ಅಮೆರಿಕದ ಮೇಲಿನ ತೀವ್ರ ಅಪನಂಬಿಕೆ ಮುಂದುವರಿದಿದೆ: ಇರಾನ್
ಇಸ್ಮಾಯಿಲ್ ಬಾಖೇಯ್ | Photo Credit : X/@IRIMFA_EN/ANI
ಟೆಹರಾನ್, ಜೂ.15: ಯುದ್ಧವನ್ನು ಕೊನೆಗೊಳಿಸುವ ಉದ್ದೇಶದ ಒಪ್ಪಂದದ ಚೌಕಟ್ಟು ಸಿದ್ಧವಾಗಿದ್ದರೂ, ಇರಾನ್ ಇನ್ನೂ ಅಮೆರಿಕದ ಬಗ್ಗೆ ತೀವ್ರ ಅಪನಂಬಿಕೆ ಹೊಂದಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.
‘ಅಮೆರಿಕದ ನಾಯಕರ ದೀರ್ಘಕಾಲದ ತಪ್ಪು ನಡವಳಿಕೆಗಳ ಇತಿಹಾಸದಿಂದಾಗಿ ಇರಾನ್ ಅಮೆರಿಕದ ಮೇಲೆ ತೀವ್ರ ಅಪನಂಬಿಕೆ ಹೊಂದಿದೆ. ಇರಾನ್ ಜನರ ವಿಶ್ವಾಸವನ್ನು ಗಳಿಸಲು ಅಮೆರಿಕ ಇನ್ನೂ ಬಹಳ ದೂರ ಸಾಗಬೇಕಿದೆ. ಈ ಒಪ್ಪಂದದ ಚೌಕಟ್ಟು ಕೇವಲ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಫೆಬ್ರುವರಿ ಕೊನೆಯಲ್ಲಿ ಆರಂಭವಾದ ಯುದ್ಧವನ್ನು ಕೊನೆಗೊಳಿಸಲು ಒಂದು ಹೆಜ್ಜೆಯಾಗಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಾಖೇಯ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಧ್ಯಪ್ರಾಚ್ಯ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕುವ ಮುನ್ನ, ಅಮೆರಿಕ ಮತ್ತು ಇರಾನ್ ಈ ವಾರ ದೋಹಾದಲ್ಲಿ ಪರೋಕ್ಷ ಸಭೆಗಳನ್ನು ನಡೆಸಲಿವೆ ಎಂದು ರಾಜತಾಂತ್ರಿಕ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.