ಹೌದಿ ಸ್ವತಂತ್ರ ಸಂಘಟನೆ: ಇರಾನ್ ಪ್ರತಿಪಾದನೆ
ಟೆಹರಾನ್: ಯೆಮೆನ್‍ನ ಹೌದಿ ಬಂಡುಕೋರರು `ಇರಾನ್‍ನ ಏಜೆಂಟರು ಮತ್ತು ಪ್ರಾಕ್ಸಿಗಳು (ಪ್ರತಿನಿಧಿಗಳು)'. ಸೌದಿ ಅರೇಬಿಯಾ ಮೇಲಿನ ಇತ್ತೀಚಿನ ಹೌದಿ ದಾಳಿಗಳ ಹಿಂದೆ ಇರಾನ್ ಕೈವಾಡ ಸ್ಪಷ್ಟವಾಗಿದೆ ಎಂಬ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರ ಹೇಳಿಕೆಯನ್ನು ಇರಾನ್ ಗುರುವಾರ ತಿರಸ್ಕರಿಸಿದ್ದು, ಆ ಗುಂಪು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯಾರಿಂದಲೂ ಆದೇಶಗಳನ್ನು ಪಡೆಯುವುದಿಲ್ಲ ಎಂದು ಪ್ರತಿಪಾದಿಸಿದೆ.
ರೂಬಿಯೋ ಅವರ ಸುಳ್ಳುಗಳು ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಹೌದಿ ಒಂದು ಸ್ವತಂತ್ರ ಯೆಮನ್ ಸಂಘಟನೆಯಾಗಿದ್ದು, ಅದು ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಅದು ಯಾರಿಂದಲೂ ಆದೇಶಗಳನ್ನು ಪಡೆಯುವುದಿಲ್ಲ ಮತ್ತು ಯಾರ ಪ್ರಾಕ್ಸಿಯಾಗಿಯೂ ಕೆಲಸ ಮಾಡುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯೀ `ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹೌದಿ ಬೆದರಿಕೆ ನಿಷ್ಕ್ರಿಯಗೊಳಿಸಲು ಯೆಮನ್ ಒಕ್ಕೂಟ ಪಣ
ಸೌದಿ ಅರೇಬಿಯಾದ ಮೇಲೆ ಮಂಗಳವಾರ ಹೌದಿಗಳು ನಡೆಸಿದ ದಾಳಿಯನ್ನು `ಯೆಮನ್‍ನಲ್ಲಿ ಕಾನೂನು ಬದ್ಧತೆಗೆ ಬೆಂಬಲ ನೀಡುವ ಒಕ್ಕೂಟ' ತೀವ್ರವಾಗಿ ಖಂಡಿಸಿದ್ದು, ಈ ಬೆದರಿಕೆಯನ್ನು ನಿಷ್ಕ್ರಿಯಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಪಣ ತೊಟ್ಟಿದೆ.
ಹೌದಿ ಬಂಡುಕೋರರು ನಡೆಸಿರುವ ಈ ದಾಳಿ ಅಪಾಯಕಾರಿ ಬೆಳವಣಿಗೆಯಾಗಿದ್ದು, ಇದು ಆ ಭಯೋತ್ಪಾದಕ ಗುಂಪಿನ ಶತ್ರುತ್ವ ಮತ್ತು ಜವಾಬ್ದಾರಿರಹಿತ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಒಕ್ಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಲ್ಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೌದಿಗಳು ದಕ್ಷಿಣದ ನಾಲ್ಕು ನಗರಗಳ ಮೇಲೆ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಉಡಾಯಿಸಿದ್ದಲ್ಲದೆ, ಇಂಧನ ಸೌಲಭ್ಯಗಳ ಮೇಲೆಯೂ ದಾಳಿ ನಡೆಸಿದ್ದು ಒಟ್ಟು 73 ನಾಗರಿಕರು ಗಾಯಗೊಂಡಿದ್ದಾರೆ. ಈ ಕೃತ್ಯವು ಸೌದಿ ಸಾರ್ವಭೌಮತ್ವದ ಬಹಿರಂಗ ಉಲ್ಲಂಘನೆ ಹಾಗೂ ದೇಶದ ನಾಗರಿಕರು ಮತ್ತು ನಿವಾಸಿಗಳ ಭದ್ರತೆಗೆ ಎದುರಾಗಿರುವ ನೇರ ಬೆದರಿಕೆಯಾಗಿದೆ. ಬೆದರಿಕೆಯ ಮೂಲಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಮತ್ತು ಅದರ ಅಪಾಯವನ್ನು ನಿಷ್ಕ್ರಿಯಗೊಳಿಸಲು ಒಕ್ಕೂಟದ ಜಂಟಿ ಪಡೆಗಳ ಕಮಾಂಡ್ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.