ಪಾಕಿಸ್ತಾನದ ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿ ಮಾಡಿದ ಪತ್ನಿ, ಸಹೋದರಿ
ಇಮ್ರಾನ್ ಖಾನ್ , ಬುಶ್ರಾ ಬೀಬಿ | Photo Credit : indiatoday.in
ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪತ್ನಿ ಬುಶ್ರಾ ಬೀಬಿ ಮತ್ತು ಸಹೋದರಿ ನೊರೀನ್ ನಿಯಾಝಿ ಅಡಿಯಾಲಾ ಜೈಲಿನಲ್ಲಿ ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ.
ಕುಟುಂಬಸ್ಥರ ಭೇಟಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಸುಪ್ರೀಂ ಕೋರ್ಟ್ ಸಡಿಲಿಸಿದ ಮತ್ತು ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಆದೇಶಿಸಿದ ಒಂದು ದಿನದ ನಂತರ ಈ ಭೇಟಿ ನಡೆದಿದೆ.
ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥರಾಗಿರುವ ಇಮ್ರಾನ್ ಖಾನ್ ಅವರು ತಮ್ಮ ಸಹೋದರಿಯೊಂದಿಗೆ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಎಂದು ಜೈಲು ಮೂಲಗಳನ್ನು ಉಲ್ಲೇಖಿಸಿ Express Tribune ವರದಿ ಮಾಡಿದೆ. ಬುಶ್ರಾ ಬೀಬಿ ಅವರು ಸುಮಾರು 30 ರಿಂದ 35 ನಿಮಿಷಗಳವರೆಗೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ.
ಭೇಟಿಯ ವೇಳೆ ಇಮ್ರಾನ್ ಖಾನ್ ಅವರ ಆರೋಗ್ಯ ವಿಚಾರಿಸಿದ ನೊರೀನ್, ಇಸ್ಲಾಮಾಬಾದ್‌ನ ಶಿಫಾ ಆಸ್ಪತ್ರೆಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್‌ನ ಆದೇಶಿಸಿರುವ ಬಗ್ಗೆ ಇಮ್ರಾನ್‌ಗೆ ವಿವರಿಸಿದ್ದಾರೆ ಎಂದು ವರದಿಯಾಗಿದೆ.
ಮಾಜಿ ಕ್ರಿಕೆಟಿಗ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು 2023ರಿಂದ ಅಡಿಯಾಲಾ ಜೈಲಿನಲ್ಲಿದ್ದಾರೆ. ಅವರು ಭ್ರಷ್ಟಾಚಾರ ಪ್ರಕರಣದಲ್ಲಿ 14 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಇಮ್ರಾನ್ ಖಾನ್ ಅವರನ್ನು ಭೇಟಿಯಾಗದಂತೆ ಅವರ ಕುಟುಂಬಸ್ಥರಿಗೆ ಅವಕಾಶ ನಿರಾಕರಿಸಲಾಗುತ್ತಿದೆ ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ನಾಯಕರು ಈ ಮೊದಲು ಆರೋಪಿಸಿದ್ದರು. ಕಣ್ಣಿನ ಸಮಸ್ಯೆ ಸೇರಿದಂತೆ ಆರೋಗ್ಯ ಸಮಸ್ಯೆಗಳಿಗೆ ಅವರಿಗೆ ಸಾಕಷ್ಟು ವೈದ್ಯಕೀಯ ಚಿಕಿತ್ಸೆ ನೀಡುತ್ತಿಲ್ಲ ಎಂದು ಆರೋಪಿಸಿದ್ದರು.