IDF ಸಿರಿಯಾ, ಲೆಬನಾನ್, ಗಾಝಾದಿಂದ ಹಿಂದೆ ಸರಿಯುವುದಿಲ್ಲ: ಇಸ್ರೇಲ್
ಇಸ್ರೇಲ್ ಕಾಟ್ಜ್ | PhotoCredit : AP
ಟೆಲ್ಅವೀವ್, ಜೂ.15: ಮಧ್ಯಪ್ರಾಚ್ಯ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಮತ್ತು ಇರಾನ್ ಒಪ್ಪಿಕೊಂಡ ಬೆನ್ನಲ್ಲೇ, ಇಸ್ರೇಲ್ ಪಡೆಗಳು ಲೆಬನಾನ್, ಸಿರಿಯಾ ಮತ್ತು ಗಾಝಾದಲ್ಲಿ ಅನಿರ್ದಿಷ್ಟಾವಧಿಯವರೆಗೆ ಉಳಿಯಲಿವೆ ಎಂದು ಇಸ್ರೇಲ್ ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಸೋಮವಾರ ತಿಳಿಸಿದ್ದಾರೆ.
‘ನಾವು ಒಂದು ಸ್ಪಷ್ಟ ನೀತಿಯನ್ನು ಅನುಸರಿಸುತ್ತಿದ್ದೇವೆ. ಅದರಂತೆ, ಶತ್ರುಗಳಿಂದ ಇಸ್ರೇಲ್ ಗಡಿ ಮತ್ತು ಸಮುದಾಯಗಳನ್ನು ರಕ್ಷಿಸಲು IDF (ಇಸ್ರೇಲ್ ರಕ್ಷಣಾ ಪಡೆ) ಲೆಬನಾನ್, ಸಿರಿಯಾ ಮತ್ತು ಗಾಝಾದ ಭದ್ರತಾ ವಲಯಗಳಲ್ಲಿ ಅನಿರ್ದಿಷ್ಟಾವಧಿಯವರೆಗೆ ಮುಂದುವರಿಯಲಿದೆ’ ಎಂದು ಕಾಟ್ಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಈ ಪ್ರದೇಶದಿಂದ ಸ್ಥಳೀಯ ನಿವಾಸಿಗಳನ್ನು ತೆರವುಗೊಳಿಸಲಾಗುವುದು. ಗಡಿ ಗ್ರಾಮಗಳಲ್ಲಿ ಉಗ್ರರ ನೆಲೆಗಳಾಗಿದ್ದ ಮನೆಗಳು ಸೇರಿದಂತೆ ಭೂಮಿಯ ಮೇಲಿನ ಹಾಗೂ ಭೂಗತದಲ್ಲಿರುವ ಎಲ್ಲಾ ಭಯೋತ್ಪಾದಕ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಲಾಗುವುದು. ಪ್ರದೇಶವನ್ನು ತನ್ನ ಸುಪರ್ದಿಯಲ್ಲಿಟ್ಟುಕೊಳ್ಳುವುದು ಮತ್ತು ಭದ್ರತಾ ವಲಯಗಳನ್ನು ನಿರ್ವಹಿಸುವುದು ಐಡಿಎಫ್ನ ಅತ್ಯಂತ ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ. ಆದ್ದರಿಂದ ಎಲ್ಲಾ ಒತ್ತಡಗಳ ಹೊರತಾಗಿಯೂ ಲೆಬನಾನ್ನಿಂದ IDF ಹಿಂದೆ ಸರಿಯುವುದನ್ನು ನಾವು ವಿರೋಧಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.
ಲೆಬನಾನ್ ನಲ್ಲಿನ ಇಸ್ರೇಲ್ ಅಭಿಯಾನಕ್ಕೆ ಪ್ರತಿಯಾಗಿ ಇರಾನ್ ದಾಳಿ ನಡೆಸಿದರೆ, ಇಸ್ರೇಲ್ ‘ಪೂರ್ಣ ಶಕ್ತಿಯೊಂದಿಗೆ’ ತಿರುಗೇಟು ನೀಡಲಿದೆ ಎಂದು ಕಾಟ್ಜ್ ಇರಾನ್ ಗೆ ಎಚ್ಚರಿಕೆ ನೀಡಿದ್ದಾರೆ.