ಹಾರ್ಮುಝ್ ಬಳಿ ದಾಳಿಗೆ ಒಳಗಾಗಿ ಎರಡು ಹಡಗುಗಳು ಜಲಸಮಾಧಿ
Photo Credit : X
ದುಬೈ: ಅಮೆರಿಕ-ಇರಾನ್ ಯುದ್ಧವು ಆರಂಭವಾದಾಗಿನಿಂದ ಪ್ರಮುಖ ಜಲಮಾರ್ಗದಲ್ಲಿ ವಾಣಿಜ್ಯ ನೌಕೆಗಳ ಮೇಲೆ ನಡೆಯುತ್ತಿರುವ ದಾಳಿಯು ಅತ್ಯಂತ ಗರಿಷ್ಠ ಮಟ್ಟ ತಲುಪಿದ್ದು, ಹಾರ್ಮುಝ್ ಜಲಸಂಧಿಯ ಬಳಿ ಪ್ರತ್ಯೇಕ ಘಟನೆಗಳಲ್ಲಿ ಕ್ಷಿಪಣಿ ದಾಳಿಗೆ ತುತ್ತಾಗಿ ಎರಡು ಹಡಗುಗಳು ಮುಳುಗಿವೆ.
ಸಮುದ್ರಯಾನ ಭದ್ರತಾ ಸಂಸ್ಥೆ ವ್ಯಾನ್ಗಾರ್ಡ್, ಅಂತಾರಾಷ್ಟ್ರೀಯ ಸಮುದ್ರಯಾನ ಸಂಸ್ಥೆ ಹಾಗೂ ಯುಕೆ ಸಾಗರ ವ್ಯಾಪಾರ ಕಾರ್ಯಾಚರಣೆ ಸಂಸ್ಥೆಯ ದತ್ತಾಂಶದ ಪ್ರಕಾರ, ರವಿವಾರದಿಂದ ಗುರುವಾರದವರೆಗೆ ಕನಿಷ್ಠ 10 ನೌಕೆಗಳ ಮೇಲೆ ದಾಳಿ ನಡೆದಿದೆ. ಸಿಂಗಾಪುರ ಧ್ವಜ ಹೊಂದಿದ್ದ ಜಿಎಫ್ಎಸ್ ಪ್ರೈಡ್ ಕಂಟೈನರ್ ಹಡಗು ಮಂಗಳವಾರ ಜಲಸಂಧಿಯನ್ನು ದಾಟುವ ವೇಳೆ ಹಾನಿಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಮುಳುಗಿದೆ. ಹಡಗಿನಲ್ಲಿದ್ದ ಎಲ್ಲಾ 21 ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ಆಂಟಿಗುವಾ ಮತ್ತು ಬಾರ್ಬುಡಾ ಧ್ವಜ ಹೊಂದಿದ್ದ ಕೇಪ್ ಡಾವೊ ಸರಕು ಸಾಗಣೆ ನೌಕೆಯು ಜಲಸಂಧಿಯ ಬಳಿ ಮುಳುಗಿದೆ. ಸೆಪ್ಟೆಂಬರ್ 23ರಂದು ಈ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದ ಬಳಿಕ ಹಾನಿಗೊಳಗಾಗಿತ್ತು. ದಾಳಿಯ ನಂತರ ಒಬ್ಬ ಸಿಬ್ಬಂದಿ ಸಾವನ್ನಪ್ಪಿದ್ದು, ಉಳಿದ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.