ರಾಜಕೀಯ ಒತ್ತಡಕ್ಕಾಗಿ ಮಾನವ ಹಕ್ಕುಗಳನ್ನು ಬಳಸಬಾರದು: ಪ್ರತಿಭಟನೆಗಳ ಕುರಿತು ವಿಶ್ವಸಂಸ್ಥೆ ಟೀಕೆಗೆ ಭಾರತ ಪ್ರತಿಕ್ರಿಯೆ
ಸಾಂದರ್ಭಿಕ ಚಿತ್ರ (Photo: United Nations University)
ಹೊಸದಿಲ್ಲಿ: ರಾಜಕೀಯ ಒತ್ತಡ ಅಥವಾ ದೇಶಗಳನ್ನು ಆಯ್ದು ಗುರಿಯಾಗಿಸಲು ಮಾನವ ಹಕ್ಕುಗಳನ್ನು ಬಳಸಬಾರದು ಎಂದು ಭಾರತವು ಬುಧವಾರ ಪ್ರತಿಪಾದಿಸಿದೆ. ಆರೋಪಗಳು ಅಥವಾ ಅಪೂರ್ಣ ಅಂಕಿಅಂಶಗಳನ್ನು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ನಕಾರಾತ್ಮಕವಾಗಿ ಬಿಂಬಿಸಲು ಬಳಸುವ ಯತ್ನಗಳನ್ನು ಅದು ವಿರೋಧಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್ಜಿಎ) ಮೂರನೇ ಸಮಿತಿಯ ಸಭೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉಪ ಕಾರ್ಯದರ್ಶಿ ಬರ್ಖಾ ತಮ್ರಾಕರ್, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ವ್ಯವಸ್ಥೆಗಳೊಂದಿಗೆ ಭಾರತವು ತೊಡಗಿಸಿಕೊಳ್ಳುತ್ತದೆ. ಆದರೆ ಇಂತಹ ಸಹಭಾಗಿತ್ವವು ಆಯ್ಕೆ ರಹಿತತೆ ಮತ್ತು ಪಾರದರ್ಶಕತೆಯನ್ನು ಮುಖ್ಯ ತತ್ವಗಳನ್ನಾಗಿಟ್ಟುಕೊಂಡು ಸಂವಾದ ಹಾಗೂ ಸಮಾಲೋಚನೆಯನ್ನು ಆಧರಿಸಬೇಕು ಎಂದು ಹೇಳಿದರು.
ದಿಲ್ಲಿಯಲ್ಲಿ ಯುವಜನರ ನೇತೃತ್ವದ ಇತ್ತೀಚಿನ ಪ್ರತಿಭಟನೆಗಳ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ವ್ಯಕ್ತಪಡಿಸಿರುವ ಕಳವಳಗಳ ನಡುವೆ ತಮ್ರಾಕರ್ ಅವರ ಈ ಹೇಳಿಕೆಗಳು ಹೊರಬಿದ್ದಿವೆ.
ದಿಲ್ಲಿಯಲ್ಲಿ ಯುವಜನರ ನೇತೃತ್ವದ ಪ್ರತಿಭಟನೆಗಳ ವಿರುದ್ಧ ಪೋಲಿಸರು ಪದೇ ಪದೇ ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂದು 20ಕ್ಕೂ ಹೆಚ್ಚು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರು ಮಂಗಳವಾರ ಜಿನಿವಾದಲ್ಲಿ ಕಳವಳ ವ್ಯಕ್ತಪಡಿಸಿದ್ದರು.
ಕಾನೂನು ಜಾರಿ ಸಂಸ್ಥೆಗಳು ನಿಶ್ಯಸ್ತ್ರ ವಿದ್ಯಾರ್ಥಿಗಳ ವಿರುದ್ಧ ಬಲಪ್ರಯೋಗಿಸಿವೆ, ಪ್ರತಿಭಟನಾಕಾರರನ್ನು ಮನಬಂದಂತೆ ವಶಕ್ಕೆ ಪಡೆದಿವೆ ಮತ್ತು ಸಭೆಗಳ ಮೇಲೆ ನಿರ್ಬಂಧಗಳನ್ನು ಹೇರಿವೆ ಎಂದು ವಿಶ್ವಸಂಸ್ಥೆ ವಿಶೇಷ ಕಾರ್ಯವಿಧಾನಗಳ ಕಚೇರಿಯು ಹಂಚಿಕೊಂಡ ಹೇಳಿಕೆಯಲ್ಲಿ ತಜ್ಞರು ಆರೋಪಿಸಿದ್ದರು. ಶಾಂತಿಯುತವಾಗಿ ಸಭೆ ಸೇರುವ ಹಕ್ಕನ್ನು ಗೌರವಿಸುವಂತೆ ಮತ್ತು ದುರ್ಬಳಕೆಗಳ ಕುರಿತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವಂತೆ ಅವರು ಭಾರತೀಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಶಿಕ್ಷಣ ವ್ಯವಸ್ಥೆ ಮತ್ತು ಇತ್ತೀಚಿಗೆ ಮತದಾರರ ಪಟ್ಟಿಗಳಲ್ಲಿ ಹೆಸರುಗಳ ಅಳಿಸುವಿಕೆಗೆ ಸಂಬಂಧಿಸಿದ ಸರಕಾರದ ನಿರ್ಧಾರಗಳ ವಿರುದ್ಧ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರು ಎಂದು ತಜ್ಞರು ತಿಳಿಸಿದ್ದಾರೆ. ಮುಸ್ಲಿಮ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಸೇರಿದ 13 ಕೋಟಿ ಜನರು ತಮ್ಮ ಮತದಾನ ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂಬ ವರದಿಗಳನ್ನು ಅವರು ಉಲ್ಲೇಖಿಸಿದ್ದಾರೆ.
ದಿಲ್ಲಿಯಲ್ಲಿ 7,000ಕ್ಕೂ ಹೆಚ್ಚು ಯುವಜನರು, ಪತ್ರಕರ್ತರು, ಮಾನವ ಹಕ್ಕುಗಳ ರಕ್ಷಕರು ಮತ್ತು ರಾಜಕೀಯ ಪಕ್ಷಗಳ ಸದಸ್ಯರನ್ನು ವಶಕ್ಕೆ ಪಡೆದು ದೂರದ ಬಂಧನ ಕೇಂದ್ರಗಳಿಗೆ ಕರೆದೊಯ್ಯಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಅವರ ಮೊಬೈಲ್ ಫೋನ್ಗಳು ಮತ್ತು ಪ್ರತಿಭಟನೆಗೆ ಸಂಬಂಧಿತ ಸಾಮಗ್ರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಪ್ರತಿಭಟನಾ ನಾಯಕರು ಸೇರಿದಂತೆ ಹೆಚ್ಚಿನವರನ್ನು 24 ಗಂಟೆಗಳ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ತಜ್ಞರು ಹೇಳಿದ್ದಾರೆ. ಪ್ರತಿಭಟನೆಗಳ ಸಮಯದಲ್ಲಿ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳದ ಆರೋಪಗಳ ಕುರಿತೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.