ಹಿಂದುಜಾ ಕುಟುಂಬದ ವಿರುದ್ಧ ಮಾನವ ಕಳ್ಳಸಾಗಣೆ ಮೊಕದ್ದಮೆ
ಸಾಂದರ್ಭಿಕ ಚಿತ್ರ
ಬರ್ನ್ : ಭಾರತೀಯ ಮೂಲದ ಹಿಂದುಜಾ ಕುಟುಂಬದ ನಾಲ್ವರು ಸದಸ್ಯರ ವಿರುದ್ಧ ಮಾನವ ಕಳ್ಳಸಾಗಣೆ ಪ್ರಕರಣ ದಾಖಲಾಗಿದ್ದು ಅದರ ವಿಚಾರಣೆ ಸೋಮವಾರ ಪ್ರಾರಂಭಗೊಂಡಿದೆ.
ಹಿಂದುಜಾ ಕುಟುಂಬದವರು ತಮ್ಮ ಲೇಕ್ ಜಿನೆವಾ ವಿಲ್ಲಾದಲ್ಲಿನ ಕೆಲಸದವರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಮನೆಯ ಕೆಲಸದವರಿಗೆ ನೀಡುವ ಸಂಬಳಕ್ಕಿಂತ ಹೆಚ್ಚಿನ ಹಣವನ್ನು ಸಾಕುಪ್ರಾಣಿಗಳಿಗೆ ಖರ್ಚು ಮಾಡುತ್ತಿದ್ದಾರೆ. ಕೆಲಸದವರ ಪಾಸ್‍ಪೋರ್ಟ್‍ಗಳನ್ನು ಕಿತ್ತುಕೊಂಡು ಮನೆಯಿಂದ ಹೊರಗೆ ತೆರಳದಂತೆ ನಿರ್ಬಂಧಿಸಿದ್ದಾರೆ. ಮನೆಕೆಲಸದವರ ವೇತನವನ್ನು ಭಾರತದಲ್ಲಿರುವ ಅವರ ಕುಟುಂಬಕ್ಕೆ ನೀಡುತ್ತಿರುವುದರಿಂದ ಮನೆಕೆಲಸದವರಿಗೆ ಸ್ವಿಝರ್‍ಲ್ಯಾಂಡ್‍ನ ಕರೆನ್ಸಿ ದೊರೆಯದಂತೆ ಮಾಡಿದ್ದಾರೆ ಎಂದು ದೂರು ನೀಡಿರುವುದಾಗಿ `ಬ್ಲೂಮ್‍ಬರ್ಗ್' ವರದಿ ಮಾಡಿದೆ.
ಮನೆಕೆಲಸದವರನ್ನು ದಿನಕ್ಕೆ 15ರಿಂದ 18 ಗಂಟೆ ದುಡಿಸಿಕೊಂಡು (ವಾರದ ರಜೆ ನೀಡದೆ) ಅವರಿಗೆ ದಿನಕ್ಕೆ 7.84 ಡಾಲರ್ ವೇತನ ಮಾತ್ರ ನೀಡಲಾಗುತ್ತಿದೆ. ಇದು ಈ ಕುಟುಂಬ ತಮ್ಮ ಸಾಕುಪ್ರಾಣಿಗೆ ಮಾಡುತ್ತಿರುವ ಖರ್ಚಿಗಿಂತಲೂ ಕಡಿಮೆ ಎಂದು ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಆದರೆ ಈ ಆರೋಪಗಳನ್ನು ಹಿಂದುಜಾ ಕುಟುಂಬದ ವಕೀಲರು ನಿರಾಕರಿಸಿದ್ದಾರೆ.