ನಾವೀನ್ಯತೆಯು ಭಾರತದ ಡಿಎನ್‌ಎಯಲ್ಲಿದೆ: ಪ್ರಧಾನಿ ಮೋದಿ
ಫ್ರಾನ್ಸ್ ನಲ್ಲಿ ‘ಭಾರತ ಇನ್ನೋವೇಟ್ಸ್’ಗೆ ಚಾಲನೆ
ಪ್ಯಾರಿಸ್, ಜೂ.14: ನಾವೀನ್ಯತೆ ಎಂಬುದು ಭಾರತದ ಡಿಎನ್‌ಎಯಲ್ಲೇ ಇದೆ. ದೇಶವು ಸಾವಿರಾರು ವರ್ಷಗಳಿಂದ ತನ್ನ ನಾವೀನ್ಯತೆಗಳ ಮೂಲಕ ಜಗತ್ತಿಗೆ ದಾರಿ ತೋರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತ ಮತ್ತು ಫ್ರಾನ್ಸ್ ನಡುವಿನ ವಿಶೇಷ ಬಾಂಧವ್ಯವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದು, ಎರಡೂ ರಾಷ್ಟ್ರಗಳು ಸಂಪರ್ಕ, ದೃಢವಿಶ್ವಾಸ, ನಾವೀನ್ಯತೆ, ಸ್ಫೂರ್ತಿ ಹಾಗೂ ಹಂಚಿಕೆಯ ದೃಷ್ಟಿಕೋನವನ್ನು ಹೊಂದಿವೆ ಎಂದು ಹೇಳಿದ್ದಾರೆ.
‘ಭಾರತ ಮತ್ತು ಫ್ರಾನ್ಸ್ ಎರಡೂ ದೇಶಗಳು ಸಂಪರ್ಕ, ದೃಢವಿಶ್ವಾಸ, ನಾವೀನ್ಯತೆ, ಸ್ಫೂರ್ತಿ ಹಾಗೂ ಹಂಚಿಕೆಯ ದೃಷ್ಟಿಕೋನವನ್ನು ಹೊಂದಿವೆ. ಈ ಸಂಬಂಧದಲ್ಲಿ ಸಂಪರ್ಕದ ಜೊತೆಗೆ ದೃಢವಿಶ್ವಾಸ, ನಾವೀನ್ಯತೆ, ಸ್ಫೂರ್ತಿ, ಹಂಚಿಕೆಯ ಮೌಲ್ಯಗಳು ಹಾಗೂ ಹಂಚಿಕೆಯ ದೃಷ್ಟಿಕೋನಗಳಿವೆ’ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತದ ಪ್ರತಿಭಾವಂತ ಯುವಜನತೆ ಮತ್ತು ಯುರೋಪಿಯನ್ ಪರಿಣತಿಯ ನಡುವೆ ‘ಭಾರತ ಇನ್ನೋವೇಟ್ಸ್’ ಕಾರ್ಯಕ್ರಮವು ಒಂದು ಸೇತುವೆಯಾಗಿ ಹೊರಹೊಮ್ಮುತ್ತಿದ್ದು, ನಾವೀನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ಸಹಯೋಗಕ್ಕಾಗಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಭಾರತೀಯ ಉದ್ಯಮಿಗಳು ಅಭಿವೃದ್ಧಿಪಡಿಸಿದ ವಿಶ್ವದರ್ಜೆಯ ಪರಿಹಾರಗಳನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯಲು ‘ಭಾರತ ಇನ್ನೋವೇಟ್ಸ್’ ಸಹಾಯ ಮಾಡುತ್ತಿದೆ. ಜೊತೆಗೆ ಯುರೋಪ್ ನ ನಾವೀನ್ಯತೆ ಪರಿಸರ ವ್ಯವಸ್ಥೆಯೊಂದಿಗೆ ಆಳವಾದ ಸಹಯೋಗವನ್ನು ಬೆಳೆಸುತ್ತಿದೆ.
ಭಾರತವು ಯಾವುದನ್ನೇ ಆವಿಷ್ಕರಿಸಿದರೂ ಅದು ಮಾನವಕುಲದ ಪ್ರಯೋಜನವನ್ನು ಗುರಿಯಾಗಿರಿಸಿಕೊಂಡಿರುತ್ತದೆ. ‘ಭಾರತ್ ಇನ್ನೋವೇಟ್ಸ್’ ಅದೇ ದೃಷ್ಟಿಕೋನವನ್ನು ಮುನ್ನಡೆಸಲು ಶ್ರಮಿಸುತ್ತದೆ. ಭಾರತವು ಮಾನವೀಯತೆಗಾಗಿ ತಂತ್ರಜ್ಞಾನವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಅದು ನಂಬಿಕೆಗೆ ಅರ್ಹವಾದ, ಎಲ್ಲರನ್ನೂ ಒಳಗೊಂಡ ಹಾಗೂ ಮಾನವ-ಕೇಂದ್ರಿತ ತಂತ್ರಜ್ಞಾನವಾಗಿದೆ ಎಂದು ಮೋದಿ ಹೇಳಿದರು.
ಇದೇ ಸಂದರ್ಭ ಮಾತನಾಡಿದ ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರೋನ್, ‘ಭಾರತ ಮತ್ತು ಫ್ರಾನ್ಸ್ ದೇಶಗಳು ಸಹಕಾರಿ AI (ಕೃತಕ ಬುದ್ಧಿಮತ್ತೆ) ಕಡೆಗೆ ಗಮನ ಹರಿಸುತ್ತಿವೆ. ಎರಡೂ ದೇಶಗಳು ‘ಸಹಕಾರಿ ಎಐ’ನಲ್ಲಿ ನೈಜ ಪಾಲುದಾರಿಕೆ ಹಾಗೂ ಪರಸ್ಪರ ಗೌರವವನ್ನು ನಂಬಿವೆ’ ಎಂದು ಹೇಳಿದರು.
ನಾವೀನ್ಯತೆ ಸಮ್ಮೇಳನ
ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯೆಲ್ ಮ್ಯಾಕ್ರೋನ್ ಅವರು ರವಿವಾರ ಫ್ರಾನ್ಸ್ ನ ನೀಸ್ ನಗರದಲ್ಲಿ ಜಂಟಿಯಾಗಿ ‘ಭಾರತ್ ಇನ್ನೋವೇಟ್ಸ್ 2026’ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಮೂರು ದಿನಗಳ ನಾವೀನ್ಯತೆ ಸಮ್ಮೇಳನವು ಭಾರತ, ಫ್ರಾನ್ಸ್ ಮತ್ತು ಇತರ ಹಲವಾರು ದೇಶಗಳ ಪ್ರಮುಖ ನವೋದ್ಯಮಗಳು (ಸ್ಟಾರ್ಟ್‌ಅಪ್ ಗಳು), ನಾವೀನ್ಯತೆಕಾರರು ಹಾಗೂ ಸಾಹಸೋದ್ಯಮ ಬಂಡವಾಳ ನಿಧಿಗಳನ್ನು ಒಂದೆಡೆ ಸೇರಿಸುತ್ತದೆ.