಂಭವಿಸಿವೆ. ಪೋಲ್ಟಾವಾ ಪ್ರದೇಶದ ಕ್ರೆಮೆನ್ಚುಕ್ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಏಳು ಜನರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಪ್ರಾದೇಶಿಕ ಮಿಲಿಟರಿ ಆಡಳಿತದ ಮುಖ್ಯಸ್ಥ ವಿಟಾಲಿ ಡಯಾಕಿವ್ನಿಚ್ ತಿಳಿಸಿದ್ದಾರೆ.

‘ರಶ್ಯದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ನಮಗೆ ದೊಡ್ಡ ಸವಾಲಾಗಿ ಉಳಿದಿವೆ. ಪ್ರಸ್ತುತ ವಾಯು ರಕ್ಷಣಾ ವ್ಯವಸ್ಥೆಗಳ ಪೂರೈಕೆಯು ನಮಗೆ ಅತ್ಯಂತ ತುರ್ತು ಅಗತ್ಯವಾಗಿದೆ’ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ಉಕ್ರೇನ್ನಾದ್ಯಂತ ಕ್ಷಿಪಣಿಗಳು ಮತ್ತು ಡ್ರೋನ್ಗಳ ಉತ್ಪಾದನೆ ಹಾಗೂ ಶೇಖರಣೆಯಲ್ಲಿ ತೊಡಗಿರುವ ಕೈಗಾರಿಕಾ ಸೌಲಭ್ಯಗಳ ಮೇಲೆ ರಕ್ಷಣಾ ಪಡೆಗಳು ರಾತ್ರೋರಾತ್ರಿ ಬೃಹತ್ ದಾಳಿ ನಡೆಸಿವೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ. ದಕ್ಷಿಣದ ಒಡೆಸ್ಸಾ ಪ್ರದೇಶದಲ್ಲಿರುವ ಬಂದರು ಮತ್ತು ಹಡಗು ದುರಸ್ತಿ ಸೌಲಭ್ಯಗಳು, ಹಾಗೂ ಉಕ್ರೇನ್ ಮಿಲಿಟರಿಗೆ ಸರಕು ಸಾಗಿಸುತ್ತಿದ್ದ ಹಡಗುಗಳ ಮೇಲೆಯೂ ದಾಳಿ ನಡೆಸಲಾಗಿದೆ ಎಂದು ಅದು ಹೇಳಿದೆ.

ಉಕ್ರೇನ್ ಕೂಡಾ ರಶ್ಯದ ಇಂಧನ ಸೌಲಭ್ಯಗಳ ಮೇಲೆ ದೀರ್ಘ ಶ್ರೇಣಿಯ ದಾಳಿಗಳನ್ನು ಮುಂದುವರಿಸಿದೆ. ರಶ್ಯದ ಪೆರ್ಮ್, ಸಮಾರಾ ಮತ್ತು ಆಸ್ಟ್ರಾಖಾನ್ ಪ್ರದೇಶಗಳಲ್ಲಿರುವ ಎರಡು ತೈಲ ಸೌಲಭ್ಯಗಳು ಮತ್ತು ತರಬೇತಿ ಮೈದಾನವನ್ನು ಉಕ್ರೇನಿಯನ್ ಪಡೆಗಳು ಗುರಿಯಾಗಿಸಿಕೊಂಡಿವೆ ಎಂದು ಝೆಲೆನ್ಸ್ಕಿ ಬುಧವಾರ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor