ಟ್ರಂಪ್ ಒಪ್ಪಂದಕ್ಕೆ ನಾವು ಬದ್ಧವಾಗಿಲ್ಲ: ಇಸ್ರೇಲ್ ನ ರಾಷ್ಟ್ರೀಯ ಭದ್ರತಾ ಸಚಿವ ಬೆನ್ಗ್ವಿರ್
ಇಟಮಾರ್ ಬೆನ್‍ಗ್ವಿರ್ | Photo Credit : AP
ಜೆರುಸಲೇಮ್, ಜೂ.15: ಅಮೆರಿಕ ಮತ್ತು ಇರಾನ್ ನಡುವೆ ನಡೆದಿರುವ ಒಪ್ಪಂದವನ್ನು ಇಸ್ರೇಲ್ ನ ಕಟ್ಟಾ ಬಲಪಂಥೀಯ ರಾಷ್ಟ್ರೀಯ ಭದ್ರತಾ ಸಚಿವ ಇಟಮಾರ್ ಬೆನ್ಗ್ವಿರ್ ಖಂಡಿಸಿದ್ದು, ತಮ್ಮ ದೇಶವು ಇದಕ್ಕೆ ಬದ್ಧವಾಗಿಲ್ಲ ಎಂದು ಒತ್ತಿ ಹೇಳಿದ್ದಾರೆ.
‘ಟ್ರಂಪ್ ಅವರ ಒಪ್ಪಂದವು ನಮಗೆ ಬದ್ಧವಾಗಿಲ್ಲ. ನಾವು ಈ ಒಪ್ಪಂದದ ಭಾಗವಾಗಿಲ್ಲ. ಇದು ನಮ್ಮ ಭದ್ರತೆಯನ್ನು ರಕ್ಷಿಸುವುದಿಲ್ಲ. ಇಸ್ರೇಲ್ ಅಮೆರಿಕಕ್ಕೆ ಒಳಪಟ್ಟಿಲ್ಲ ಮತ್ತು ನಾವು ಸ್ವತಂತ್ರ ಹಾಗೂ ಸಾರ್ವಭೌಮ ರಾಷ್ಟ್ರ. ಇಸ್ರೇಲ್ ತನ್ನ ಭದ್ರತಾ ಹಿತಾಸಕ್ತಿಗಳನ್ನು ಅಂತರರಾಷ್ಟ್ರೀಯ ಒಪ್ಪಂದಗಳಿಗೆ ಅಧೀನಗೊಳಿಸುವುದಿಲ್ಲ’ ಎಂದು ಬೆನ್ಗ್ವಿರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಜೂನ್ 19ರಂದು ಸ್ವಿಟ್ಜರ್ಲೆಂಡ್ ನಲ್ಲಿ ಅಧಿಕೃತವಾಗಿ ಸಹಿಯಾಗಲಿರುವ ಈ ಒಪ್ಪಂದವು ಹಲವು ರಂಗಗಳಲ್ಲಿನ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತದೆ. ಹಾಗೆಯೇ ಇರಾನ್ ನ ಪರಮಾಣು ಕಾರ್ಯಕ್ರಮ ಮತ್ತು ಇತರ ಬಾಕಿ ಉಳಿದಿರುವ ವಿಷಯಗಳ ಕುರಿತು ಮಾತುಕತೆಗೆ ದಾರಿ ಮಾಡಿಕೊಡುತ್ತದೆ.
ಅಮೆರಿಕ–ಇರಾನ್ ಒಪ್ಪಂದದಲ್ಲಿ ಒಳಗೊಂಡಿರುವ ಲೆಬನಾನ್ ಗೆ ಸಂಬಂಧಿಸಿದ ತಿಳುವಳಿಕೆಗಳಿಗೆ ಇಸ್ರೇಲ್ ಬದ್ಧವಾಗಿಲ್ಲ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ತಿಳಿಸಿರುವುದಾಗಿ ‘ಮಿಡ್ಲ್ ಈಸ್ಟ್ ಐ’ ವರದಿ ಮಾಡಿದೆ.
ಇಸ್ರೇಲಿ ಪಡೆಗಳು ಪ್ರಸ್ತುತ ಲೆಬನಾನ್ ಭೂಪ್ರದೇಶದೊಳಗೆ ಹೊಂದಿರುವ ಸ್ಥಾನಗಳಿಂದ ಹಿಂದೆ ಸರಿಯುವುದಿಲ್ಲ ಮತ್ತು ಹೆಜ್ಬುಲ್ಲಾದಿಂದ ಎದುರಾಗುವ ಬೆದರಿಕೆಗಳನ್ನು ಎದುರಿಸುವ ಗುರಿಯನ್ನು ಹೊಂದಿರುವ ಮಿಲಿಟರಿ ಕಾರ್ಯಾಚರಣೆಗಳನ್ನು ಮುಂದುವರಿಸುತ್ತವೆ ಎಂದು ನೆತನ್ಯಾಹು ಅವರು ಟ್ರಂಪ್ ಗೆ ತಿಳಿಸಿದ್ದಾರೆ ಎಂದು ಇಸ್ರೇಲಿ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.