ಜೋರ್ಡಾನ್ ನ ಅಲ್-ಅಜ್ರಾಕ್ ನೆಲೆ ಎಂದರೇನು? ಇರಾನ್ ಇದನ್ನು ಏಕೆ ಗುರಿಯಾಗಿಸುತ್ತಿದೆ?
ಯಶ್ ರಾಜ್ ಶರ್ಮ - Aljazeera. com ವರದಿ
Photo Credit : aljazeera.com
ಹಾರ್ಮುಝ್ ಜಲಸಂಧಿಯಲ್ಲಿ ಈ ವಾರ ಅಮೆರಿಕ ಮತ್ತು ಇರಾನ್ ತೈಲ ಟ್ಯಾಂಕರ್ ಗಳ ಮೇಲೆ ಪರಸ್ಪರ ದಾಳಿ ನಡೆಸುತ್ತಿರುವಂತೆಯೇ, ಯುಎಸ್ ಮಿಲಿಟರಿ ಆಸ್ತಿಗಳು ಮತ್ತು ಸಿಬ್ಬಂದಿಯನ್ನು ಹೊಂದಿರುವ ಜೋರ್ಡಾನ್ ನ ಅಲ್-ಅಜ್ರಾಕ್ ವಾಯುನೆಲೆಯ ಮೇಲೆ ಇರಾನ್ ಕೂಡ ಹಲವಾರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ. ಇದನ್ನು ಇರಾನ್ ಪ್ರತಿದಾಳಿ ಎಂದು ಕರೆದಿದೆ.
ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಗಿನ ಜಾವದ ನಡುವೆ ಹಾರಿಸಲಾದ 20 ಕ್ಷಿಪಣಿಗಳಲ್ಲಿ 18 ಅನ್ನು ತಡೆಹಿಡಿದು ನಾಶಪಡಿಸಲಾಗಿದೆ ಎಂದು ಜೋರ್ಡಾನ್ ಸಶಸ್ತ್ರ ಪಡೆಗಳು ತಿಳಿಸಿವೆ. ಉಳಿದ ಎರಡು ಕ್ಷಿಪಣಿಗಳು ಜನಸಂಚಾರವಿಲ್ಲದ ಬಯಲು ಪ್ರದೇಶಗಳಲ್ಲಿ ಬಿದ್ದಿವೆ. ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.
ಇರಾನ್ ಜೋರ್ಡಾನ್ ನಲ್ಲಿ ಯಾವುದನ್ನು ಗುರಿಯಾಗಿಸಿತು?
ರಾತ್ರೋರಾತ್ರಿ, ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಜೋರ್ಡಾನ್ ನ ಜರ್ಕಾ ಪ್ರಾಂತ್ಯದ ಅಜ್ರಾಕ್ ಬಳಿಯಿರುವ ಮುವಾಫಕ್ ಸಾಲ್ಟಿ ಏರ್ ಬೇಸ್‌ನಲ್ಲಿ (ಇದನ್ನು ಅಲ್-ಅಜ್ರಾಕ್ ನೆಲೆ ಎಂದೂ ಕರೆಯುತ್ತಾರೆ) ನೆಲೆಗೊಂಡಿರುವ ಯುಎಸ್ ಪಡೆಗಳ ಮೇಲೆ "ವಿನಾಶಕಾರಿ" ಕ್ಷಿಪಣಿ ದಾಳಿಗಳನ್ನು ನಡೆಸಿರುವುದಾಗಿ ತಿಳಿಸಿದೆ.
ತಸ್ನಿಮ್ ಸುದ್ದಿ ಸಂಸ್ಥೆ, IRGC ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದ್ದು, ಎಫ್-35, ಎಫ್-16 ಮತ್ತು ಎಫ್-15 ಯುದ್ಧವಿಮಾನಗಳ ನಿರ್ವಹಣೆ, ಸಜ್ಜುಗೊಳಿಸುವಿಕೆ ಮತ್ತು ನಿಯೋಜನಾ ತಾಣಗಳು ಹಾಗೂ ಅವುಗಳ ಶೆಡ್ ಗಳ ಮೇಲೆ ಕ್ಷಿಪಣಿಗಳು ಅಪ್ಪಳಿಸಿದ್ದು, ಶತ್ರುಗಳಿಗೆ ಭಾರೀ ಹಾನಿಯನ್ನುಂಟುಮಾಡಿವೆ ಎಂದಿದೆ.
ಜೋರ್ಡಾನ್ ಸಶಸ್ತ್ರ ಪಡೆಗಳ ಪ್ರಕಾರ, ದೇಶವು 20 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಎದುರಿಸಿದ್ದು, ಅವುಗಳಲ್ಲಿ 18 ಅನ್ನು ತಡೆಹಿಡಿದು ನಾಶಪಡಿಸಿದೆ. ಉಳಿದ ಎರಡು ಕ್ಷಿಪಣಿಗಳು ಜನಸಂಚಾರವಿಲ್ಲದ ಬಯಲು ಪ್ರದೇಶಗಳಲ್ಲಿ ಬಿದ್ದಿವೆ.
ವಾಷಿಂಗ್ಟನ್ ಡಿಸಿಯಲ್ಲಿರುವ ಟ್ರಂಪ್ ಆಡಳಿತದ ಅಧಿಕಾರಿಯೊಬ್ಬರು Aljazeera ಜತೆ ಮಾತನಾಡಿ, ಜೋರ್ಡಾನ್ ನಲ್ಲಿರುವ ಯುಎಸ್ ಪಡೆಗಳ ಮೇಲೆ ಹಾರಿಸಲಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ. "ಸಮಗ್ರ ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಮುಂದೆ ಇರಾನ್‌ನ ಪ್ರತಿಕ್ರಿಯೆಯು ನಿಷ್ಪರಿಣಾಮಕಾರಿಯಾಗಿದೆ" ಎಂದು ಆ ಅಧಿಕಾರಿ ಹೇಳಿದ್ದಾರೆ.
ಇರಾನ್ ಜೋರ್ಡಾನ್ ಮೇಲೆ ದಾಳಿ ನಡೆಸುತ್ತಿರುವುದೇಕೆ?
ಹಾರ್ಮುಝ್ ಜಲಸಂಧಿಯಲ್ಲಿ ಇರಾನ್ ನ ಲರಾಕ್ ದ್ವೀಪದಲ್ಲಿರುವ ರಾಕೆಟ್ ಲಾಂಚರ್‌ಗಳ ಮೇಲೆ ಯುಎಸ್ ದಾಳಿಯೊಂದಿಗೆ ಎರಡು ವಾರಗಳ ಹಿಂದೆ ಪ್ರಾರಂಭವಾದ ಇತ್ತೀಚಿನ ಉಲ್ಬಣದಲ್ಲಿ ಇರಾನ್ ಜೋರ್ಡಾನ್ ಆಸ್ತಿಗಳನ್ನು ಗುರಿಯಾಗಿಸುತ್ತಿದೆ. ಜಲಸಂಧಿಯಲ್ಲಿ ಸಮುದ್ರ ಸ್ಫೋಟಕ ಹರಡಲು ಇರಾನ್ ಸಿದ್ಧತೆ ನಡೆಸುತ್ತಿದೆ ಎಂದು ಯುಎಸ್ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ನೆರೆಯ ಗಲ್ಫ್ ದೇಶಗಳಲ್ಲಿರುವ ಯುಎಸ್ ಆಸ್ತಿಗಳ ಮೇಲೆ ದಾಳಿ ನಡೆಸಿತ್ತು. ಈಗ ಇದನ್ನು ಜೋರ್ಡಾನ್‌ಗೂ ವಿಸ್ತರಿಸಿದೆ.
2026ರ ಯುಎಸ್ ಕಾಂಗ್ರೆಷನಲ್ ರಿಸರ್ಚ್ ಸರ್ವಿಸ್ ವರದಿಯ ಪ್ರಕಾರ, ಯುಎಸ್ ತನ್ನ ವಿದೇಶಿ ಮಿಲಿಟರಿ ನೆಲೆಗಳು ಮತ್ತು ಆಸ್ತಿಗಳ ಸಾಮರ್ಥ್ಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದಿಲ್ಲವಾದರೂ, ಜೋರ್ಡಾನ್‌ನಲ್ಲಿ ಸುಮಾರು 4,000 ಯುಎಸ್ ಸೈನಿಕರಿದ್ದಾರೆ.
ಅವರಲ್ಲಿ ಕೆಲವರು ಅಲ್-ಅಜ್ರಾಕ್ ನೆಲೆಯಲ್ಲಿ ನಿಯೋಜಿಸಲ್ಪಟ್ಟಿದ್ದಾರೆ. ದಕ್ಷಿಣ ಜೋರ್ಡಾನ್ ನಲ್ಲಿರುವ ಕಿಂಗ್ ಫೈಸಲ್ ವಾಯುನೆಲೆ ಮತ್ತು ಸಿರಿಯಾ ಹಾಗೂ ಇರಾಕ್ ಗಡಿಗಳಿಗೆ ಹತ್ತಿರವಿರುವ ಈಶಾನ್ಯ ಜೋರ್ಡಾನ್‌ನಲ್ಲಿರುವ ಟವರ್ 22 ಎಂದು ಕರೆಯಲ್ಪಡುವ ದೂರದ ಯುಎಸ್ ಮಿಲಿಟರಿ ಲಾಜಿಸ್ಟಿಕ್ಸ್ ಔಟ್‌ಪೋಸ್ಟ್‌ನಲ್ಲಿಯೂ ಯುಎಸ್ ಸೈನಿಕರನ್ನು ಹೊಂದಿದೆ.
ನಡೆಯುತ್ತಿರುವ ಯುದ್ಧದಲ್ಲಿ, ಮಾರ್ಚ್ ಮತ್ತು ಸೆಪ್ಟೆಂಬರ್ ನಡುವೆ ಟೆಹರಾನ್ ಅಲ್-ಅಜ್ರಾಕ್ ನೆಲೆ ಮೇಲೆ 10ಕ್ಕೂ ಹೆಚ್ಚು ಬಾರಿ ದಾಳಿ ಮಾಡಿರುವುದಾಗಿ ಹೇಳಿಕೊಂಡಿದೆ. ಇರಾನ್ ಮಾರ್ಚ್ ಆರಂಭದಲ್ಲಿ ಅಲ್-ಅಜ್ರಾಕ್ ಮೇಲೆ ಮೊದಲ ಬಾರಿಗೆ ವಾಯು ದಾಳಿ ನಡೆಸಿತ್ತು.
ಜೂನ್ 10ರಂದು, ಹಾರ್ಮುಝ್ ಜಲಸಂಧಿಯಲ್ಲಿ ಯುಎಸ್ ಅಪಾಚೆ ಹೆಲಿಕಾಪ್ಟರ್ ಪತನಗೊಂಡ ಮರುದಿನ ಯುಎಸ್ ಪಡೆಗಳು ಟೆಹರಾನ್‌ನ ಆಸ್ತಿಗಳ ಮೇಲೆ ದಾಳಿ ನಡೆಸಿತು. ಇದಾದ ಬಳಿಕ ಇರಾನ್ ಮತ್ತೊಮ್ಮೆ ಅಲ್-ಅಜ್ರಾಕ್ ವಾಯುನೆಲೆ ಹಾಗೂ ಕುವೈತ್ ಮತ್ತು ಬಹ್ರೇನ್‌ನಲ್ಲಿ ಯುಎಸ್ ಮಿಲಿಟರಿ ಸಿಬ್ಬಂದಿ ಮತ್ತು ಆಸ್ತಿಗಳನ್ನು ಹೊಂದಿರುವ ಇತರ ನೆಲೆಗಳ ಮೇಲೆ ದಾಳಿ ಮಾಡಿರುವುದಾಗಿ ಹೇಳಿಕೊಂಡಿದೆ.
ಆ ಸಂದರ್ಭದಲ್ಲಿ, IRGC ತನ್ನ ದೂರಗಾಮಿ ಕ್ಷಿಪಣಿಗಳು ಹ್ಯಾಂಗರ್ ಗಳು ಮತ್ತು ಕಮಾಂಡ್ ಸೆಂಟರ್‌ಗಳು ಸೇರಿದಂತೆ ಅಲ್-ಅಜ್ರಾಕ್ ವಾಯುನೆಲೆಯಲ್ಲಿನ ಹಲವಾರು ಗುರಿಗಳನ್ನು ಧ್ವಂಸಗೊಳಿಸಿವೆ ಎಂದು ಹೇಳಿತ್ತು. ಆದರೆ, ಗುರಿಯಾಗಿಸಲ್ಪಟ್ಟ ದೇಶಗಳ ಅಧಿಕಾರಿಗಳು ಯಾವುದೇ ಪ್ರಾಣಹಾನಿಯಿಲ್ಲದೆ ಎಲ್ಲಾ ಕ್ಷಿಪಣಿಗಳನ್ನು ತಡೆಯಲಾಗಿದೆ ಎಂದು ತಿಳಿಸಿದ್ದರು.
ಮುಂದಿನ ವಾರಗಳಲ್ಲಿ, ಅಲ್-ಅಜ್ರಾಕ್ ನೆಲೆ ಮೇಲೆ ಹಲವು ಬಾರಿ ದಾಳಿ ಮಾಡಿರುವುದಾಗಿ ಇರಾನ್ ಹೇಳಿಕೊಂಡಿದ್ದು, ಅಲ್ಲಿ ನೆಲೆಗೊಂಡಿರುವ ಯುಎಸ್ ಆಸ್ತಿಗಳಿಗೆ ಭಾರೀ ಹಾನಿಯನ್ನುಂಟುಮಾಡಿದೆ ಎಂದು ತಿಳಿಸಿದೆ.
ಜುಲೈ 17ರಂದು, ಅಲ್-ಅಜ್ರಾಕ್ ನೆಲೆಯಲ್ಲಿ ನೆಲೆಗೊಂಡಿರುವ ಯುಎಸ್ ಮಿಲಿಟರಿ ವಿಮಾನಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ದಾಳಿ ಮಾಡಿರುವುದಾಗಿ ಇರಾನ್ ಹೇಳಿಕೊಂಡಿದ್ದು, ಹಲವಾರು ಇಂಧನ ತುಂಬುವ ವಿಮಾನಗಳು ಮತ್ತು ಯುದ್ಧವಿಮಾನಗಳನ್ನು ನಾಶಪಡಿಸಿರುವುದಾಗಿ ತಿಳಿಸಿದೆ. ಇರಾನ್ ದಾಳಿಯಲ್ಲಿ ಇಬ್ಬರು ಯುಎಸ್ ಸೇನಾ ಸಿಬ್ಬಂದಿ "ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾರೆ" ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಬಳಿಕ ದೃಢಪಡಿಸಿತು. ಈ ದಾಳಿಯಲ್ಲಿ ಒಬ್ಬರು ನಾಪತ್ತೆಯಾಗಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ.
ಜೋರ್ಡಾನ್ ಮತ್ತು ಅಮೆರಿಕಕ್ಕೆ ಅಲ್-ಅಜ್ರಾಕ್ ನೆಲೆ ಎಷ್ಟು ಮುಖ್ಯ?
ಅಮ್ಮಾನ್ ನಿಂದ ಈಶಾನ್ಯಕ್ಕೆ ಸುಮಾರು 100 ಕಿ.ಮೀ. (62 ಮೈಲಿ) ದೂರದಲ್ಲಿರುವ ಜನಸಂಚಾರವಿಲ್ಲದ ಪೂರ್ವ ಮರುಭೂಮಿಯಲ್ಲಿ ಅಜ್ರಾಕ್ ಬಳಿಯಿರುವ ಮುವಾಫಕ್ ಸಾಲ್ಟಿ ವಾಯುನೆಲೆ ಇದೆ. 1966ರಲ್ಲಿ ಸಮು ಕದನದಲ್ಲಿ ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ವೀರಮರಣ ಅಪ್ಪಿದ ಜೋರ್ಡಾನ್‌ನ ಯುದ್ಧವಿಮಾನ ಪೈಲಟ್ ಲೆಫ್ಟಿನೆಂಟ್ ಮುವಾಫಕ್ ಸಾಲ್ಟಿ ಅವರ ನೆನಪಿಗಾಗಿ ಈ ನೆಲೆಗೆ ಅಧಿಕೃತವಾಗಿ ಅವರ ಹೆಸರನ್ನೇ ಇಡಲಾಗಿದೆ.
ರಾಜ್ಯದಾದ್ಯಂತ 12 ಮಿಲಿಟರಿ ನೆಲೆಗಳಿಗೆ ಯುಎಸ್ ಪಡೆಗಳು ಮತ್ತು ಗುತ್ತಿಗೆದಾರರಿಗೆ ಪ್ರವೇಶ ಕಲ್ಪಿಸುವ ರಕ್ಷಣಾ ಸಹಕಾರ ಒಪ್ಪಂದಕ್ಕೆ ಅಮ್ಮಾನ್ ಮತ್ತು ವಾಷಿಂಗ್ಟನ್ 2021ರಲ್ಲಿ ಸಹಿ ಹಾಕಿದವು.
ಕಿಂಗ್ಸ್ ಕಾಲೇಜ್ ಲಂಡನ್ ನ ಯುದ್ಧ ಅಧ್ಯಯನ ವಿಭಾಗದ ಅಂತರರಾಷ್ಟ್ರೀಯ ಸಂಬಂಧಗಳ ಉಪನ್ಯಾಸಕಿ ತಹಾನಿ ಮುಸ್ತಫಾ ಮಾತನಾಡಿ, ಎಫ್-35, ಎಫ್-16 ಮತ್ತು ಎಫ್-22 ಯುದ್ಧವಿಮಾನಗಳನ್ನು ಹೊಂದಿರುವ ಬೆರಳೆಣಿಕೆಯಷ್ಟು ನೆಲೆಗಳಲ್ಲಿ ಅಲ್-ಅಜ್ರಾಕ್ ನೆಲೆಯೂ ಒಂದು. ಅಮೆರಿಕನ್ನರು ತಮ್ಮ ಆಸ್ತಿಗಳನ್ನು ಮರೆಮಾಚಲು ಇಲ್ಲಿ ಹ್ಯಾಂಗರ್ ಗಳನ್ನು ಹೊಂದಿದ್ದಾರೆ, ಮತ್ತು ಇರಾನ್ ನಿಖರವಾಗಿ ಅದನ್ನೇ ಗುರಿಯಾಗಿಸುತ್ತಿದೆ. ಎರಡು ರನ್‌ವೇಗಳನ್ನು ಹೊಂದಿರುವ ಈ ವಿಶಾಲವಾದ ನೆಲೆಯು ಅಮೆರಿಕಕ್ಕೆ ಒಂದು ಪ್ರಮುಖ ಆಸ್ತಿಯಾಗಿದೆ ಮತ್ತು ಇರಾನ್‌ಗೆ ಒಂದು ಗುರಿಯಾಗಿದೆ ಎಂದು ಹೇಳಿದರು.
ಅಮೆರಿಕ-ಇಸ್ರೇಲ್ ಯುದ್ಧದ ಆರಂಭದ ದಿನಗಳಲ್ಲಿ ಈ ನೆಲೆಯು ಯುಎಸ್ ಸಿ-17 ಸಾರಿಗೆ ವಿಮಾನಗಳು ಮತ್ತು ಸುಮಾರು 60 ಯುದ್ಧವಿಮಾನಗಳಿಗೆ "ಪ್ರಮುಖ ಲಾಜಿಸ್ಟಿಕ್ಸ್ ಕೇಂದ್ರ"ವಾಯಿತು ಎಂದು ಯುಎಸ್ ಥಿಂಕ್ ಟ್ಯಾಂಕ್ ವಾಷಿಂಗ್ಟನ್ ಇನ್‌ಸ್ಟಿಟ್ಯೂಟ್‌ನ ಫೆಲೋ ಡೇವಿಡ್ ಶೆಂಕರ್ ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
"ಜೋರ್ಡಾನ್ ಉತ್ತಮ ಕಾರ್ಯತಂತ್ರವನ್ನು ಒದಗಿಸುತ್ತದೆ" ಎಂದು ಅವರು ಹೇಳಿದರು. ಇರಾನ್ ಗೆ ತೀರಾ ಹತ್ತಿರದಲ್ಲಿರುವ GCC ದೇಶಗಳಿಗೆ ಹೋಲಿಸಿದರೆ, ಇರಾನ್‌ನ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ದೂರವಿರಲು ಇದು ಸಹಾಯ ಮಾಡುವುದರಿಂದ ದೇಶದ ಸ್ಥಾನವು ಯುಎಸ್-ಇರಾನ್ ಯುದ್ಧಕ್ಕೆ "ಅಗತ್ಯವಾಗಿದೆ" ಎಂದಿದ್ದಾರೆ ಅವರು.
"ಸಿರಿಯಾ ಮತ್ತು ಇರಾಕ್ ನಲ್ಲಿ ಗುಪ್ತಚರ, ಕಣ್ಗಾವಲು, ಗುರಿ ಸ್ವಾಧೀನ ಮತ್ತು ನಿಗಾ ಕಾರ್ಯಾಚರಣೆಗಳನ್ನು ನಡೆಸಲು ಯುಎಸ್‌ಗೆ ಜೋರ್ಡಾನ್ ವಾಯುನೆಲೆಗಳು ವಿಶೇಷವಾಗಿ ಪ್ರಮುಖವಾಗಿವೆ" ಎಂದು ವಾಷಿಂಗ್ಟನ್‌ನ ಕಾಂಗ್ರೆಷನಲ್ ರಿಸರ್ಚ್ ಸರ್ವಿಸ್‌ನ 2023ರ ವರದಿ ಒತ್ತಿಹೇಳಿದೆ.
2021ರ ಒಪ್ಪಂದಕ್ಕೂ ಮೊದಲು ಯುಎಸ್ "ಮುವಾಫಕ್ ಸಾಲ್ಟಿ ವಾಯುನೆಲೆಯಲ್ಲಿ ತನ್ನ ಉಪಸ್ಥಿತಿಯನ್ನು ಅಧಿಕೃತವಾಗಿ ಎಂದಿಗೂ ಒಪ್ಪಿಕೊಂಡಿರಲಿಲ್ಲ" ಎಂದು ಆ ವರದಿ ಗಮನಸೆಳೆದಿದೆ. ಆದರೂ, "ಉಪಗ್ರಹ ಚಿತ್ರಗಳು ಕನಿಷ್ಠ 2016ರಿಂದ ಇದು ಯುಎಸ್ ವಾಯುಪಡೆಯ ಮಾನವರಹಿತ ವೈಮಾನಿಕ ವಾಹನಗಳು ಮತ್ತು ವೇಗದ ಜೆಟ್‌ಗಳನ್ನು ಹೊಂದಿದೆ" ಎಂಬುದನ್ನು ತೋರಿಸಿವೆ.
ಈ ವರ್ಷದ ಜುಲೈನಲ್ಲಿ, ಬಹ್ರೇನ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಖತರ್‌ನಲ್ಲಿ ನೆಲೆಸಿದ್ದ ಹಲವಾರು ಯುಎಸ್ ಸೈನಿಕರನ್ನು ಅಲ್ಲಿಗೆ ಸ್ಥಳಾಂತರಿಸಿದ್ದರಿಂದ, ನಡೆಯುತ್ತಿರುವ ಯುದ್ಧದ ಆರಂಭಿಕ ದಿನಗಳಲ್ಲಿ ಜೋರ್ಡಾನ್ ಹೆಚ್ಚು ಮಹತ್ವ ಪಡೆದುಕೊಂಡಿತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು.
ನೆಲೆಯ ವಿಸ್ತರಣೆಗಾಗಿ 2017ರಲ್ಲಿ ಯುಎಸ್ ಕಾಂಗ್ರೆಸ್ 143 ಮಿಲಿಯನ್ ಡಾಲರ್ ವಾಯುಪಡೆ ನಿರ್ಮಾಣ ನಿಧಿಗೆ ಅನುಮೋದನೆ ನೀಡಿತ್ತು. ಇದು ಆ ಸಮಯದಲ್ಲಿ ಅಂತಹ ಅತಿ ದೊಡ್ಡ ಯೋಜನೆಯಾಗಿತ್ತು ಎಂದು ವರದಿಯಾಗಿದೆ.
ಸೌಜನ್ಯ: Aljazeera.com