×
Ad

ಮುಂದಿನ 24-36 ಗಂಟೆಗಳಲ್ಲಿ ಭಾರತ ದಾಳಿ ನಡೆಸಲಿದೆ: ಪಾಕ್ ಸಚಿವ

Update: 2025-04-30 08:45 IST

PC: screengrab/x.com/TararAttaullah

ಇಸ್ಲಾಮಾಬಾದ್: ಮುಂದಿನ 24-36 ಗಂಟೆಗಳಲ್ಲಿ ಭಾರತ ತನ್ನ ಭೂಭಾಗದ ಮೇಲೆ ದಾಳಿ ನಡೆಸುತ್ತದೆ ಎನ್ನುವುದಕ್ಕೆ ವಿಶ್ವಾಸಾರ್ಹ ದಾಖಲೆಗಳಿವೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲಾ ತರಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

"ಪಹಲ್ಗಾಮ್ ಘಟನೆಯಲ್ಲಿ ಷಾಮೀಲಾಗಿರುವ ಬಗ್ಗೆ ಆಧಾರ ರಹಿತ ಮತ್ತು ಸುಳ್ಳು ಆರೋಪ ಹೊರಿಸಿ ಪಾಕಿಸ್ತಾನದ ಮೇಲೆ ಮುಂದಿನ 24-36 ಗಂಟೆಗಳಲ್ಲಿ ಸೇನಾ ಕಾರ್ಯಾಚರಣೆ ಕೈಗೊಳ್ಳಲಿದೆ ಎಂಬ ವಿಶ್ವಾಸಾರ್ಹ ಗುಪ್ತಚರ ಮಾಹಿತಿಗಳಿವೆ" ಎಂದು ತರಾರ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಪಾಕಿಸ್ತಾನ ಸ್ವತಃ ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರ. ಇಂಥ ಎಲ್ಲ ಬಗೆಯ ಹಿಂಸಾಚಾರವನ್ನು ಪಾಕಿಸ್ತಾನ ಖಂಡಿಸುತ್ತಾ ಬಂದಿದೆ. ಆದರೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್ 22ರಂದು ನಡೆದ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ವಿರುದ್ಧ ಭಾರತವು ಸ್ವಯಂಘೋಷಿತ ನ್ಯಾಯಮೂರ್ತಿಯಂತೆ ಆರೋಪ ಮಾಡುತ್ತಿದೆ ಎಂದು ವಿವರಿಸಿದ್ದಾರೆ.

ಈ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಜೀವ ಕಳೆದುಕೊಂಡಿದ್ದು, ಇದು ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿಸಲು ಕಾರಣವಾಗಿದೆ.

"ಜವಾಬ್ದಾರಿಯುತ ದೇಶವಾಗಿ ಪಾಕಿಸ್ತಾನ, ಮುಕ್ತ ಮನಸ್ಸಿನಿಂದ ಸತ್ಯವನ್ನು ದೃಢಪಡಿಸಲು ತಟಸ್ಥ ತಜ್ಞರ ಸಮಿತಿಯಿಂದ ವಿಶ್ವಾಸಾರ್ಹ, ಸ್ವತಂತ್ರ ಮತ್ತು ಪಾರದರ್ಶಕ ತನಿಖೆ ನಡೆಸುವ ಭರವಸೆಯನ್ನು ನೀಡಿತ್ತು. ದುರಾದೃಷ್ಟವಶಾತ್ ಕಾರಣಗಳನ್ನು ಹುಡುಕುವ ಬದಲು ಭಾರತ ಅತಾರ್ಕಿಕ ಮತ್ತು ಸಂಘರ್ಷದ ಅಪಾಯಕಾರಿ ಮಾರ್ಗವನ್ನು ತುಳಿದಿದೆ. ಇದು ಈ ಪ್ರದೇಶದ ಮತ್ತು ಅದರಾಚೆಗೆ ವಿನಾಶಕಾರಿ ಪರಿಣಾಮವನ್ನು ಉಂಟುಮಾಡಲಿದೆ" ಎಂದು ಎಚ್ಚರಿಸಿದ್ದಾರೆ.

ಭಾರತ ನಡೆಸುವ ಯಾವುದೇ ಸೇನಾ ದಾಳಿಗೆ ಪಾಕಿಸ್ತಾನ ಸೂಕ್ತ ಪ್ರತ್ಯುತ್ತರ ನೀಡಲಿದೆ ಹಾಗೂ ತನ್ನ ಭೂಭಾಗದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಕಾಪಾಡಿಕೊಳ್ಳಲು ದೇಶ ಆದ್ಯತೆ ನೀಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News