ವೊಲೊಡಿಮಿರ್ ಝೆಲೆನ್‍ಸ್ಕಿ | Photo Credit : PTI 

ಕೀವ್: ರಶ್ಯದ ತೈಲ ಸಂಸ್ಕರಣಾಗಾರಗಳ ಮೇಲೆ ದಾಳಿ ಮಾಡದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಸೂಚನೆಯನ್ನು ಉಕ್ರೇನ್ ಇನ್ನು ಮುಂದೆ ಪಾಲಿಸುವುದಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಾಗತಿಕ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಡೀಸೆಲ್ ಬಿಡುಗಡೆ ಮಾಡಲು ರಶ್ಯ ಒಪ್ಪಿಕೊಂಡಿದ್ದಕ್ಕೆ ಪ್ರತಿಯಾಗಿ, ಕಳೆದ ವಾರ ಟ್ರಂಪ್ ರಶ್ಯ ಮೇಲಿನ ನಿರ್ಬಂಧಗಳನ್ನು ಸಡಿಲಗೊಳಿಸಿದಂದಿನಿಂದ ಉಕ್ರೇನ್ ಮತ್ತು ಅಮೆರಿಕ ನಡುವಿನ ಬಾಂಧವ್ಯ ಹದಗೆಟ್ಟಿದೆ. ಈ ಒಪ್ಪಂದವನ್ನು ದುರ್ಬಲ ತೀರ್ಮಾನ ಎಂದು ಬಣ್ಣಿಸಿದ ಝೆಲೆನ್‍ಸ್ಕಿ, ಇದು ಉಕ್ರೇನ್ ವಿರುದ್ಧ ರಶ್ಯ ಮಾಡುತ್ತಿರುವ ಸುದೀರ್ಘ ಯುದ್ಧವನ್ನು ಮತ್ತಷ್ಟು ಮುಂದುವರಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದಿದ್ದಾರೆ.

ರಶ್ಯ ಇಂಧನ ಒಪ್ಪಂದದ ವಿಚಾರದಲ್ಲಿ ಅಮೆರಿಕ ಅಧ್ಯಕ್ಷರಿಂದ ತಮಗೆ ʼದ್ರೋಹ' ಆಗಿದೆ ಎಂದು ಭಾವಿಸುವುದಾಗಿ ಝೆಲೆನ್‍ಸ್ಕಿ ಹೇಳಿದ್ದು ಉಕ್ರೇನ್‍ನ ಸ್ಟಾರ್‍ಲಿಂಕ್ ಉಪಗ್ರಹ ವ್ಯವಸ್ಥೆಗಳ ಪ್ರವೇಶವನ್ನು ಟ್ರಂಪ್ ಆಡಳಿತ ಮತ್ತು ಎಲಾನ್ ಮಸ್ಕ್ ಉದ್ದೇಶಪೂರ್ವಕವಾಗಿ ಕಡಿತಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಮಧ್ಯರಾತ್ರಿಯಲ್ಲಿ ಸ್ಪೇಸ್‍ಎಕ್ಸ್ ಮತ್ತು ಅಮೆರಿಕದಿಂದ ಸ್ಟಾರ್‍ಲಿಂಕ್ ಸೇವೆಗಳನ್ನು ಹಠಾತ್ತನೆ ನಿರ್ಬಂಧಿಸಲಾಗಿದ್ದು ಈ ನಿರ್ಧಾರವು ಅಪಾರ ಪ್ರಮಾಣದ ಮಾನವ ಜೀವಹಾನಿಗೆ ಕಾರಣವಾಗುತ್ತದೆ ಎಂದು ಝೆಲೆನ್‍ಸ್ಕಿ ಹೇಳಿದ್ದು ಸ್ಟಾರ್‍ಲಿಂಕ್ ಅನ್ನು ಮರುಸ್ಥಾಪಿಸುವಂತೆ ಎಲಾನ್ ಮಸ್ಕ್ ಅವರನ್ನು ಒತ್ತಾಯಿಸಿದರು.

ಯಾವುದೇ ಅಡಚಣೆಗೆ ತನ್ನ ಸ್ಪೇಸ್‍ಎಕ್ಸ್ ಕಂಪನಿಯಲ್ಲ, ಬದಲಿಗೆ ಅಮೆರಿಕ ಸರಕಾರವೇ ಕಾರಣ ಎಂದು ಮಸ್ಕ್ ನಂತರ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor