×
Ad

ಅರುಣಾಚಲ ಪ್ರದೇಶ ಎಂದಿಗೂ ಭಾರತದ ಅವಿಭಾಜ್ಯ ಅಂಗ: ಚೀನಾಕ್ಕೆ ಭಾರತದ ತಿರುಗೇಟು

Update: 2025-05-14 10:53 IST

Photo : NDTV

ಹೊಸದಿಲ್ಲಿ: ಅರುಣಾಚಲ ಪ್ರದೇಶದ ಕೆಲವು ನಿರ್ದಿಷ್ಟ ಪ್ರದೇಶಗಳಿಗೆ ಝಂಗ್ನನ್’ ಅಥವಾ ಟಿಬೆಟ್ ನ ದಕ್ಷಿಣ ಭಾಗ ಎಂದು ಮರುನಾಮಕರಣ ಮಾಡುವ ಚೀನಾದ ಪ್ರಯತ್ನಗಳಿಗೆ ಭಾರತ ಮತ್ತೊಮ್ಮೆ ತೀವ್ರ ಪ್ರತಿರೋಧ ದಾಖಲಿಸಿದೆ. ಅರುಣಾಚಲ ಪ್ರದೇಶದ ಸ್ಥಳಗಳಿಗೆ ಮರುನಾಮಕರಣ ಮಾಡುವ ಚೀನಾದ ಮತ್ತೊಂದು ಸುತ್ತಿನ ಪ್ರಯತ್ನದ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಈ ಪ್ರಯತ್ನಗಳನ್ನು ನಿಷ್ಪ್ರಯೋಜಕ ಎಂದು ತಳ್ಳಿ ಹಾಕಿದೆ ಹಾಗೂ ಅರುಣಾಚಲ ಪ್ರದೇಶ ರಾಜ್ಯದ ಸ್ಥಾನಮಾನದ ಕುರಿತ ತನ್ನ ನಿಲುವನ್ನು ಪುನರುಚ್ಚರಿಸಿದೆ.

ಈ ಕುರಿತು ಬುಧವಾರ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಭಾರತೀಯ ರಾಜ್ಯವಾದ ಅರುಣಾಚಲ ಪ್ರದೇಶದ ಸ್ಥಳಗಳಿಗೆ ಮರುನಾಮಕರಣ ಮಾಡುವ ತನ್ನ ನಿಷ್ಪ್ರಯೋಜಕ ಹಾಗೂ ಅಸಂಬದ್ಧ ಪ್ರಯತ್ನಗಳನ್ನು ಚೀನಾ ಮುಂದುವರಿಸಿರುವುದು ನಮ್ಮ ಗಮನಕ್ಕೆ ಬಂದಿದೆ” ಎಂದು ಹೇಳಿದ್ದಾರೆ.

“ನಾವು ನಮ್ಮ ತಾತ್ವಿಕ ನಿಲುವಿನ ಬಗ್ಗೆ ಸ್ಥಿರವಾಗಿದ್ದು, ನಾವು ಇಂತಹ ಪ್ರಯತ್ನಗಳನ್ನು ಸಾರಾಸಗಟಾಗಿ ತಳ್ಳಿ ಹಾಕುತ್ತೇವೆ. ಮರು ನಾಮಕರಣದಿಂದ ಅರುಣಾಚಲ ಪ್ರದೇಶ ಎಂದಿಗೂ ಭಾರತದ ಅವಿಭಾಜ್ಯ ಹಾಗೂ ಬೇರ್ಪಡಿಸಲಾಗದ ಭಾಗವಾಗಿಯೇ ಉಳಿಯಲಿದೆ ಎಂಬ ನಿರಾಕರಿಸಲಾಗದ ವಾಸ್ತವವನ್ನು ಬದಲಿಸಲು ಸಾಧ್ಯವಿಲ್ಲ” ಎಂದೂ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಅರುಣಾಚಲ ಪ್ರದೇಶದ ತನ್ನ ಭೂಭಾಗ ಎಂದು ಪ್ರತಿಪಾದಿಸುತ್ತಿರುವ ಚೀನಾ, ಈಶಾನ್ಯ ಭಾರತದ ರಾಜ್ಯವಾದ ಅರುಣಾಚಲ ಪ್ರದೇಶದ ಹಲವು ಸ್ಥಳಗಳಿಗೆ ಮರುನಾಮಕರಣ ಮಾಡಿದ ನಕ್ಷೆಯನ್ನು ಪದೇ ಪದೇ ಬಿಡುಗಡೆ ಮಾಡುತ್ತಲೇ ಬಂದಿದೆ. 2024ರಲ್ಲೂ ಕೂಡಾ ಅರುಣಾಚಲ ಪ್ರದೇಶದ 30 ಸ್ಥಳಗಳ ಮರುನಾಮಕರಣದ ಪಟ್ಟಿಯನ್ನು ಚೀನಾ ಬಿಡುಗಡೆಗೊಳಿಸಿತ್ತು. ಆದರೆ, ಈ ಪಟ್ಟಿಯನ್ನು ಭಾರತ ಸಾರಾಸಗಟಾಗಿ ತಳ್ಳಿ ಹಾಕಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News